125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.

ಇವರು ನಮ್ಮ ಹಿರಿಯರು

ನಾಗರಾಜ್ ಎಂ.ಎನ್. ಅಜ್ಜಂಪುರದಲ್ಲಿ 60 70 ದಶಕದಲ್ಲಿದ್ದ ಪ್ರಾಥಮಿಕ ಶಾಲಾ ಅಧ್ಯಾಪಕರು. ಇವರಿಂದ ಕಲಿತ ಅನೇಕರು ಇಂದು ಉನ್ನತ ಸ್ಥಿತಿಯಲ್ಲಿದ್ದಾರೆ. ಅವರು ತಮ್ಮ ವೃತ್ತಿಯನ್ನು ಪ್ರೀತಿಸಿದ ಪರಿಣಾಮವೇ ಅದಕ್ಕೆ ಕಾರಣ.

ಸ್ಪುರದ್ರೂಪಿಯಾಗಿದ್ದ ನಾಗರಾಜ ಮಾಸ್ತರರ ಕನ್ನಡ ಭಾಷೆ ತುಂಬಾ ಸೊಗಸಾಗಿರುತ್ತಿತ್ತು. ನನ್ನ ತಂದೆ ಅಜ್ಜಂಪುರ ಕ್ಷೇತ್ರಪಾಲಯ್ಯ  ಹಾಗೂ ನಾಗರಾಜ್ ಮಾಸ್ತರರು ಆಪ್ತ ಸ್ನೇಹಿತರು. ಅವರಿಬ್ಬರ ಅಭಿರುಚಿ ಮತ್ತು ವೈಚಾರಿಕತೆಗಳು ಸಮಾನವಾಗಿದ್ದರಿಂದ ಅವರ ಸ್ನೇಹ ಗಾಢವಾಗಿತ್ತು.

ಒಮ್ಮೆ ಶಿಕ್ಷಣಾಧಿಕಾರಿಯೋರ್ವರು ಶಾಲೆಗೆ ಭೇಟಿ ನೀಡಿದಾಗ, ಇವರಿಬ್ಬರು ಸಡಗರದಿಂದ ಔತಣಕೂಟವನ್ನು ತಮ್ಮದೇ ವೆಚ್ಚದಲ್ಲಿ ಏರ್ಪಡಿಸಿದ್ದರು. ಅದು ಯಾವ ಪ್ರತಿಫಲವನ್ನು ಅಪೇಕ್ಷಿಸಿ ಅಲ್ಲ, ಬದಲಾಗಿ ಆ ಅಧಿಕಾರಿಯ ನಿಸ್ಪೃಹತೆಯನ್ನು ಮೆಚ್ಚಿ ತಮ್ಮ ಗೌರವವನ್ನು ಹಾಗೆ ಸಲ್ಲಿಸಿದ್ದರು. ಒಳ್ಳೆಯವರನ್ನು ಕೇವಲ ಮೆಚ್ಚಿದರೆ ಸಾಲದು, ತಮ್ಮ ಭಾವನೆಯನ್ನು ಅಭಿವ್ಯಕ್ತಗೊಳಿಸುವುದೂ ಮುಖ್ಯ ಎಂಬ ಪಾಠವನ್ನು ಕಾರ್ಯತಃ ಮಾಡಿ ತೋರಿದ್ದರು.

ಇತ್ತೀಚೆಗೆ ಎಂ.ಎನ್. ನಾಗರಾಜರ ಮಗ ಶ್ರೀ ನರಸಿಂಹಸ್ವಾಮಿಯನ್ನು ದಾವಣಗೆರೆಯಲ್ಲಿ ಭೇಟಿ ಮಾಡಿದೆ. ಆಗ ಕಂಡ ನಾಗರಾಜ ಮಾಸ್ತರರ ಚಿತ್ರ ಸಹಿತ ಬರಹಕ್ಕಾಗಿ ಕೇಳಿದ್ದೆ. ಅದರಂತೆ ಅವರ ಬಗ್ಗೆ ನರಸಿಂಹಸ್ವಾಮಿ ನೀಡಿದ ವಿವರಗಳು ಕೆಳಗಿನಂತಿವೆ.

ಶಂಕರ ಅಜ್ಜಂಪುರ
ಸಂಪಾದಕ
"ಅಂತರಜಾಲದಲ್ಲಿ ಅಜ್ಜಂಪುರ"

             -0-0-0-0-0-

ಆದರ್ಶ ಅಧ್ಯಾಪಕ
ಶ್ರೀ ನಾಗರಾಜ್ ಎಂ.ಎನ್.

ಎಂ.ಎನ್. ನಾಗರಾಜ ಮೇಷ್ಟ್ರು.
ಅಜ್ಜಂಪುರದ ಶಿಕ್ಷಣ ವಲಯದಲ್ಲಿ ಸುಮಾರು 1950ರಿಂದ ಪರಿಚಯದ ಹೆಸರು.

ಶಿಕ್ಷಕರಾಗಿದ್ದ ನರಸಿಂಹಯ್ಯ ಮತ್ತು ಸಾವಿತ್ರಮ್ಮನವರ ಮಗನಾಗಿ ಇವರು 1928ರಲ್ಲಿ ಜನಿಸಿದರು. SSC ಪರೀಕ್ಷೆಯನ್ನು, 1942ರಲ್ಲಿ ಪಾಸು ಮಾಡಿಕೊಂಡು, ತಾತ್ಕಾಲಿಕ ಶಿಕ್ಷಕರಾಗಿ 1945ರಲ್ಲಿ ಸೇರಿಕೊಂಡು, ಸೊಕ್ಕೆ ಗ್ರಾಮದಲ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು.

ಆಸಂದಿ,ಜಯಪುರ,ಗೌರಾಪುರ, ಅಜ್ಜಂಪುರದಲ್ಲಿ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ.ಇವರ ಮನೆ ಗುರು ಕುಲದಂತೆ ಇರುತ್ತಿತ್ತು.  ಪರೀಕ್ಷೆಗಳ ಸಮಯದಲ್ಲಿ
ಮನೆಯಲ್ಲಿ ಹಳ್ಳಿಯ ವಿದ್ಯಾರ್ಥಿಗಳಿಗೆ
ಅನುಕೂಲವಾಗಲೆಂದು ತಾತ್ಕಾಲಿಕ ವಸತಿ ವ್ಯವಸ್ಥೆಯನ್ನು ಮಾಡಿದ್ದನ್ನು ಈಗಲೂ ಕೆಲವರು ನೆನೆಯುತ್ತಾರೆ.

ಕೆಲವು ವರ್ಷಗಳು ಅಜ್ಜಂಪುರ ಹೋಬಳಿಯ PDOಆಗಿ ಕೆಲಸ ಮಾಡಿದರು.
ಇವರು ಹೇಳಿ ಕೊಡುತ್ತಿದ್ದ English Grammar ಪಾಠವನ್ನು ಈಗಲೂ ಜ್ಞಾಪಿಸಿಕೊಳ್ಳುತ್ತಾರೆ.
1984ರಲ್ಲಿ ನಿವೃತ್ತರಾದರು.ತಮ್ಮ ಐದು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದರು.
2005ರಲ್ಲಿ ತುಮಕೂರಿನಲ್ಲಿ ನಿಧನರಾದರು.

ಇವರು ಸಮಾಜದ ಬಗ್ಗೆ ತುಂಬಾ ಕಳಕಳಿ ಹೊಂದಿದ್ದರು..ಕೋಟೆ ಆಂಜನೇಯ ದೇವಸ್ಥಾನದ ಕಟ್ಟಡ ಕಟ್ಟಲು ಹಣ ಸಂಗ್ರಹಿಸುವ ಕೆಲಸದಲ್ಲಿ ತುಂಬಾ ಶ್ರಮಪಟ್ಟರು.
ಹಲವಾರು ವರ್ಷಗಳು ಸಮಾಜದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

ಇವರು ಎಲ್ಲರೊಡನೆ ಆತ್ಮೀಯವಾಗಿ ಬೆರೆತು ಮಾತನಾಡುತ್ತಿದ್ದಂತೆಯೇ,  ನಿಷ್ಟುರ, ನೇರವಾಗಿ ಮಾತಾಡುವ ಸ್ವಭಾವದವರಾಗಿದ್ದರು.
ಅದು ಅವರ ವ್ಯಕ್ತಿತ್ವದ ವಿಶೇಷ ಆಗಿತ್ತು.
ಬಿಳಿ ಪಂಚೆ, ಜುಬ್ಬಾ ಅವರ ವಸ್ತ್ರವಾಗಿತ್ತು.

ನಮ್ಮ  ತಂದೆಯಾದ ಇವರು ಬಗ್ಗೆ ಲೇಖನ ಬರೆಯಲು ನನಗೆ ತುಂಬಾ ಸಂತೋಷವಾಗಿದೆ.

ನರಸಿಂಹ ಸ್ವಾಮಿ. ದಾವಣಗೆರೆ.
9844575983


 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

126. ಅಪೂರ್ವ ಕಥೆ ಕವನಗಳ ಅವಲೋಕನ