ಕಂದಹಾರ್ ವಿಮಾನ ಅಪಹರಣ : ಎ. ಆರ್ . ಘನಶ್ಯಾಮ್ ರ ಕಾರ್ಯ ಚಟುವಟಿಕೆಯ ರೋಚಕ ವಿವರಗಳು
" ಆತ್ಮೀಯ ಓದುಗರೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು "
ದೂರವಾಣಿ : 99866 72483
----------------------------------------------------------------------------------------------------------------------------------------
ಹಿಂದಿನ ಸಂಚಿಕೆಯಿಂದ ಮುಂದುವರೆದುದು.
ಅಂದಿನ ರಕ್ಷಣಾ ಮಂತ್ರಿ ಜಸವಂತ ಸಿಂಗರು ಕಂದಹಾರ್ ವಿಮಾನ ಅಪಹರಣದ ಸಂದರ್ಭದಲ್ಲಿ ಕೈಗೊಂಡ ನಿರ್ಣಯಗಳು ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ತಮ್ಮ ಪುಸ್ತಕ ಎ ಕಾಲ್ ಟು ಆನರ್ ದಲ್ಲಿ ಹೀಗೆ ಬರೆದಿದ್ದಾರೆ. |
"ನಾನು ಕಂದಹಾರ್ ನಲ್ಲೇ ಉಳಿಯಬೇಕಾಯಿತು. ಏಕೆಂದರೆ ಅಪಹೃತ 814 ಐಸಿ ವಿಮಾನಕ್ಕೆ ಇಂಧನ ತುಂಬಲು ಸಮಯ ಬೇಕಿತ್ತು. ನಾಲ್ಕು ಜನ ಸಿಬ್ಬಂದಿ, ಇಂಡಿಯನ್ ಏರ್ ಲೈನ್ಸ್ ನ ಡೆಪ್ಯುಟಿ ಜನರಲ್ ಮ್ಯಾನೇಜರ್ ಕ್ಯಾಪ್ಟನ್ ರಾವ್ ಮತ್ತು ಇಂಡಿಯನ್ ಏರ್ ಲೈನ್ಸ್ ನ ಕ್ಯಾಪ್ಟನ್ ಸೂರಿಯವರು ಕೂಡ ಕಂದಹಾರ್ ನಲ್ಲೇ ಉಳಿದಿದ್ದರು. ಪ್ರಯಾಣಿಕರು ಐಸಿ 814 ರಲ್ಲಿದ್ದ ತಮ್ಮ ಕೈ ಲಗ್ಗೇಜುಗಳೊಂದಿಗೆ ಹೊಸ ವಿಮಾನಕ್ಕೆ ಹೋಗಲು ಸಿದ್ಧರಾಗುತ್ತಿದ್ದರು. ಆದರೆ ಮುಖ್ಯ ಲಗೇಜುಗಳು ಅದರಲ್ಲೇ ಉಳಿದಿತ್ತು. ನಾನು ಸಂಜೆ ಏಳು ಗಂಟೆಯ ಸುಮಾರಿಗೆ ವಿಮಾನದ ಕಾಕ್ ಪಿಟ್ ನಲ್ಲಿ ಇಣುಕಿ ನೋಡಿದೆ. ಅದರ ತುಂಬ ತಿಂದು ಉಳಿದ ಮೂಳೆಗಳು, ಹಣ್ಣಿನ ಸಿಪ್ಪೆಗಳು ತುಂಬಿ ಹೊಲಸು ನಾರುತ್ತಿತ್ತು. ಶೌಚಾಲಯಗಳ ಸ್ಥಿತಿ ಅಧ್ವಾನವಾಗಿತ್ತು. ನಂತರ ಲೌಂಜ್ ಗೆ ಹಿಂದಿರುಗಿದೆ. ಅಲ್ಲಿ ರಹ್ಮತ್ತುಲ್ಲಾ ಹಾಶ್ಮಿ ಭೇಟಿಯಾದರು. ಅವರೊಂದಿಗೆ ಚಹಾ ಹೀರುತ್ತ ಕುಳಿತಿದ್ದಾಗ, ಉಗ್ರರ ಬೇಡಿಕೆಗಳೇನಿವೆ ಎಂದು ವಿಚಾರಿಸಿದೆ. ಅವರ ಬೇಡಿಕೆಯಂತೆ ಪ್ರಯಾಣಿಕರನ್ನು ಕಾವಲು ಪಡೆಯೊಂದಿಗೆ ಪಾಕಿಸ್ತಾನದ ಗಡಿಗೆ ತಲುಪಿಸಬೇಕಾಗಿತ್ತು. ತಪಾಸಣೆಯ ಜಂಜಾಟಗಳನ್ನು ಒಪ್ಪದ ಅವರು ಗುಪ್ತಮಾರ್ಗದಲ್ಲಿ ಪಾಕ್ ಆಫ್ಘನ್ ಮಾರ್ಗದಲ್ಲಿ ಹೋಗಲು ಇಚ್ಛಿಸುತ್ತಿದ್ದಾರೆಂದು ತಿಳಿಯಿತು. ಅಷ್ಟರಲ್ಲಿ ಪ್ರಯಾಣಿಕರನ್ನು ಉಡಾಯಿಸಿದರೆ ಏನು ಗತಿ ಎಂಬ ಚಿಂತೆಯನ್ನು ವ್ಯಕ್ತ ಪಡಿಸಿದೆ. ಅದಕ್ಕೆ ಅವರು "ಹಾಗಾಗದು, ಏಕೆಂದರೆ ಭಾರತ ಮಾತುಕತೆಗೆ ನೀವೀಗ ಬಂದಿರುವುದರಿಂದ ಅವರು ತಮ್ಮ ನಿಲುವನ್ನು ಬದಲಾಯಿಸಿರುತ್ತಾರೆ" ಎಂದರು.
ರಾತ್ರಿ 11ರ ನಂತರವೂ ಕ್ಯಾಪ್ಟನ್ ರಾವ್ ಇನ್ನೂ ಹೊರಬಂದಿಲ್ಲವೆಂದು ತಿಳಿಯಿತು. ಈ ಬಗ್ಗೆ ಕ್ಯಾಪ್ಟನ್ ಸೂರಿಯವರನ್ನು ಕೇಳಿದಾಗ, ರಾವ್ ವಿಮಾನದಿಂದ ಕೆಳಗಿಳಿಯಲು ನಿರಾಕರಿಸುತ್ತಿದ್ದಾರೆಂದು ತಿಳಿಸಿದರು. ಆಗ ನಾನು ಕ್ಯಾಪ್ಟನ್ ಸೂರಿಯವರೊಂದಿಗೆ ವಿಮಾನದತ್ತ ಧಾವಿಸಿದೆ. ವಿಮಾನದ ಮುಂಭಾಗದಲ್ಲಿ ಕೆಂಪು ಬಣ್ಣದ ಪಚೋರಿ ಕಾರ್ ಒಂದು ಹೆಡ್ ಲೈಟ್ ಗಳನ್ನು ಉರಿಸುತ್ತ ನಿಂತಿದ್ದುದು ಕಂಡುಬಂದಿತು. ಅದನ್ನು ಕಂದಹಾರ್ ನ ವಾಸ್ತವ್ಯದಲ್ಲಿ ಮುತ್ತವಕೀಲ್ ಬಳಸುತ್ತಿದ್ದನೆಂದು ನನಗೆ ಗೊತ್ತಿತ್ತು. ವಿಮಾನದ ಗಾಜುಗಳು ಮಸುಕಾಗಿದ್ದರಿಂದ ಒಳಗೆ ಯಾರಿದ್ದಾರೆಂದು ಕಾಣುತ್ತಿರಲಿಲ್ಲ. ಆಗ ಕ್ಯಾಪ್ಟನ್ ರಾವ್ ವಿಮಾನವನ್ನು ಚಾಲನೆಯ ಸ್ಥಿತಿಯಲ್ಲೇ ಇಟ್ಟಿದ್ದರು. ಪ್ರಯಾಣಿಕರ ಎಲ್ಲ ಕೆಂಪು ಬ್ಯಾಗ್ ಗಳನ್ನು ಕಾರಿನಲ್ಲಿದ್ದರವರಿಗೆ ಅಪಹರಣಕಾರರು ತೋರಿಸುತ್ತಿದ್ದ ಬಗ್ಗೆ ರಾವ್ ಹೇಳಿದರು. ಕಾರಿನಲ್ಲಿ ಕುಳಿತಿದ್ದ ಉಗ್ರರು ತಮಗೆ ಬೇಕಿರುವ ಬ್ಯಾಗ್ ನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಕಾರಿನಲ್ಲಿ ಆರಾಮವಾಗಿ ಕುಳಿತಿದ್ದರು. ಸ್ಥಳೀಯ ಕಾರ್ಮಿಕನೊಬ್ಬನಿಂದ ತಿಳಿದುಬಂದಂತೆ ಆ ಕೆಂಪು ಬ್ಯಾಗ್ ನಲ್ಲಿ 5 ಗ್ರೆನೇಡುಗಳು ಇದ್ದವೆಂದು ಕ್ಯಾಪ್ಟನ್ ರಾವ್ ರಿಂದ ತಿಳಿಯಿತು. ಬ್ಯಾಗ್ ತಲುಪಿದ್ದು ಖಚಿತವಾದ ನಂತರ ಅವರು ಕಾಯುವ ಅವಶ್ಯಕತೆಯೇನೂ ಇರಲಿಲ್ಲ. ಆದರೆ ವಿಮಾನ ಮೇಲೇಳಲು ಇನ್ನೂ 16-18 ಟನ್ ಗಳಷ್ಟು ಇಂಧನವನ್ನು ತುಂಬಿಸಬೇಕಾಗಿತ್ತು. ಹೀಗಾಗಿ ಅವರು ಬೆಳಗಿನವರೆಗೆ ಕಾಯುವುದು ಅನಿವಾರ್ಯವಾಗಿತ್ತು. ಇದು ಸ್ಪಷ್ಟವಾದ ನಂತರವೇ ಕ್ಯಾಪ್ಟನ್ ರಾವ್ ವಿಮಾನದಿಂದ ಇಳಿದು ನನ್ನೊಡನೆ ಲೌಂಜಿನತ್ತ ಹೆಜ್ಜೆ ಹಾಕಿದರು. ಬೆಳಿಗ್ಗೆ 0945ರ ವೇಳೆಗೆ ಇಂಧನ ತುಂಬಿದ್ದಾಗಿತ್ತು. ವಿಮಾನ ತನ್ನ ಹಾರಾಟವನ್ನು ಮುಂದುವರೆಸಿತು.
ಇದೆಲ್ಲ ನಡೆದದ್ದು ಇಂದಿಗೆ ಸರಿಯಾಗಿ 13 ವರ್ಷಗಳ ಹಿಂದೆ. ಎಂದರೆ 2000 ಇಸವಿ ಜನವರಿ ಒಂದರಂದು ಈ ಘಟನೆ ನಡೆದಿತ್ತು. ಹೊಸವರ್ಷದ ಆ ದಿನ ತಾಲಿಬಾನಿ ಅಧಿಕಾರಿಗಳು ಯಾರೂ ವಿಮಾನ ನಿಲ್ದಾಣದತ್ತ ತಲೆ ಹಾಕಿರಲಿಲ್ಲ. ನಿಲ್ದಾಣದ ಮ್ಯಾನೇಜರರ ಮೂಲಕ ನಾಗರಿಕ ವಿಮಾನಯಾನ ಸಚಿವ ಅಥವಾ ವಿದೇಶಾಂಗ ಸಚಿವರನ್ನು ಭೇಟಿಮಾಡುತ್ತೇನೆಂಬ ನನ್ನ ಮನವಿಗೆ ಬೆಲೆ ಸಿಕ್ಕಲಿಲ್ಲ. ಅವರು ಯಾರೂ ಲಭ್ಯವಿಲ್ಲ ಎಂಬ ಉತ್ತರ ಬಂದಿತು. ಅವರು ಬಾರದಿದ್ದರೆ ಪರವಾಗಿಲ್ಲ, ನಾನೇ ನಗರಕ್ಕೆ ಹೋಗಿ ಅವರನ್ನು ಭೇಟಿಮಾಡುತ್ತೇನೆ ಎಂದದ್ದಕ್ಕೂ ಸೂಕ್ತ ಉತ್ತರ ಬರಲಿಲ್ಲ. ಇದೇ ವೇಳೆಗೆ 10 ಘಂಟೆಗೆ ಹಾಶ್ಮಿಯವರು ನನ್ನನ್ನು ವಿಮಾನ ನಿಲ್ದಾಣದಲ್ಲಿ ಭೇಟಿಮಾಡಲು ಬರಲಿದ್ದಾರೆ ಎಂಬ ಸುದ್ದಿ ಬಂದಿತು. ಅವರಿಗಾಗಿ ಕಾಯ್ದದ್ದು ವ್ಯರ್ಥವಾಯಿತು. ನಿಗದಿತ ಸಮಯಕ್ಕೆ ಅವರು ಬರಲಾಗಲಿಲ್ಲವಾಗಿ ನನಗೆ ಇಸ್ಲಾಮಾಬಾದ್ ಗೆ ತೆರಳಿಲಿದ್ದ 10 ಘಂಟೆಯ ವಿಮಾನ ತಪ್ಪಿಹೋಯಿತು. ಸುದೈವಕ್ಕೆ ಇಂಗ್ಲಿಷ್ ತಿಳಿದಿದ್ದ ಓರ್ವ ಕಿರಿಯ ಅಧಿಕಾರಿಯು ಬಂದು ನಾನು ಯಾರನ್ನೂ ನೋಡಲು ಸಾಧ್ಯವಿಲ್ಲವೆಂದೂ, ಆ ಕೆಂಪು ಬ್ಯಾಗ್ ನ್ನು ಕೆಳಗಿಳಿಸಿದ ನಂತರ ಅದು ಯಾರ ಕೈಸೇರಿತೆಂದು ತಿಳಿಯಲಿಲ್ಲವೆಂದೂ ಹೇಳಿದನು. ಹಾಗೆಯೇ ನನ್ನ ಕೈಯಲ್ಲಿ ಒಂದು ಚಿಕ್ಕ ಪೊಟ್ಟಣವನ್ನು ನೀಡಿದನು. ಅದರಲ್ಲಿ ಒಂದು ಬಾಚಣಿಗೆ, ಉಗುರು ಕತ್ತರಿಸುವ ಸಾಧನ, ಕರವಸ್ತ್ರ, ನೈಲಾನ್ ಕಾಲುಚೀಲಗಳು ಹಾಗೂ ಸ್ವಲ್ಪ ಬದಾಮಿ ಮತ್ತು ಒಣದ್ರಾಕ್ಷಿಗಳು ಇದ್ದವು. ಇದು ವಿದೇಶಾಂಗ ಸಚಿವರು ನನಗೆ ನೀಡಿರುವ ಉಡುಗೊರೆಯೆಂದು ಮಾತ್ರ ಆತ ತಿಳಿಸಿದ. ನಾನು ಅನ್ಯಮಾರ್ಗವಿಲ್ಲದೆ 12 ಘಂಟೆಗೆ ಇಸ್ಲಾಮಾಬಾದ್ ಗೆ ಹೊರಡಲಿದ್ದ ಬ್ರಿಟಿಷ್ ವಿಮಾನವನ್ನು ಏರುವುದು ಅನಿವಾರ್ಯವಾಯಿತು.
ನಂಬಿಕೆ ದ್ರೋಹವೆಸಗಿದ ಮುತ್ತವಕೀಲನನ್ನು ಹಸ್ತಾಂತರ ಮಾಡುವಂತೆ ಹಲವಾರು ಬಾರಿ ಭಾರತ ಮಾಡಿದ ಮನವಿ ವ್ಯರ್ಥವಾಯಿತು. ಆಫ್ಘಾನಿಸ್ತಾನದ ತೆರೆಮರೆಯ ಆಡಳಿತಗಾರನೇ ಆಗಿರುವ ಅಮೆರಿಕಾ "ಉಗ್ರವಾದದ ವಿರುದ್ಧ ಮಾಡುವ ಜಂಟಿ ಕಾರ್ಯಾಚರಣೆಯ" ಪರಿ ಇದು. ಏನಿದ್ದರೂ ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರ ನೆಲೆ ತಲುಪಿಸುವಂತೆ ಮಾಡುವಲ್ಲಿ ನಾವು ಯಶಸ್ವಿಯಾದೆವೆನ್ನುವುದೇ ನಮಗೆ ಸಮಾಧಾನದ ಅಂಶ.
* * * * * * *
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ