124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಹಿತ್ತಲ ಗಿಡ ಮದ್ದಲ್ಲ ಎಂಬ ಗಾದೆಗೆ ಉದಾಹರಣೆಯಾಗಿ ನಮ್ಮ ಸುತ್ತಮುತ್ತಲಿನಲ್ಲೇ ಅನೇಕ ಉದಾಹರಣೆಗಳು ದೊರೆಯುತ್ತವೆ. ಆದರೆ ಅದು ಅಮೂಲ್ಯ ಮದ್ದು ಹೌದು ಎಂದು ತಿಳಿಯಲು, ತಿಳಿಸಲು ಸಹೃದಯತೆ ಬೇಕಾಗುತ್ತದೆ. ಅಂಥ ಸಹೃದಯ ಮನೋಭಾವದ ಮಿತ್ರ ಅಪೂರ್ವ ಅಜ್ಜಂಪುರ  ಅವರು ಈ ಸಂಚಿಕೆಯಲ್ಲಿ ಅಪರೂಪದ ವಿದ್ವಾಂಸರನ್ನು ಸೂಕ್ತ ಮತ್ತು ಆಕರ್ಷಕ ಶೀರ್ಷಿಕೆಯೊಡನೆ ಪರಿಚಯಿಸಿದ್ದಾರೆ. ಅವರೇ ಅಜ್ಜಂಪುರ ಸಮೀಪದ ಗೌರಾಪುರದ. ಶ್ರೀ ಗೌ.ಮ. ಉಮಾಪತಿ ಶಾಸ್ತ್ರೀ.

ಪ್ರಾಚೀನ ಗ್ರಂಥ ಸಂಪಾದನೆಯು ವಿದ್ವತ್ತನ್ನು ಬೇಡುತ್ತದೆ, ನಿಜ. ಅದೇ ಹೊತ್ತಿಗೆ ಅಂಥ ಸಾಹಿತ್ಯದಲ್ಲಿ ಆಸಕ್ತಿಯಿರುವವರಿಗೆ, ಉಮಾಪತಿಯವರಿದ್ದ ಕಾಲದಲ್ಲಿ ಈಗಿನ ಸೌಲಭ್ಯಗಳು ಇರಲಿಲ್ಲ. ಆದರೆ ಗ್ರಂಥ ಸಂಪಾದನೆಯಂಥ ಕ್ಲಿಷ್ಟಕಾರ್ಯದ ಬಗ್ಗೆ ಸಂಶೋಧಕರು ಇರುತ್ತಿದ್ದರು. ಅವರ ನೆರವು, ಮಾರ್ಗದರ್ಶನಗಳು ದೊರೆಯುತ್ತಿದ್ದ ದಿನಗಳು ಅವು. ಅದೇ ಪ್ರವೃತ್ತಿಯು ಇಂದಿಗೂ ಮುಂದುವರೆದಿರುವುದು ಅಭಿನಂದನೀಯ, ಶಾಸ್ತ್ರಿಗಳನ್ನು ಕುರಿತು ಅಧ್ಯಯನ ಮಾಡಿ ಪಿ.ಎಚ್.ಡಿ. ಪ್ರಬಂಧ ಮಂಡಿಸಿರುವ ಡಾ. ಕಾವ್ಯರ ಕೊಡುಗೆಯೂ ದೊಡ್ಡದು. ಉಮಾಪತಿ ಶಾಸ್ತ್ರಿಗಳ ಬದುಕು-ಬರಹಗಳನ್ನು ದಾಖಲಿಸುವ ಉಪಯುಕ್ತ ಕಾರ್ಯಮಾಡಿದ್ದಾರೆ. ಅವರ ಶ್ರಮ, ಆಸಕ್ತಿಗಳು ಅಭಿನಂದನೀಯ. ಅವರು ಅಜ್ಜಂಪುರ ಸಮೀಪದ ಹೊಸದುರ್ಗ ತಾಲೂಕಿನ  ಜೋಡಿಶ್ರೀರಂಗಾಪುರ ಗ್ರಾಮಕ್ಕೆ ಸೇರಿದವರು.

ಉಮಾಪತಿ ಶಾಸ್ತ್ರಿಗಳು ಗೌರಾಪುರದವರಾದರೂ ಅವರ ಕರ್ಮಭೂಮಿ ಉತ್ತರ ಕರ್ನಾಟಕ, ಕರಾವಳಿಗಳವರೆಗೆ ವ್ಯಾಪಿಸಿತ್ತು. ಇಂಥ ಅಪರೂಪದ ವ್ಯಕ್ತಿತ್ವ ಹೊಂದಿದ ವಿದ್ವಾಂಸರನ್ನು ಸ್ಮರಿಸಿರುವ ಸಚಿತ್ರ ಲೇಖನವನ್ನು ಗೆಳೆಯ ಶ್ರೀ ಅಪೂರ್ವ ಸಿದ್ಧಪಡಿಸಿಕೊಟ್ಟಿದ್ದಾರೆ. ಅವರಿಗೆ ಕೃತಜ್ಞತೆಗಳು.

-ಶಂಕರ ಅಜ್ಜಂಪುರ

ಸಂಪಾದಕ,

ಅಂತರಜಾಲದಲ್ಲಿ ಅಜ್ಜಂಪುರ

0000000000000000000000000000000000000000000000000


ಮೃತ್ತಿಕೆಯೊಳಗಣ ಅಪರೂಪದ ವಜ್ರ -
ಶ್ರೀ ಗೌ.ಮ. ಉಮಾಪತಿ ಶಾಸ್ತ್ರೀ

ಲೇಖಕ: ಅಪೂರ್ವ ಅಜ್ಜಂಪುರಶ್ರೀ ಗೌ.ಮ. ಉಮಾಪತಿ ಶಾಸ್ತ್ರೀ

ಎಂಬತ್ತರ ದಶಕದ ಪ್ರಾರಂಭದಲ್ಲಿ(1982-83) ಅಜ್ಜಂಪುರದ ಪುರಸಭಾ ಭವನದಲ್ಲಿ ಒಂದು ಕಾರ್ಯಕ್ರಮವಿದ್ದ ನೆನಪು. ಆ ಸಂದರ್ಭದಲ್ಲಿ ಯೋಗಾಯೋಗವೆಂಬಂತೆ ನಾನು ಆ ಕಾರ್ಯಕ್ರಮಕ್ಕೆ ಹೋಗಿದ್ದೆ. ಅಂದು ಒಬ್ಬ ಹಿರಿಯ ವ್ಯಕ್ತಿ ಉಪನ್ಯಾಸ ಮಾಡುತ್ತಿದ್ದರು. "ಈ ಊರಿನ ಸಮೀಪದ ಆಸಂದಿ ಗ್ರಾಮವು ಒಂದು ಕಾಲದಲ್ಲಿ ಗಂಗರ ರಾಜಧಾನಿಯಾಗಿತ್ತು. ಆ ರಾಜವಂಶದವರು ಆಸಂದಿ ಗಂಗರೆಂದು ಖ್ಯಾತಿಯಾಗಿದ್ದರು. ಅವರ ಆಡಳಿತಕ್ಕೆ ಒಳಪಟ್ಟ ಪ್ರದೇಶಕ್ಕೆ ಆಸಂದಿ 500 ಎಂದು ಕರೆಯುತ್ತಿದ್ದರು. ಆಸಂದಿ ಗಂಗರ ಆಡಳಿತಕ್ಕೆ ಐಸೂರು ಗ್ರಾಮಗಳು ಒಳಪಟ್ಟಿದ್ದವು ಎಂದು ವಿವರಿಸಿದ್ದರು.  ಈ ಮಾತುಗಳನ್ನು ಕೇಳಿದಂದಿನಿಂದ ಗೌ.ಮ. ಉಮಾಪತಿ ಶಾಸ್ತ್ರಿಗಳ ಹೆಸರು ನನ್ನ ನೆನಪಿನಲ್ಲಿ ಚಿರಸ್ಥಾಯಿಯಾಗಿ ಉಳಿಯಿತು. ಆಸಂದಿಯ ಗತ ಇತಿಹಾಸದ ಮಾತು ಬಂದಾಗಲೆಲ್ಲ ಗೌ.ಮ. ಉಮಾಪತಿ ಶಾಸ್ತ್ರಿಯವರನ್ನು ನೆನೆಯುತ್ತಿದ್ದೆ. 
ದು ಖ್ಯಾತರಾಗಿದ್ದರು. ಅವರ ಆಡಳಿತಕ್ಕೆ ಒಳಪಟ್ಟ ಪ್ರದೇಶಕ್ಕೆ ಆಸಂದಿ-೫೦೦ ಎಂದು ಕರೆಯುತ್ತಿದ್ದರು. ಆಸಂದಿ ಗಂಗರ ಆಡಳಿತಕ್ಕೆ ಐನೂರು ಗ್ರಾಮಗಳು ಒಳಪಟ್ಟಿದ್ದವು..." ಎಂದು ವಿವರಿಸಿದ್ದರು. ಈ ಮಾತುಗಳನ್ನುಕೇಳಿದಂದಿನಿದ ಗೌ.ಮ. ಉಮಾಪತಿ ಶಾಸ್ತ್ರೀಗಳ ಹೆಸರು ನನ್ನ ನೆನಪಿನಲ್ಲಿ ಚಿರಸ್ಥಾಯೀ ಆಗಿ ಉಳಿಯಿತು. ಆಸಂದಿಯ ಗತ ಇತಿಹಾಸದ ಮಾತು ಬಂದಾಗಲೆಲ್ಲ ಗೌ.ಮ. ಉಮಾಪತಿ ಶಾಸ್ತ್ರೀ ಅವರನ್ನು ನೆನೆಯುತ್ತಿದ್ದೆ.

 ಆ ಗಣ್ಯ ವ್ಯಕ್ತಿಯ ಬಗ್ಗೆ ತಿಳಿಯುತ್ತಾ ಹೋದಂತೆ ಅಚ್ಚರಿಯ ಮೇಲೆ ಅಚ್ಚರಿಯ ಸಂಗತಿಗಳು ಅನಾವರಣಗೊಂಡವು. ಅವರು ಉಪನ್ಯಾಸ ಮಾಡುವಾಗ ಒಂದು ವಿಷಯವನ್ನು ಪ್ರಸ್ತಾಪಿಸಿದ್ದರು. ಆಗ ಶ್ರೀಕ್ಷೇತ್ರ ಧರ್ಮಸ್ಥಳದ ಹಸ್ತಪ್ರತಿ ಭಂಡಾರದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ಆವರು ಹೇಳಿದ ನೆನಪು. ಅವರು ಅಲ್ಲಿ ಹೋಗಿ ಹಾಗೆ ಇರಲು ಕಾರಣ : ಗೌ.ಮ. ಉಮಾಪತಿ ಶಾಸ್ತ್ರೀಯವರಿಗೆ ಹಸ್ತಪ್ರತಿ ಹಾಗೂ ಗ್ರಂಥ ಸಂಪಾದನೆಗಳಲ್ಲಿ ಇದ್ದ ಆಸಕ್ತಿ, ಆಳವಾದ ಜ್ಞಾನ ಹಾಗೂ ಆ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆಗಳು.

ಪ್ರಾಚೀನ ಗ್ರಂಥ ಸಂಗ್ರಹ

 ಪ್ರಾಚೀನ ಹಸ್ತಪ್ರತಿಗಳ ಸಂಶೋಧನೆ, ಅಧ್ಯಯನ ಮತ್ತು ಗ್ರಂಥ ಸಂಪಾದನೆಗಳಿAದ ಯಾವದೇ ದೇಶದ, ನಾಡಿನ ಸಂಸ್ಕೃತಿ ಮತ್ತು ಅವುಗಳ ವಿಕಾಸದ ವಿವಿಧ ಹಂತಗಳನ್ನು ಗುರುತಿಸಬಹುದು. ಅಲ್ಲದೆ ಆಯಾ ನಾಡಿನ, ವಿವಿಧ ಕಾಲಘಟ್ಟದಲ್ಲಿದ್ದ ಸಾಹಿತ್ಯ, ಜ್ಞಾನ ಹಾಗೂ ಇತಿಹಾಸ-ಪರಂಪರೆಗಳ ದಾಖಲೆಗಳು ಅವುಗಳಲ್ಲಿ ದೊರೆಯುತ್ತವೆ. ಪ್ರಾಚೀನ ಹಸ್ತಪ್ರತಿಗಳು ವಿವಿಧ ರೂಪಗಳಲ್ಲಿ ಕಂಡುಬರುತ್ತವೆ. ತಾಡೋಲೆ, ಕೋರಿಕಾಗದ ಕಡತಗಳು ಮತ್ತು ಕಲ್ಲಚ್ಚು ಪ್ರತಿಗಳು ಆಸಕ್ತ ವ್ಯಕ್ತಿಗಳ, ಸಂಸ್ಥೆಗಳ ಹಾಗೂ ಮಠಮಾನ್ಯಗಳ ಸಂಗ್ರಹಗಳಲ್ಲಿ ಕಂಡುಬAದಿವೆ. ಹೀಗೆ ವ್ಯಕ್ತಿಗತವಾಗಿ ಸಂಗ್ರಹಿಸಿ, ಅಧ್ಯಯನ ಕೈಗೊಂಡ ಮಹತ್ವದ ವಿದ್ವಾಂಸರಲ್ಲಿ ಗೌ.ಮ. ಉಮಾಪತಿ ಶಾಸ್ತ್ರೀಗಳು ಒಬ್ಬರು. ಅವರು ಎರಡು ಸಾವಿರಕ್ಕೂ ಅಧಿಕ ಪ್ರಾಚೀನ ಹಸ್ತಪ್ರತಿಗಳ ಸಂಗ್ರಹ ಹಾಗೂ ನಾಲ್ಕು ಗ್ರಂಥಗಳ ಸಂಪಾದನೆಯನ್ನು ಮಾಡಿದ್ದಾರೆ. ಬಾಗಲಕೋಟೆಯ ಅವರ ಸ್ವನಿವಾಸ 'ಶಾರದಾ ನಿಲಯ'ದಲ್ಲಿ ಸಾವಿರಾರು ಹಸ್ತಪ್ರತಿಗಳು ಮತ್ತು ಕನ್ನಡ-ಹಿಂದಿ-ಇಗ್ಲಿಷ್ ಭಾಷೆಗಳ ಹತ್ತು ಸಾವಿರ ಗ್ರಂಥಗಳಿದ್ದವು. ಈ ಸಂಗ್ರಹದಿದ ನಾಡಿನ ಅನೇಕ ವಿದ್ವಾಂಸರು ಪ್ರಯೋಜನವನ್ನು ಪಡೆದಿದ್ದಾರೆ.

 ಬಾಗಲಕೋಟೆಯ ಬಸವೇಶ್ವರ ಕಾಲೇಜಿನ ಹಿಂದಿ ಪ್ರಾಧ್ಯಾಪಕರ ಸ್ಥಾನದಿಂದ ೧೯೮೨ ರಲ್ಲಿ ನಿವೃತ್ತರಾದ ನಂತರ ತಮ್ಮ ಪ್ರಾಚೀನ ಹಸ್ತಪ್ರತಿಗಳ ಸಂಪತ್ತನ್ನು ಧರ್ಮಸ್ಥಳ ಶ್ರೀಕ್ಷೇತ್ರಕ್ಕೆ ಒಪ್ಪಿಸುವ ನಿರ್ಧಾರ ತಳೆಯುತ್ತಾರೆ. ಧರ್ಮದರ್ಶಿ ವೀರೇಂದ್ರ ಹೆಗ್ಗಡೆಯವರು ತುಂಬು ಹೃದಯದಿಂದ ಒಪ್ಪಿ, ತಮ್ಮ ಅಮೂಲ್ಯ ಸಂಗ್ರಹದ ಜೊತೆ ಧರ್ಮಸ್ಥಳಕ್ಕೆ ತಾವೂ ಬರಬೇಕೆಂದು ಶಾಸ್ತ್ರೀಗಳನ್ನು ಆಹ್ವಾನಿಸುತ್ತಾರೆ. "ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದ ಮುಖ್ಯಸ್ಥರಾಗಿ ಜವಾಬ್ದಾರಿಯನ್ನು ೨೦ ವರ್ಷಗಳ ಕಾಲ ಅತ್ಯಂತ ಪರಿಶ್ರಮ, ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ನಿಭಾಯಿಸಿದ ಶ್ರೇಯಸ್ಸು ಶಾಸ್ತ್ರೀಯವರಿಗೆ ಸಲ್ಲುತ್ತದೆ. ಹೀಗಾಗಿ ಧರ್ಮಸ್ಥಳದ ಹಸ್ತಪ್ರತಿ ಭಂಡಾರವು ರಾಜ್ಯದಲ್ಲಿಯೇ ಒಂದು ಮಾದರಿ ಹಸ್ತಪ್ರತಿ ಭಂಡಾರವಾಗಿ ರೂಪುಗೊಂಡಿದೆ. ಕನ್ನಡ, ಸಂಸ್ಕೃತ, ತುಳು, ತಿಗಳಾರಿ, ಮಲೆಯಾಳಂ, ತೆಲುಗು ಭಾಷೆಗಳ ತಾಡೋಲೆ, ಕೋರಿಕಾಗದ, ಕಡತ ಹಾಗೂ ದಾಖಲು ರೂಪದ ಹಸ್ತಪ್ರತಿಗಳು ಇಲ್ಲಿನ ಸಂಗ್ರಹದಲ್ಲಿವೆ. ಈ ಸಂಗ್ರಹದ ಜೊತೆಗೆ ಹಸ್ತಪ್ರತಿಗಳ ಸಂಪೂರ್ಣ ಮಾಹಿತಿಯನ್ನು ನೀಡುವ ಸೂಚಿ ಸಂಪುಟಗಳನ್ನು ಶಾಸ್ತ್ರೀಯವರು ಸಿದ್ಧಪಡಿಸಿ ಸಂಗ್ರಹಿಸಿದ್ದಾರೆ. ಸೂಚಿ ಸಂಪುಟಗಳು ಶಾಸ್ತ್ರೀಯವರ ಹಸ್ತಪ್ರತಿ ವಿದ್ವತ್ತಿಗೆ ನಿದರ್ಶನವಾಗಿವೆ." ಎಂದು ಡಾ.ಎಫ್.ಬಿ. ಹಳ್ಳಿಕೇರಿಯವರು ಕಂಠಪತ್ರ-೩ರ ತಮ್ಮ ಒಂದು ಲೇಖನದಲ್ಲಿ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.

 ಸಾಹಿತ್ಯ ಕ್ಷೇತ್ರದಲ್ಲಿ ಅವರ ಸಾಧನೆ : ಗೌ.ಮ. ಉಮಾಪತಿ ಶಾಸ್ತ್ರೀಯವರು ಬರೆದ ಅನೇಕ ಬಿಡಿ ಲೇಖನಗಳನ್ನು ಸಂಗ್ರಹಿಸಿ `ಚಿಂತಾಮಣಿ' ಎಂಬ ಹೆಸರಿನಲ್ಲಿ ಡಾ. ಗುರುಲಿಂಗ ಕಾಪಸೆಯವರು ೨೦೧೦ ರಲ್ಲಿ ಸಂಪಾದಿಸಿಕೊಟ್ಟಿದ್ದಾರೆ. ಆನಂದಪುರದ ಮಲೆನಾಡ ವೀರಶೈವ ಅಧ್ಯಯನ ಸಂಸ್ಥೆಯು ಈ ಗ್ರಂಥವನ್ನು ಪ್ರಕಟಪಡಿಸಿದೆ. "ಉಪನಿಷತ್ ಚಿಂತನ, ಯೋಗ ಸಂಪದ, ಹೊರನಾಡುಗಳಲ್ಲಿ ಕನ್ನಡಿಗರಸರು, ಹಸ್ತಪ್ರತಿ ಪ್ರಸ್ತುತಿ, ಶಾಸನ ವಿವೇಚನೆ, ಶಿಲ್ಪಕಲ್ಪ, ಸ್ಮೃತಿವಿವೃತಿ, ಕರ್ನಾಟಕದಲ್ಲಿ ಬೆಳೆದುಬಂದ ಹಿಂದಿ, ವಿವಿಧ ವಿವರ ಹೀಗೆ ಒಂಬತ್ತು ಶೀರ್ಷಿಕೆಗಳಲ್ಲಿ ೬೪ ಲೇಖನಗಳು ಅಡಕಗೊಂಡ ವಿಚಾರಗಳನ್ನು ಚರ್ಚಿಸಲಾಗಿದೆ. ಈ ಶೀರ್ಷಿಕೆಗಳು ಶಾಸ್ತ್ರೀಯವರ ಅಧ್ಯಯನದ ವೈವಿಧ್ಯತೆ, ಓದಿನ ವ್ಯಾಪಕತೆ, ಬಹುಭಾಷಾ ತಜ್ಞತೆ, ವಿಷಯದ ವಿಸ್ತಾರತೆ, ಬರವಣಿಗೆಯ ಕೌಶಲ್ಯಗಳಿಗೆ ಸಾಕ್ಷಿಯಂತಿವೆ" ಎಂದು ಡಾ. ಎಫ್.ಬಿ. ಹಳ್ಳಿಕೇರಿ ಈಗಾಗಲೇ ಉಲ್ಲೇಖಿಸಿದ ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಇತರೆ ಕೃತಿಗಳು : "ಉಮಾಪತಿ ಶಾಸ್ತ್ರೀಯವರು ಹಸ್ತಪ್ರತಿ ಗ್ರಂಥ ಸಂಪಾದನ ಕಾರ್ಯದ ಜೊತೆಗೆ ಕೆಲವು ಸಂಪುಟಗಳ ಸಂಪಾದನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನಾಡಿನ ಅನೇಕ ಉತ್ಸವ, ಮಠಾಧಿಪತಿಗಳ ಪಟ್ಟಾಭಿಷೇಕ-ಷಷ್ಟಿಪೂರ್ತಿ-ಸ್ಮರಣೆಗಳ ಸಂದರ್ಭದಲ್ಲಿ ಆಕರಯೋಗ್ಯ ಸಂಪುಟಗಳನ್ನು ಸಿದ್ಧಪಡಿಸಿರುವರು" ಎಂದು ಡಾ. ಎಫ್.ಬಿ. ಹಳ್ಳಿಕೇರಿಯವರು ತಮ್ಮ ಒಂದು ಲೇಖನದಲ್ಲಿ ಹೇಳಿದ್ದಾರೆ.

ಡಾ. ಎಂ. ಕಾವ್ಯಾ

 ಶಾಸ್ತ್ರೀಯವರ ಸಾಧನೆಯ ಕುರಿತು ಪಿ.ಎಚ್.ಡಿ. ಮಾಡಿದ ಡಾ. ಕಾವ್ಯ ಎಂ. : ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದ ನಂತರ ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಗೌ.ಮ. ಉಮಾಪತಿ ಶಾಸ್ತ್ರೀಗಳ ಗ್ರಂಥ ಸಂಪಾದನೆಯ ವೈಧಾನಿಕತೆಯ ವಿಷಯ ಕುರಿತು ಸಂಶೋಧನೆ ಮಾಡಿ, ಪಿ.ಎಚ್.ಡಿ. ಪಡೆದಿದ್ದಾರೆ. ಈ ಸಾಧನೆಯ ಜೊತೆಗೆ ಗೌ.ಮ.ಉಮಾಪತಿ ಶಾಸ್ತ್ರೀಗಳ ಬದುಕು, ಹಸ್ತಪ್ರತಿ-ಗ್ರಂಥ ಸಂಪಾದನೆಗೆ ಗೌ.ಮ.ಉಮಾಪತಿ ಶಾಸ್ತ್ರೀ ಅವರ ಕೊಡುಗೆ ಹಾಗೂ ಶಾಸ್ತ್ರೀಗಳ ಬಿಡಿ ಲೇಖನಗಳ ಸಂಗ್ರಹದ `ಚಿಂತಾಮಣಿ' ಕುರಿತು ಅವಲೋಕನವನ್ನು ಮಾಡಿದ್ದಾರೆ. ಡಾ.ಕಾವ್ಯ ಅವರ ಕುರಿತು ಇಲ್ಲಿ ಪರಿಚಯಿಸಲು ಕಾರಣವಿದೆ. ಗೌ.ಮ. ಉಮಾಪತಿ ಶಾಸ್ತ್ರೀಯವರ ಬದುಕು, ಸಾಧನೆ ಮತ್ತು ಪ್ರಾಚೀನ ಹಸ್ತಪ್ರತಿಗಳ ಬಗ್ಗೆ ಶಾಸ್ತ್ರೀಗಳಿಗಿದ್ದ ಆಸಕ್ತಿ-ಪ್ರೀತಿ-ಕಾಳಜಿಗಳ ಬಗ್ಗೆ ಈ ಲೇಖಕ ತಿಳಿದದ್ದು ಕಾವ್ಯ ಅವರಿಂದಲೇ.

ಶಾಸ್ತ್ರೀಗಳ ಬದುಕಿನ ಸಂಕ್ಷಿಪ್ತ ಪರಿಚಯ :

ಶಾಸ್ತ್ರೀಯವರ ಬದುಕು ಸಾಮಾನ್ಯ ಬದುಕಿಗಿಂತ ವಿಭಿನ್ನ ; ವಿಚಿತ್ರ ತಿರುವುಗಳಿಂದ ಕೂಡಿದ ಜೀವನ. ಅಜ್ಜಂಪುರ ಸಮೀಪದ ಗೌರಾಪುರದ ದೊಡ್ಡ ಮಲ್ಲಯ್ಯ ಮತ್ತು ಮರುಳಮ್ಮ ದಂಪತಿಗಳ ಪುತ್ರನಾಗಿ ೧೯೨೫ ಏಪ್ರಿಲ್ ೧೫ ರಂದು ಜನನ.

7-8 ವರ್ಷದ ಬಾಲ್ಯದಲ್ಲೇ ಬಾದಾಮಿ ಸಮೀಪದ ಶಿವಯೋಗಮಂದಿರಕ್ಕೆ ಸಂಸ್ಕೃತ ಮತ್ತು ಪ್ರಾಥಮಿಕ ಶಿಕ್ಷಣಕ್ಕಾಗಿ ಸೇರ್ಪಡೆ.

ಅಧ್ಯಯನನಿರತ ಶಾಸ್ತ್ರಿಗಳು

ಮಠದ ಉತ್ತರಾಧಿಕಾರಿಯಾಗಿ ಘೋಷಣೆ : 1932ರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಮುರುಘಾಮಠದ ಶ್ರೀಸಚ್ಚಿದಾನಂದ ಸ್ವಾಮೀಜಿಗಳಿಂದ ಏಳು ವರ್ಷಗಳ ಬಾಲಕ ಶಾಸ್ತ್ರೀಯನ್ನು ಮಠದ `ಮರಿದೇವರು' ಎಂದು ಘೋಷಣೆ. ಗಿರಿಯಾಪುರದಲ್ಲಿ ಕುಮಾರಾಶ್ರಮದ ಸಖರಾಯಪಟ್ಟಣದ ಸದಾಶಿವ ಶ್ರೀಗಳಿಂದ ಗುರುಗಳಿಂದ ಶಿವದೀಕ್ಷೆ, ನಂತರ ಉನ್ನತ ಶಿಕ್ಷಣಕ್ಕಾಗಿ ಹನ್ನೆರಡು ವರ್ಷದ ಬಾಲಕ ಶಾಸ್ತ್ರೀಯವರನ್ನು ಕಾಶಿಗೆ ಕಳುಹಿಸುತ್ತಾರೆ. ಕಾಶಿಯ ಸಂಸ್ಕೃತ ಮಹಾವಿದ್ಯಾಲಯದಲ್ಲಿ(ಆಗ ಕ್ವೀನ್ಸ್ ಕಾಲೇಜು ಮುಂದೆ ಸಂಪೂರ್ಣಾನಂದರ ಪ್ರಯತ್ನದಿಂದಾಗಿ ಸಂಸ್ಕೃತ ವಿಶ್ವವಿದ್ಯಾಲಯವಾಯಿತು) ನ್ಯಾಯಶಾಸ್ತ್ರದಲ್ಲಿ ಪ್ರಾವೀಣ್ಯತೆ ಪಡೆದರು. ಹನ್ನೆರಡು ವರ್ಷಗಳ ಅವಧಿಯಲ್ಲಿ ಸಂಸ್ಕೃತ, ಇಂಗ್ಲಿ಼ಷ್ ಉನ್ನತ ಶಿಕ್ಷಣ. ಪ್ರಯಾಗದ ಹಿಂದಿ ವಿವಿಯಿಂದ ಸಾಹಿತ್ಯ ರತ್ನ ಪಡೆದರು.

ಕಾಶಿಯಲ್ಲಿದ್ದಾಗ 1942ರ `ಕ್ವಿಟ್ ಇಂಡಿಯಾ' ಚಳುವಳಿಯಲ್ಲಿ ಶಾಸ್ತ್ರೀಯವರೂ ಭಾಗಿಯಾಗಿದ್ದರು. ಅದೇ ಸಂದರ್ಭದಲ್ಲಿ ಸ್ಫೋಟವಾದ ಹಿಂದು-ಮುಸ್ಲಿಮ್ ಗಲಾಟೆಯಲ್ಲಿ ಯಾರೋ ಆಸಿಡ್ ಎರಚಿದ್ದು ಶಾಸ್ತ್ರೀಯವರ ಮುಖದ ಮೇಲೆ ಬಿದ್ದಿತು. ಅದರ ಪರಿಣಾಮವಾಗಿ ಅವರ ಮುಖ ಒಂದಷ್ಟು ವಿರೂಪಗೊಂಡಿತು. ಮುಂದೆ ಅದರಿಂದಾಗಿ ಆನಂದಪುರ ಮಠದ ಉತ್ತರಾಧಿಕಾರವೂ ತಪ್ಪಿತು. 1937 ರಿಂದ ಪ್ರಾರಂಭಿಸಿದ ಪ್ರೌಢ ಶಿಕ್ಷಣ, ಪದವಿ ಹಾಗೂ ಸ್ನಾತಕೋತ್ತರ ಪದವಿಗಳನ್ನು 1949ರ ಅವಧಿಯಲ್ಲಿ ಮುಗಿಸುತ್ತಾರೆ.

ಮತ್ತೆ ಶಿವಯೋಗಮಂದಿರಕ್ಕೆ : ಬಾದಾಮಿ ಸಮೀಪದ ಶಿವಯೋಗಮಂದಿರಕ್ಕೆ ಹಿಂತಿರುಗಿದ 1950 ರಿಂದ ಸಂಸ್ಕೃತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಾರೆ. ಸಂಸ್ಕೃತದ ಜೊತೆಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ವಟುಗಳಿಗೆ ಕಲಿಸುತ್ತಾರೆ.(ಅದು ಅಲ್ಲಿನ ಸಂಪ್ರದಾಯವಲ್ಲವಾದರೂ). ಮುಂದೆ 1955ರಲ್ಲಿ ಬಾಗಲಕೋಟೆಯ ಬಸವೇಶ್ವರ ಕಾಲೇಜಿನಲ್ಲಿ ಹಿಂದಿ ಪ್ರಾಧ್ಯಾಪಕರಾಗಿ ನಿಯೋಜನೆಗೊಳ್ಳುತ್ತಾರೆ. ಶಿ.ಚ.ನಂದೀಮಠರ ಜೊತೆಗೂಡಿ ಹಸ್ತಪ್ರತಿಗಳ ಅಧ್ಯಯನದಲ್ಲಿ ತೊಡಗುತ್ತಾರೆ. ತಮ್ಮ ನಲವತ್ತನೆಯ ವಯಸ್ಸಿನಲ್ಲಿ ನೀಲಮ್ಮ ಅವರನ್ನು ವಿವಾಹವಾಗುತ್ತಾರೆ. ಬಾಗಲಕೋಟೆಯಲ್ಲಿ ನೆಲೆಸಿದಾಗ ಸ್ವಂತ ಮನೆಯನ್ನು ಹೊಂದುತ್ತಾರೆ.

ಗ್ರಂಥ ಸಂಪಾದನೆ : ನಿಜಗುಣ ಶಿವಯೋಗಿಗಳ ವಿವೇಕ ಚಿಂತಾಮಣಿ(1969), ಸರ್ವಜ್ಞಮೂರ್ತಿಯ ಆಚರಣೆಯ ಸಂಬಂಧದ ವಚನಗಳು1973), ನಿಜಗುಣ ಶಿವಯೋಗಿಗಳ ಮತ್ತೊಂದು ಕೃತಿ ಪಾರಮಾರ್ಥ ಪ್ರಕಾಶಿಕೆ(1974ಮತ್ತು ಸ್ವರವಚನ ಸಂಚಯ(2007) ಈ ನಾಲ್ಕು ಗ್ರಂಥಗಳನ್ನು ಶಾಸ್ತ್ರೀಗಳು ಸಂಪಾದಿಸಿದ್ದಾರೆ.ಮಾಜಿ ಮುಖ್ಯಮಂತ್ರಿ ಶ್ರೀ ನಿಜಲಿಂಗಪ್ಪನವರೊಡನೆ

ಶಾಸ್ತ್ರೀಗಳ ಕಾರ್ಯದ ಬಗ್ಗೆ ಕೆಲವು ಅಭಿಪ್ರಾಯಗಳು :

• "ಗೌ.ಮ. ಉಮಾಪತಿ ಶಾಸ್ತ್ರೀಗಳದ್ದು ಹಸ್ತಪ್ರತಿಗಳ ಸಂಗ್ರಹ, ರಕ್ಷಣೆ ಅವುಗಳ ಓದು, ಸಂಪಾದನೆ ಮುಂತಾದ ವಿದ್ವತ್ ಚಟುವಟಿಕೆಗಳಲ್ಲಿ ಕ್ರಮಬದ್ಧವಾದ ಪದವಿ, ತರಬೇತಿvಯನ್ನು ಪಡೆದವರಲ್ಲವದರೂ ಅಂಥವರಿಗೆ ಕಡಿಮೆ ಅಲ್ಲದ ಸೇವೆಯನ್ನು ಈ ಕ್ಷೇತ್ರಕ್ಕೆ ಸಲ್ಲಿಸಿದ್ದು ಸುಳ್ಳಲ್ಲ." - ಡಾ. ಹಳ್ಳಿಕೇರಿ ಎಫ್.ಟಿ.

• "ಉಮಾಪತಿ ಶಾಸ್ತ್ರೀಗಳು ಸಂಪಾದಿಸಿರುವ ವಿವೇಕ ಚಿಂತಾಮಣಿ ಒಂದು ಬಗೆಯ ಆಹ್ವಾನ. ವಿವೇಕ ಚಿಂತಾಮಣಿಯ ವಿಸ್ತೃತ ಪ್ರಸ್ತಾವನೆಯೇ ಅವರ ಸಂಪಾದನೆಯ ಹೆಗ್ಗುರುತಾಗಿದೆ. ಇನ್ನೂರ ಮೂವತ್ತೆಂಟಕ್ಕೂ ಹೆಚ್ಚು ಪುಟಗಳ ಸುದೀರ್ಘವಾದ ಪ್ರಸ್ತಾವನೆಯನ್ನು ಒಳಗೊಂಡಿದೆ. ಈ ಪ್ರಸ್ತಾವನೆಗಾಗಿಯೇ ನೀಡಿರುವ ಪರಿವಿಡಿಯನ್ನು ಗಮನಿಸಿದರೆ ಪ್ರಸ್ತಾವನೆಯೇ ಒಂದು ಸ್ವತಂತ್ರ ಕೃತಿ ಎನ್ನುವಷ್ಟರ ಮಟ್ಟಿಗೆ ವಿಷಯ ವೈಶಾಲ್ಯತೆಯನ್ನು ಹೊಂದಿದೆ. ಇದರಲ್ಲಿ ನಿಜಗುಣ ಶಿವಯೋಗಿಗಳ ಜೀವನ ಚರಿತ್ರೆ, ಕಾಲ, ಗುರು, ವೀರಶೈವ ವಿಚಾರ ಮುಂತಾದ ಸಂಗತಿಗಳಿಗೆ ಸಂಬAಧಿಸಿದAತೆ ಇದ್ದ ಅನೇಕ ಸಮಸ್ಯೆಗಳಿಗೆ ಉತ್ತರವನ್ನು ಸಮರ್ಥವಾಗಿ ನೀಡಿದ್ದಾರೆ." - ಡಾ. ಕಾವ್ಯ ಎಂ.


ಡಾ. ಶಿವಕುಮಾರ ಸ್ವಾಮಿಗಳೊಡನೆ

ಒಟ್ಟಿನಲ್ಲಿ, "ಶಾಸ್ತ್ರೀಜಿಯವರು ಸಂಪಾದಿಸಿದ ಗ್ರಂಥಗಳು ಬಂದು ನಿಂತ ಮಳೆಯಂತಿದ್ದರೆ, ಅವುಗಳ ಪ್ರಸ್ತಾವನೆಗಳು ನಿಲ್ಲದ ಮರದ ಹನಿಗಳಂತೆ ಜಿಜ್ಞಾಸುಗಳನ್ನು ಆ ಕುರಿತು ಆ ಕುರಿತು ಆಲೋಚನೆಗೆ, ಅನ್ವೇಷಣೆಗೆ ತೊಡಗಿಸುತ್ತವೆ ಎಂಬುದರಲ್ಲಿ ಸಂದೇಹವಿಲ್ಲ." - ಡಾ. ಹಳ್ಳಿಕೇರಿ ಎಫ್.ಟಿ.

 ಶಾಸ್ತ್ರೀಯವರ ಸಮಗ್ರ ಲೇಖನಗಳನ್ನು ಅವಲೋಕನ ಮಾಡಿದ ಮತ್ತೊಬ್ಬ ಕನ್ನಡದ ವಿದ್ವಾಂಸ ಗುರುಲಿಂಗ ಕಾಪಸೆಯವರು ಅವರ ಮಾತುಗಳನ್ನು ಡಾ. ಕಾವ್ಯ ಅವರು ತಮ್ಮ ಲೇಖನದಲ್ಲಿ ಉದ್ಧರಿಸಿದ್ದಾರೆ. "ಈ ಗ್ರಂಥದಲ್ಲಿ ಇತಿಹಾಸವಿದೆ, ಸಂಸ್ಕೃತಿಯ ಚಿಂತನವಿದೆ. ಸಂಶೋಧನೆಯ ಸದಭಿರುಚಿಯಿದೆ. ಸಂಸ್ಕೃತ ಕನ್ನಡ ಹಿಂದಿ ಭಾಷೆಗಳ ಸಹೃದಯ ಅನುಸಂಧಾನವಿದೆ. ತಿಳಿಯಾದ ಮನಂಬುಗುವ, ಸರಸವೂ ಆದ ಕನ್ನಡ ಭಾಷೆಯ ಸೊಗಸಿದೆ. ಇಷ್ಟೆಲ್ಲ ಇರುವುದರ ಜೊತೆಗೆ ಜ್ಞಾನದ ಕ್ಷಿತಿಜವನ್ನು ವಿಸ್ತರಿಸುವ ಹಂಬಲವೂ ಪ್ರೊ.ಶಾಸ್ತ್ರೀಗಳಿಗಿರುವುದು ಕನ್ನಡಿಗರು ಕೃತಜ್ಞತೆಯಿಂದ ನೆನೆಸಿಕೊಳ್ಳಬೇಕಾದ ಸಂಗತಿಯಾಗಿದೆ."

 ಪ್ರಾಚೀನ ಹಸ್ತಪ್ರತಿಗಳ ತಮ್ಮ ಒಡನಾಟವನ್ನು ಶಾಸ್ತ್ರೀಗಳು `ಹುಚ್ಚು ಹವ್ಯಾಸ' ಎಂದು ಕರೆದುಕೊಂಡಿದ್ದಾರೆ. "ಗೌ.ಮ. ಉಮಾಪತಿ ಶಾಸ್ತ್ರೀಗಳ ಬದುಕು ಹಸ್ತಪ್ರತಿಮಯವಾಗಿತ್ತು. ಅವರ ಬದುಕಿನ ಯಾವ ಹಂತಗಳನ್ನು ಗಮನಿಸಿದರೂ ಕೂಡ ಅಲ್ಲಿ ಹಸ್ತಪ್ರತಿಗಳು ಪ್ರವೇಶ ಪಡೆದುಕೊಂಡಿವೆ. ಹಸ್ತಪ್ರತಿಗಳನ್ನು ಮಕ್ಕಳಿಗಿಂತಲೂ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದರು. ಈ ಹಸ್ತಪ್ರತಿ ವ್ಯಾಮೋಹ ಕೋರ್ಟಿನ ಮೆಟ್ಟಿಲೇರಲು ಕಾರಣವಾಯಿತು" ಎನ್ನುತ್ತಾರೆ ಡಾ. ಕಾವ್ಯ.

 ಶಾಸ್ತ್ರೀಗಳು ಅಂಥ ಒಂದು ಘಟನೆಯನ್ನು `ನನ್ನ ಹುಚ್ಚು ಹವ್ಯಾಸ' ಎಂಬ ಲೇಖನದಲ್ಲಿ ಪ್ರಸ್ತಾಪಿಸಿದ್ದಾರೆ. ಆ ಘಟನೆಯ ಪ್ರಸ್ತಾಪ ಹೀಗಿದೆ: "ಒಂದು ಸಲ ಒಬ್ಬ ಕನ್ನಡ ಶಿಕ್ಷಕ ನನಗೆ ಮೈಸೂರು ಅರಮನೆ ಗ್ರಂಥಮಾಲೆಯ ಕೆಲವು ಹಸ್ತಪ್ರತಿಗಳನ್ನು ಕೊಟ್ಟ. ಅವನ್ನು ನಾನು ಬೆಲೆಗೆ ಕೊಂಡುಕೊಂಡೆ. ಅವನು ನಮ್ಮ ಮನೆಯಲ್ಲಿಯೇ ಉಂಡು, ಪ್ರವಾಸದ ಖರ್ಚಿಗೆಂದು ಮೇಲೆ ಹಣ ಪಡೆದು ಹೋಗುತ್ತಿದ್ದ. ನಾನು ಅವನಿಗೆ ೪೦ ರೂಪಾಯಿ ಮಾತ್ರ ಕೊಡಬೇಕಿತ್ತು. ಆ ಪುಸ್ತಕಗಳ ಮೇಲೆ ಅವನಹೆಸರಿನ ರಬ್ಬರ್ ಸಿಕ್ಕಾ ಹಾಕಿತ್ತು. ಅದಕ್ಕಾಗಿ ಅವನು ನಾನು ಕೊಂಡ ಬಗ್ಗೆ ಲಿಖಿತ ರೂಪದಲ್ಲಿ ಬರೆದುಕೊಡಲು ಹೇಳಿದೆ. ಇನ್ನೆರಡು ದಿನಗಳಲ್ಲಿ ಬರುವೆನೆಂದು ಹೇಳಿಹೋದವನು ನನ್ನ ಮೇಲೆ ಕೇಸು ಹಾಕಿದ. ನೂರಾರು ರೂಪಾಯಿ ನನ್ನಿಂದ ಬರಬೇಕಾಗಿದೆಯೆಂದು ತಕರಾರು ಮಾಡಿದ್ದ. ಕೋರ್ಟಿನಿಂದ ನನಗೆ ಸಮನು ಬಂದಿತು. ನ್ಯಾಯಾಧೀಶರ ಮುಂದೆ ನಿಜ ಸಂಗತಿ ಹೇಳಿದೆ. ನಲವತ್ತು ರೂಪಾಯಿಗಳನ್ನು ಸರಕಾರಿ ಖಜಾನೆಗೆ ಕಟ್ಟಿದೆ. ಹೀಗೆ ಕೆಲವೊಂದು ಮಠಾಧೀಶರು ಹಣದಾಸೆಯಿಂದ ನನ್ನನ್ನು ಸತಾಯಿಸಿದ್ದುಂಟು."

 ಒಟ್ಟಾರೆ ಅಜ್ಜಂಪುರ ಸೀಮೆಯ ಗೌರಾಪುರ ಮೂಲದ ಗೌ.ಮ. ಉಮಾಪತಿ ಶಾಸ್ತ್ರೀಗಳ ಸಾಧನೆ-ಜೀವನ ಅನನ್ಯ, ಅಪರೂಪದ್ದು. ಎಲ್ಲಿಂದಲೋ ಎಳವೆಯಲ್ಲೇ ಹೊರಟು, ಎಲ್ಲೆಲ್ಲೋ ಸೇರಿ ಅಸಾಧರಣ ಸಾಧನೆ ಮಾಡಿದರು. ಕೊನೆಗೆ ಕಡಲ ಸಮೀಪವಿರುವ ಕರಾವಳಿಯ ಧರ್ಮಸ್ಥಳದಲ್ಲಿ 20 ವರ್ಷಗಳ ಕಾಲ ನೆಲೆನಿಂತು, ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರಿಗೆ ತಮ್ಮ ಹಸ್ತಪ್ರತಿಗಳ ಸಂಪತ್ತನ್ನು ಕ್ಷೇತ್ರದ ಭಂಡಾರಕ್ಕೆ ಒಪ್ಪಿಸಿದ್ದಲ್ಲದೆ ಅಲ್ಲಿದ್ದ ಅಮೂಲ್ಯ ಹಸ್ತಪ್ರತಿಗಳನ್ನು ಓರಣಮಾಡಿದರು. ಇವತ್ತು ಆ ಸಂಗ್ರಹವು ರಾಜ್ಯದಲ್ಲಿಯೇ ಒಂದು ಮಾದರಿ ಹಸ್ತಪ್ರತಿ ಭಂಡಾರವಾಗಿ ಕಾರ್ಯ ನಿರ್ವಹಿಸುತ್ತದೆ. ಅನಾರೋಗ್ಯದ ಕಾರಣ ಅವರು ಧರ್ಮಸ್ಥಳವನ್ನು ತೊರೆದು, ಆನಂದಪುರದ ಬೆಕ್ಕಿನಕಲ್ಮಠಕ್ಕೆ ಹೋಗುತ್ತಾರೆ. ಗೌ.ಮ. ಉಮಾಪತಿ ಶಾಸ್ತ್ರೀಗಳ ಜೀವನದ ಮಹಾ ಅಧ್ಯಾಯವು 2012 ರ ಜುಲೈ ಆರರಂದು ಕೊನೆಗೊಳ್ಳುತ್ತದೆ.

 * * * * *

ಕಾಮೆಂಟ್‌ಗಳು

  1. ಎಂತಹಾ ಮಹಾನ್ ವಿದ್ವನ್ಮಣಿ ಯವರನ್ನು ಪರಿಚಯಿಸಿರುವಿರಿ. ಆ ಮಹಾನ್ ಚೇತನಕ್ಕೆ ಕಣ್ಮುಚ್ಚಿ ನಮಿಸಿರುವೆ.
    ವಿಶೇಷವಾಗಿ ನಮ್ಮೂರಿನ, ನಮ್ಮೂರಿನ ಆಜುಬಾಜಲ್ಲೇ ಜನ್ಮಿಸಿ
    ಕನ್ನಡನಾಡಿನಲ್ಲಿ ಪ್ರಖ್ಯಾತರಾದ ಇಂತಹಾ ನೂರಾರು ಸಾಧಕರನ್ನು ಈ ತಲೆಮಾರಿಗೆ ಪರಿಚಯಿಸಿದ ಸಾರ್ಥಕತೆ ನಿಮ್ಮದು.
    ನನ್ನೂರಿನ ಬಗ್ಗೆ, ನನ್ನೂರಿನ ಇಂತಹಾ ಸಾಧಕ ಹಿರಿಯರ ಬಗ್ಗೆ, ನಿಮ್ಮ ಬಗ್ಗೆ ಹೆಮ್ಮೆ ಮೂಡುತ್ತದೆ. ನಮನಗಳು.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.

126. ಅಪೂರ್ವ ಕಥೆ ಕವನಗಳ ಅವಲೋಕನ