126. ಅಪೂರ್ವ ಕಥೆ ಕವನಗಳ ಅವಲೋಕನ

ಗೆಳೆಯ ಅಪೂರ್ವ ಅಜ್ಜಂಪುರ ಇವರ "ಒಂದಷ್ಟು ಕಥೆಗಳು ಕವಿತೆಗಳು" - ಈ ಪುಸ್ತಕದ ಅವಲೋಕನವು ಇತ್ತೀಚೆಗೆ ಅಜ್ಜಂಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು. ಅದರ ಅವಲೋಕನದ ವರದಿ ಇಲ್ಲಿದೆ. 

ಅವರು ನನ್ನ ಮಿತ್ರರು ಎಂಬ ಅಭಿಮಾನ ಒಂದು ಕಡೆ ಇದ್ದರೆ, ಈ ಪುಸ್ತಕದ ಪ್ರಕಟಣಾಪೂರ್ವ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತಾದುದು ಕೂಡ ನನಗೆ ಸ್ಮರಣೀಯ ಸಂಗತಿ. 

ಊರ ಲೇಖಕನ ಪುಸ್ತಕವು ಊರಿನಲ್ಲೇ ಅವಲೋಕನಗೊಂಡಿರುವುದು ಕೂಡ ವಿಶೇಷ ಹೌದು! ಚಿತ್ರ - ವರದಿಗಳು ಇಲ್ಲಿವೆ.

ಸಂಪಾದಕ
ಶಂಕರ ಅಜ್ಜಂಪುರ
ಅಂತರಜಾಲದಲ್ಲಿ ಅಜ್ಜಂಪುರ

*******************************


"ಅಪೂರ್ವ ಬರೆದದ್ದು ಒಂದಷ್ಟಾದರೂ ಅವು ಅಪರೂಪದ ಸಣ್ಣಕತೆಗಳು, ಕವಿತೆಗಳು!"

ಈ ಮಾತು ಹೇಳಿದವರು ಕನ್ನಡ ಪ್ರಾಧ್ಯಾಪಕರಾದ ಪ್ರೊ.ಮಹಾಲಿಂಗಪ್ಪ. ಸಂದರ್ಭ :  ಅಜ್ಜಂಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೨೪ರ ಮೇ ತಿಂಗಳ ೨೪, ಶುಕ್ರವಾರದಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಾಲೂಕು ಸಮಿತಿ ಮತ್ತು ಸ.ಪ್ರ.ದ.ಕಾಲೇಜು ಸಂಯುಕ್ತವಾಗಿ ಆಯೋಜಿಸಿದ 'ಒಂದಷ್ಟು ಕಥೆ, ಕವಿತೆಗಳು' ಒಂದು ಅವಲೋಕನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಈ ಅಭಿಪ್ರಾಯ ವ್ಯಕ್ತಪಡಿಸಿದರು.
'ಒಂದು ನಿಧಿಯ ಸುತ್ತ' ಕತೆಯಲ್ಲಿ ಜಾನಪದ, ಐತಿಹಾಸಿಕ ಹಿನ್ನೆಲೆಯಲ್ಲಿ ವರ್ತಮಾನದ ಪ್ರಸಂಗವು ಬಿಚ್ಚಿಕೊಳ್ಳುತ್ತದೆ. ಕತೆಯು ನಡೆಯುವ 'ಅಸಾವತಿ'ಯು ಗಂಗರ ಕಾಲದ ಆಸಂದಿಯೇ ಆಗಿದೆ. ಹೊಯ್ಸಳ ದೊರೆಗಳ ಸಾಮಂತರಾದ ಗಂಗರಸರ ರಾಜಧಾನಿ ಆಸಂದಿ. ಆಸಂದಿಯೇ ಇಲ್ಲಿ 'ಅಸಾವತಿ' ಎಂಬ ಊರಾಗಿದೆ. ದಾಸಯ್ಯನಿಂದ ಶಾಪಗ್ರಸ್ತವಾಗಿ ಅಸಾವತಿಯು ನಾಶವಾದ ಜಾನಪದ ಕತೆ ಇದೆ.

 ಗಂಗರ ಕಾಲಕ್ಕೆ ಸೇರಿದ 'ನಿಧಿ' ಆಕಸ್ಮಿಕವಾಗಿ ಒಬ್ಬ ಚಿನಿವಾರನಿಗೆ ತಿಳಿಯುತ್ತದೆ. 'ನಿಧಿ'ಯ ಸುತ್ತ ಅನೇಕ ಘಟನೆಗಳು ನಡೆಯುತ್ತವೆ. ಕಥೆಯನ್ನು ರೋಚಕವಾಗಿ ಹೇಳಲಾಗಿದೆ ಎಂದು ಅವರು ವಿವರಿಸಿದರು. 'ನ್ಯಗ್ರೋಧ', 'ಶ್ಯಾಮಲಾ' 'ಚಿಂತಾಮಣಿ' ಕತೆಗಳ‌ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. 

ಅಪೂರ್ವರ ಕವಿತೆಗಳನ್ನು ಸಹ ಅವರು ಸವಿಸ್ತಾರವಾಗಿ ಬಣ್ಣಿಸಿದರು. ಕಳ್ಳ ಬೆಕ್ಕು, ದಧಿಯೊಳಿರ್ಪ ನವನೀತ, ಪ್ರಾರ್ಥನೆ, ಭವದ ಬದುಕು, ತಪಸ್ಸು  ಮುಂತಾದ ಕವಿತೆಗಳು ಆಧ್ಯಾತ್ಮಿಕ ವಿಚಾರಗಳನ್ನು ಹೇಳುತ್ತವೆ. ಕೊವಿಡ್-19, ನಮ್ಮ ಕಾಶ್ಮೀರ ಕುವರಿ ಮುಕ್ತ ಮುಕ್ತ, ಒಂದು ಮೇಜುವಾನಿಯ ಕಥೆ, ಪ್ರತಿರೋಧ ಸಮಕಾಲೀನ ತಲ್ಲಣಗಳನ್ನು ಚಿತ್ರಿಸಿವೆ ಎಂದು ಪ್ರೊ.ಮಹಾಲಿಂಗಪ್ಪ ಅಭಿಪ್ರಾಯಪಟ್ಟರು.

 ಬಿ.ಎ. ಕನ್ನಡ ವಿಭಾಗದ   ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಾದ ಭುವನೇಶ್, ಅಖಿಲಾ, ಆಕಾಶ್, ಎಂ.ನಂದಿತ, ಎಚ್.ಸಿ.ಗಿರೀಶ್, ಜಿ.ಆರ್. ಪ್ರೀತಿ, ವಿದ್ಯಾ ಆರ್.ಕೆ., ಅಮೃತಾ ಮತ್ತು ಜಿ.ಬಿ.ಚಂದನ   ತಾವು ಓದಿದ ಒಂದೊಂದು ಕವಿತೆ, ಕತೆಗಳ ಬಗ್ಗೆ ಮಾತನಾಡಿದರು. 

'ಕಳ್ಳ ಬೆಕ್ಕು' ಯಾರ ಗಮನಕ್ಕೂ ಬಾರದಿದ್ದರೆ ಏನನ್ನಾದರೂ ಕೆಡುಕು ಮಾಡಬಹುದು ಎಂಬ ಮನುಷ್ಯನ ದುಷ್ಟ ಸ್ವಭಾವವನ್ನು ತಿಳಿಸುತ್ತದೆ ಎಂದು ಭುವನೇಶ್ ಹೇಳಿದರು. ನಂದಿತಾ, ತಾಯಿ ಕವಿತೆಯು ಸಂಕಷ್ಟದ ತಾಯ್ತನವನ್ನು ಚಿತ್ರಿಸುತ್ತದೆ ಎಂದರು. ಗಿರೀಶ್, 'ಒಂದು ನಿಧಿಯ ಸುತ್ತ' ಕತೆಯನ್ನು ಬಣ್ಣಿಸಿದರು. ವಿದ್ಯಾ,  'ಹಬ್ಬ' ಕವಿತೆಯ ಕುರಿತು ಮಾತನಾಡಿದರು. ಅಮೃತಾ 'ಭವದ ಬದುಕು' ಮತ್ತು ಜಿ.ಬಿ. ಚಂದನ 'ಕಾಡುವ ಕಾರಂತರು' ಕವಿತೆಗಳ ಬಗ್ಗೆ ಚರ್ಚಿಸಿದರು.

ಸಾಹಿತ್ಯ ಕೃತಿಯ ಒಂದು ಅವಲೋಕನ ಕಾರ್ಯಕ್ರಮವನ್ನು ಲೇಖಕ ಹಾಗೂ ತಂತ್ರಜ್ಞ ಜಿ.ಎಚ್. ಕುಮಾರ್ ಉದ್ಘಾಟಿಸಿ, ಸಾಹಿತ್ಯವು ನಾಗರಿಕತೆಯ ಪ್ರತೀಕ. ಅಮೇರಿಕಾದ ಅಲೆಕ್ಸ್ ಹ್ಯಾಲಿಯ  'ರೂಟ್ಸ್' ಕಾದಂಬರಿ ಓದಿ ಪ್ರಭಾವಿತನಾದ ನಾನು,  ಆಫ್ರಿಕಾದ ಅನೇಕ ದೇಶಗಳಿಗೆ ಶತಮಾನಗಳ ಹಿಂದೆ ವಲಸೆ ಬಂದು ನೆಲೆಸಿದ ಭಾರತೀಯರ ಸಾಂಸ್ಕೃತಿಕ ಮತ್ತು ಭೌತಿಕ ಹಿನ್ನೆಲೆಯ ಕುರಿತು 'ರೂಟ್ಸ್ ಇನ್ ಇಂಡಿಯಾ, ಗ್ರೋತ್ ಇನ್ ಆಫ್ರಿಕಾ' ಎಂಬ ಕೃತಿಯನ್ನು ರಚಿಸಿದೆ. ಸಾಹಿತ್ಯದ ಪ್ರಭಾವ ಅಂತಹದ್ದು ಎಂದರು. 

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಯದರ್ಶಿ ಕಾಂತೇಶ್ ಮತ್ತು ತಾಲೂಕು ಸಮಿತಿ ಸದಸ್ಯ ಹವ್ಯಾಸಿ ಲೇಖಕ ಬಿಪಿನ್ ಕುಮಾರ್‌ ಅಪೂರ್ವರ ಕೃತಿಯ ಬಗ್ಗೆ ಮಾತನಾಡಿದರು. "ಸಾಹಿತ್ಯ ಕೃತಿಯ ಅವಲೋಕನವು ಒಂದು ವಿಶಿಷ್ಟ ಕಾರ್ಯಕ್ರಮ. ಪ್ರಸ್ತುತ ಕೃತಿಯ ಚಿಂತಾಮಣಿ, ಶ್ಯಾಮಲಾ, ಒಂದು ನಿಧಿಯ ಸುತ್ತ ಕತೆಗಳು ಓದಿಸಿಕೊಳ್ಳತ್ತವೆ. 'ಮುಖವಾಡದವರು' ಇಂದಿನ ಅಂತರ್ಜಾಲದಲ್ಲಿ ನಡೆಯುವ ನಾಟಕೀಯತೆಯನ್ನು ಮುಖಾಮುಖಿಯಾಗಿಸುತ್ತದೆ." ಎಂದು ಕಾಂತೇಶ್ ಹೇಳಿದರು. 

"ಕೃತಿಯೊಂದು ಪ್ರಕಟವಾದರೆ ಸಮಾಜವು ಅದರ ಮೌಲ್ಯಮಾಪನ ಮಾಡಬೇಕು. ಕೃತಿಯು ಹೇಳುವ ವಿಚಾರಗಳನ್ನು ಚರ್ಚಿಸಬೇಕು. ಹಾಗಾದಾಗ ಮಾತ್ರ ಕೃತಿಯ ಬಗ್ಗೆ ಪ್ರಚಾರವಾಗುತ್ತದೆ. ಅಪೂರ್ವರ ಕತೆಗಳು, ಕವಿತೆಗಳು ಸರಳವಾಗಿ ಸುಂದರವಾಗಿ ಅಚ್ಚುಕಟ್ಟಾಗಿ ತಮ್ಮ ಉದ್ದೇಶಿತ ಗುರಿಗಳನ್ನು ಸಾಧಿಸಿವೆ" ಎಂದು ಬಿಪಿನ್ ಕುಮಾರ್ ತಿಳಿಸಿದರು.

ಲೇಖಕ ಅಪೂರ್ವ ಮಾತನಾಡಿ, ತನ್ನ ಕೃತಿಯ ಅವಲೋಕನ ಮಾಡಿದ ಸಾಹಿತ್ಯಾಸಕರು ಮತ್ತು ಕನ್ನಡ ವಿಭಾಗದ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಅಭಿನಂದಿಸಿದರು. ಕಥೆಗಳನ್ನು ಒಂದೇ ಓದಿನಲ್ಲಿ ಅರ್ಥಮಾಡಿಕೊಳ್ಳಬಹುದು. ಕವಿತೆಯು ಹಾಗಲ್ಲ. ಪುನಃ ಪುನಃ    ಓದಿದರೆ    ಅದನ್ನು   ಅರ್ಥೈಸಿ ಕೊಳ್ಳಬಹುದು. ವೇದಗಳು ಕಾವ್ಯರೂಪದಲ್ಲೇ ಇದೆ. ಭಾರತೀಯರು ಪ್ರಾಚೀನ ಕಾಲದಲ್ಲಿ ಸಾಹಿತ್ಯದ ಮಾಧ್ಯಮವಾಗಿ ಕಾವ್ಯವನ್ನು ಆಯ್ದುಕೊಂಡದ್ದನ್ನು ನಾವು ನೋಡಬಹುದು. ರಾಮಾಯಣ, ಮಹಾಭಾರತ ಮಹಾಕಾವ್ಯಗಳೇ ಆಗಿವೆ.ಪ್ರಾಚೀನ ಸಂಸ್ಕೃತ ನಾಟಕಗಳು ಸಹ ಕಾವ್ಯ ಪ್ರಕಾರದಲ್ಲಿ ಇವೆ. ಸಣ್ಣಕತೆಗಳು ಮೊದಲು ಕೌತುಕಗಳಿಗೆ ಮೀಸಲಾಗಿತ್ತು. ನಂತರ ರಷಿಯನ್ ಲೇಖಕ‌ ಆ್ಯಂಟನ್ ಚೆಕೊವ್ ನಂಥವರು ಸಣ್ಣಕತೆಗಳಲ್ಲಿ ನಾವೀನ್ಯತೆ ತಂದರು. ಕಲಾತ್ಮಕತೆಗೆ ಪ್ರಾಧಾನ್ಯತೆ ನೀಡಿದರು. ಈ ದಿಕ್ಕಿನಲ್ಲಿ ಕನ್ನಡ ಸಣ್ಣಕತೆಗಳ ಜನಕರೆಂದೇ ಪ್ರಸಿದ್ಧರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಅತ್ಯುತ್ತಮ ಸಣ್ಣಕತೆಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ  ಎಂದು ತಿಳಿಸಿದರು.

ಅಧ್ಕಕ್ಷತೆ ವಹಿಸಿದ್ದ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ.ರಾಜಣ್ಣ,‌ ಇಂತಹ ಸಾಹಿತ್ಯಕ ಕಾರ್ಯಕ್ರಮದಿಂದ ವಿದ್ಯಾರ್ಥಿಗಳ ಮನಸ್ಸುಗಳು ವಿಕಸಿತವಾಗುತ್ತವೆ ಎಂದರು. ಕನ್ನಡ ವಿಭಾಗದ  ಸಹ ಪ್ರಾಧ್ಯಾಪಕ ಡಾ.ಆನಂದ್ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಸಾಹಿತ್ಯ ಸಂವಾದವನ್ನು ನಿರ್ದೇಶಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾ.ಅಧ್ಯಕ್ಷ ಎಚ್.ಆರ್.ಚಂದ್ರಪ್ಪ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಗೌರಾಪುರದ ಜಯಮೂರ್ತಿ, ಚಿಕ್ಕನಲ್ಲೂರು ರಾಜಪ್ಪ, ಶಿವನಿ ನಾಗರಾಜ ಮೇಷ್ಟ್ರು, ಹೇಮಂತ್ ಮತ್ತಿತರರು ಭಾಗವಹಿಸಿದ್ದರು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.

ಅಜ್ಜಂಪುರ ಸೀತಾರಾಂ