ಶಿಕ್ಷಕ - ಶಾಸಕ ಶ್ರೀ ಪಿ. ತಿಪ್ಪಯ್ಯ


ಅತ್ಮೀಯ ಓದುಗರೇ,

ಅಜ್ಜಂಪುರದ ಇತ್ತೀಚಿನ ಯುವ ಸಾಧಕರನ್ನು ಕುರಿತು ಪರಿಚಯಿಸುವ ಆಶಯವಿದೆಯಾದರೂ, ಹಿರಿಯರ ಬಗ್ಗೆ ಬರೆಯುವುದು, ತಿಳಿಯಬೇಕಾದುದು ಇನ್ನೂ ಇದೆಯೆನ್ನುವುದು ಕೂಡ ಸಂತಸದ ಸಂಗತಿಯೇ ಸರಿ. ಹೀಗಾಗಿ, ಈ ಸಂಚಿಕೆಯಲ್ಲಿ ಅಜ್ಜಂಪುರದ ಸಭ್ಯ, ಸರಳ ರಾಜಕಾರಣಿ ಮತ್ತು ಶಿಕ್ಷಕರಾದ ಶ್ರೀ ಪಿ. ತಿಪ್ಪಯ್ಯನವರನ್ನು ಕುರಿತ ಲೇಖನವಿದೆ. ಇದನ್ನು ಯುವ ಮಿತ್ರ ಮಲ್ಲಿಕಾರ್ಜುನ ಅಜ್ಜಂಪುರ ಅವರು ತಿಪ್ಪಯ್ಯನವರ ಪುತ್ರ ಶ್ರೀ ಉಮಾಶಂಕರ್ ಅವರನ್ನು ಸಂಪರ್ಕಿಸಿ, ವಿವರಗಳನ್ನು ಸಂಗ್ರಹಿಸಿ ಇಲ್ಲಿ ನೀಡಿದ್ದಾರೆ. ಅವರ ಆಸಕ್ತಿ ಹೆಚ್ಚಿನದು. ಇದೇ ರೀತಿ ಓದುಗ ಬಳಗದಲ್ಲಿರುವ ಮಿತ್ರರು ತಮ್ಮ ಗಮನಕ್ಕೆ ಬರುವ ವಿಶೇಷ ಸಂಗತಿಗಳನ್ನು. ನೆನಪುಗಳನ್ನು ಹಂಚಿಕೊಳ್ಳಲು ಕೋರುತ್ತೇನೆ. 


-ಶಂಕರ ಅಜ್ಜಂಪುರ


ಶಿಕ್ಷಕ - ಶಾಸಕ ಶ್ರೀ ಪಿ. ತಿಪ್ಪಯ್ಯ

ಇಂದು ಸಾಹಿತಿಗಳು ರಾಜಕಾರಣಕ್ಕೆ ಬರಬೇಕೇ ಬೇಡವೇ ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಸಾಹಿತಿಗಳು ರಾಜಕೀಯಕ್ಕೆ ಬಂದರೆ, ರಾಜಕಾರಣವು ಕೆಡುವುದಕ್ಕಿಂತ, ಸಾಹಿತಿಗಳು ಕೆಟ್ಟು ಹೋಗುತ್ತಾರೆ ಎಂಬ ಕಾಳಜಿ ವ್ಯಕ್ತವಾಗುತ್ತಿದೆ. ಹೀಗಾಗಿಯೇ ಅವರು ದೂರವಿದ್ದರೆ ಒಳಿತು ಎಂಬ ಭಾವ ಸಮಾಜದಲ್ಲಿ ನೆಲೆ ನಿಂತಿದೆ. 

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟ್ರಪತಿಯಾಗುವುದಕ್ಕಿಂತ ಮುಂಚೆ ಉಪನ್ಯಾಸಕ ರಾಗಿದ್ದವರು. ಶಿಕ್ಷಣ ಕ್ಷೇತ್ರದಲ್ಲಿದ್ದ  ಅವರು ಸಕ್ರಿಯ ರಾಜಕಾರಣದಲ್ಲಿ ಭಾಗವಹಿಸಲಿಲ್ಲವಾದರೂ, ಪ್ರಜಾಪ್ರಭುತ್ವದ ಉನ್ನತ ಪದವಿಯನ್ನು ಅಲಂಕರಿಸಿದ್ದು ಇಡೀ ದೇಶದ ಶಿಕ್ಷಕರಿಗೆ ಹೆಮ್ಮೆ ತರುವ ಸಂಗತಿಯಾಗಿರುವಂತೆ ಅಜ್ಜಂಪುರದಲ್ಲಿ ಶಿಕ್ಷಕರಾಗಿದ್ದ ಶ್ರೀ ಪಿ. ತಿಪ್ಪಯ್ಯ ಶಾಸನ ಸಭೆ ಪ್ರವೇಶಿಸುವಂತಾದುದು ನಮ್ಮೂರಿಗೆ ಹೆಮ್ಮೆಯ ಸಂಗತಿ. 

ತಿಪ್ಪಯ್ಯನವರ ಪೂರ್ವಿಕರು ಗಾಂಧೀಜಿಯವರ ಪ್ರಭಾವಕ್ಕೆ ಒಳಗಾದವರು. ತಿಪ್ಪಯ್ಯನವರ ತಂದೆಯವರ ಹೆಸರು ಎ. ಪಾಂಡುರಂಗಪ್ಪ. ಅವರಿಗೆ ಶಹನಾಯಿವಾದನದಲ್ಲಿ ಪರಿಣತಿಯಿತ್ತು. ಅಜ್ಜಂಪುರದ ಪ್ರವರ್ತಕರಲ್ಲಿ ಮುಖ್ಯರಾದ ಸುಬ್ರಹ್ಮಣ್ಯ ಶೆಟ್ಟರ ಪ್ರಭಾವದಿಂದಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದ ಅವರು ಆ ದಿನಗಳಲ್ಲಿ ಗಾಂಧೀಜಿಯನ್ನು ನೋಡಲೆಂದು ಯರವಾಡಾ, ವಾರ್ಧಾ ಮತ್ತು ಕೋಲ್ಕತ್ತಾದ ಸೆರೆಮನೆಗಳಿಗೆ ಭೇಟಿನೀಡಿದ್ದರು. ಈ ಪ್ರಭಾವವು ಅವರಿಗೆ ವಿದ್ಯೆಯ ಮಹತ್ವವನ್ನು ತಿಳಿಸಿಕೊಟ್ಟಿತು. ಸ್ವತಃ ಹೆಚ್ಚಿನ ವಿದ್ಯಾಭ್ಯಾಸವಿರದಿದ್ದ ಅವರು ತಮ್ಮ ಮೂರು ಗಂಡು ಮತ್ತು ಮೂರು ಹೆಣ್ಣು ಮಕ್ಕಳಿಗೆ ಹಾಗಾಗಬಾರದೆಂಬ ಆಶಯದಿಂದ  ವಿದ್ಯಾಭ್ಯಾಸ ನೀಡಿದರು. ಹಿರಿಯ ಪುತ್ರ  ಪಿ. ತಿಪ್ಪಯ್ಯ ಮಾರ್ಚ್ 20 1927ರಲ್ಲಿ ಚಿತ್ರದುರ್ಗ ಜಿಲ್ಲೆಯ ಕಡಬನಕಟ್ಟೆ ಗ್ರಾಮದಲ್ಲಿ ಜನಿಸಿದರು. ಎರಡನೆಯವರಾದ ಪಿ. ಪುಟ್ಟರಂಗಪ್ಪ ಐ.ಎ.ಎಸ್. ನಲ್ಲಿ ಉತ್ತೀರ್ಣರಾದರು. ಮೂರನೆಯವರಾದ ಡಾ. ಪಿ. ಗೋವಿಂದಸ್ವಾಮಿ ಎಂ.ಬಿ.ಬಿ.ಎಸ್. ಎಫ್.ಆರ್.ಸಿ.ಎಸ್. ಅಧ್ಯಯನ ಮಾಡಿ, ಅಮೆರಿಕೆಯಲ್ಲೇ ನೆಲೆಸಿದರು.  ಕಾನೂನಿನ ಬೆಂಬಲ, ವಿದ್ಯಾಭ್ಯಾಸದ ಎಲ್ಲ ಸೌಕರ್ಯಗಳು ಇರುವ ಈ ದಿನಗಳಲ್ಲಿ ಇದೆಲ್ಲ ವಿಶೇಷ ಸಾಧನೆಯೆಂದು ಇಂದಿನ ಯುವಜನತೆ ಪರಿಗಣಿಸದಿರಬಹುದು. ಆದರೆ ಪರಿಶಿಷ್ಟ ವರ್ಗಕ್ಕೆ ಸೇರಿರುವ ಈ ಕುಟುಂಬವು ಸ್ವಾತಂತ್ರ್ಯಪೂರ್ವದಲ್ಲಿ ಮಾಡಿರುವ ಸಾಧನೆಯನ್ನು ನೋಡುವಾಗ, ಯಾರಿಗೂ ಹೆಮ್ಮೆಯೆಸದಿರದು.

ಪಿ. ತಿಪ್ಪಯ್ಯನವರು ಅಧ್ಯಾಪಕರು. ಅಜ್ಜಂಪುರದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿ, ಇಂಟರ್ ಮೀಡಿಯೇಟ್ ಗೆಂದು ಚಿತ್ರದುರ್ಗಕ್ಕೆ ತೆರಳಿದರು. ನಂತರ ಶಿಕ್ಷಕರಾಗಿ ನೇಮಕಾತಿ ಹೊಂದಿ ತಾವು ಓದಿದ ಶಾಲೆಯಲ್ಲೇ ಶಿಕ್ಷಕರಾದುದು ಅವರಿಗೆ ಹೆಮ್ಮೆಯ ಸಂಗತಿ. 28 ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ ಅವರು ಕೆಲಸಮಾಡಿದ್ದೆಲ್ಲ ತರೀಕೆರೆಲಕ್ಕವಳ್ಳಿ, ಬಣಕಲೆ, ದಾರದಹಳ್ಳಿ ಮತ್ತು ಮೂಡಿಗೆರೆಯಂಥ ಗ್ರಾಮೀಣ ಪ್ರದೇಶಗಳಲ್ಲೇ. ಶಿಕ್ಷಕ ವೃತ್ತಿಯನ್ನು ತುಂಬ ಪ್ರೀತಿಯಿಂದ ಮಾಡಿದ ತಿಪ್ಪಯ್ಯನವರು ಅವರ ಕ್ಷೇತ್ರದಲ್ಲಿ ತುಂಬ ಜನಾನುರಾಗಿಯಾಗಿದ್ದವರು.

ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆಯವರೊಂದಿಗೆ
ಮೂಡಿಗೆರೆ ಅವರ ವೃತ್ತಿ ಜೀವನದಲ್ಲಿ ತಿರುವು ತಂದ ಸ್ಥಳ. 1982ರಲ್ಲಿ ನಿವೃತ್ತರಾದ ಅವರನ್ನು ಕೈಬೀಸಿ ಕರೆದದ್ದು ರಾಜಕೀಯ ಕ್ಷೇತ್ರ. ಎಂಭತ್ತರ ದಶಕದಲ್ಲಿ ನಡೆದ ದೇಶದ ರಾಜಕೀಯ ಚಟುವಟಿಕಗಳು ಐತಿಹಾಸಿಕ. ಇಂದಿರಾಗಾಂಧಿಯವರು ಘೋಷಿಸಿದ ತುರ್ತುಪರಿಸ್ಥಿತಿಗೆ ಉತ್ತರವಾಗಿ ಜಯಪ್ರಕಾಶ ನಾರಾಯಣರ ನೇತೃತ್ವದಲ್ಲಿ ನಡೆದ ಜನತಾಪಕ್ಷದ ಆಂದೋಲನ ದೇಶದಲ್ಲಿ ಹೊಸ ಸಂಚಲನವನ್ನು ಉಂಟುಮಾಡಿತ್ತು. ಈ ವೇಳೆಗೆ 1983ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ತಿಪ್ಪಯ್ಯನವರು ಸ್ಪರ್ಧಿಸಿದರು.  ಇಂದಿನ ಚುನಾವಣಾ ಪ್ರಕ್ರಿಯೆಗಳನ್ನು ನೋಡುವಾಗ ಹಣ ಬೆಂಬಲವಿಲ್ಲದೇ ಏನೂ ಸಾಧ್ಯವಿಲ್ಲವೆಂಬಂಥ ನೆಲೆಗೆ ತಲುಪಿದ್ದೇವೆ. ಆದರೆ ತಿಪ್ಪಯ್ಯನವರು ಸ್ಪರ್ಧಿಸಿದ್ದ ಆ ದಿನಗಳಲ್ಲಿ ಅವರಲ್ಲಿದ್ದುದು ಕೇವಲ ನೈತಿಕ ಬಲ ಮತ್ತು ಆತ್ಮವಿಶ್ವಾಸಗಳು  ಮಾತ್ರ. ಅದನ್ನು ಆದರಿಸುವ ಜನರೂ ಇದ್ದರು. ಹೀಗಾಗಿ ಅವರು ಮೂಡಿಗೆರೆಯಿಂದ ಆಯ್ಕೆಯಾದರು. ಅದು ನಿಸ್ಪೃಹತೆಗೆ ಸಂದ ಗೌರವ. ಆಗ ಅವರು ಮಾಡಿದ ಶಿಕ್ಷಕ ವೃತ್ತಿ ಮತ್ತು ಜನಪರ ಕಾಳಜಿಗಳು ಕೆಲಸಮಾಡಿದವೇ ವಿನಾ ಮತ್ತಾವ ಬೆಂಬಲವೂ ಅವರಿಗಿರಲಿಲ್ಲ. 1985ರಲ್ಲಿ ಅನಿರೀಕ್ಷಿತವಾಗಿ ವಿಧಾನಸಭೆ ವಿಸರ್ಜನೆಯಾಯಿತು. ಪುನಃ ಸ್ಪರ್ಧಿಸಲು ಅವರಿಗೆ ಅವಕಾಶ ದೊರೆಯಲಿಲ್ಲ. ಆದರೆ ಅವರ ರಾಜಕೀಯ ಜೀವನವೇನೂ ಸ್ಥಗಿತವಾಗಲಿಲ್ಲ. ಇವರ ಕಾರ್ಯಕ್ಷಮತೆಯ ಅರಿವಿದ್ದ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ಮತ್ತು ದೇವೇಗೌಡರ ಬೆಂಬಲದಿಂದ  ಮುಂದೆ 1988ರಲ್ಲಿ ವಿಧಾನಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾದರು. 

ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ಹಾಗೂ
  ಜೆ.ಎಚ್. ಪಟೇಲ್ ರೊಂದಿಗೆ
ಶಾಲೆಯಲ್ಲಿ ಪಾಠದ ಜತೆಗೆ ಪಠ್ಯೇತರ ಚಟುವಟಿಕೆಗಳಾದ ಸ್ಕೌಟ್ ಮತ್ತು ಗೈಡ್, ಸೇವಾದಳ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದರು. ಅದನ್ನೇ ತಮ್ಮ ಶಿಷ್ಯವೃಂದಕ್ಕೆ ಹಂಚಿದರು. ಇವುಗಳಲ್ಲಿ ಕಲಿತ ನಾಯಕತ್ವದ ಗುಣಗಳನ್ನು ಮುಂದೆ ಅವರು ಕೆಲಸಮಾಡಿದ ಸಂಘ-ಸಂಸ್ಥೆಗಳಲ್ಲೂ ಬಳಸಿದರು. ತಾಲ್ಲೂಕು ಶಿಕ್ಷಕ ಸಂಘದ ಅಧ್ಯಕ್ಷ, ಕರ್ನಾಟಕ ಎಜುಕೇಷನ್ ಫೆಡರೇಷನ್ ನ ಅಧ್ಯಕ್ಷ ಪದವಿಗಳು ಅವರನ್ನು ಅರಸಿಬಂದವು. ಅವರು ಕಲಾಪ್ರೇಮಿಯೂ ಹೌದು. ಅಜ್ಜಂಪುರದ ಕಲಾಸೇವಾ ಸಂಘದ ನಾಟಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಭಾಗವಹಿಸಿದರು. ಶಾಸಕರಾಗಿದ್ದಾಗಿನ ಅವಧಿಯಲ್ಲಿ ಅವರು ವಿವಿಧ ಸಮಿತಿಗಳಿಗೆ ಸದಸ್ಯರಾಗಿ, ವಿಶೇಷವಾಗಿ ತಮ್ಮ ಮೆಚ್ಚಿನ ಕ್ಷೇತ್ರವಾದ ಶಿಕ್ಷಣ ಸುಧಾರಣೆ ಮತ್ತು ಪರಿಶಿಷ್ಟ ಕಲ್ಯಾಣ ಸಮಿತಿಗಳ ಬಗ್ಗೆ  ವಿಧಾನಸಭೆ ಮತ್ತು ವಿಧಾನ ಪರಿಷತ್ ಗಳಲ್ಲಿ ಚರ್ಚಿಸಿದರು, ಕಾರ್ಯಕ್ರಮಗಳನ್ನು ರೂಪಿಸಿದರು.  ಇಂದಿನ ಶಾಸಕರ ಮೋಜಿನ ವಿದೇಶೀ ಪ್ರವಾಸಗಳಂತಲ್ಲದೆ, ಅಂದು ತಿಪ್ಪಯ್ಯನವರು ಹಾಲೆಂಡ್, ಆಸ್ಟ್ರೇಲಿಯಾ, ಇಂಗ್ಲೆಂಡ್ ಗಳಲ್ಲಿ ಕೈಗೊಂಡ ಅಧ್ಯಯನ ಪ್ರವಾಸದ ಸುಧಾರಣಾ ಅಂಶಗಳನ್ನು ಸರಕಾರದ ನೆರವಿನಿಂದ ಅನುಷ್ಠಾನಗೊಳಿಸಿದರು. 


ಹೆಗ್ಗಡೆಯವರೊಂದಿಗೆ ತಿಪ್ಪಯ್ಯ ದಂಪತಿಗಳು,
ಎಡಮೂಲೆಯಲ್ಲಿ ಕಾಣುತ್ತಿರುವವರು
ವೈ.ಎಸ್.ವಿ. ದತ್ತ
ಮೌಲ್ಯಾಧಾರಿತ ರಾಜಕಾರಣದ ಪ್ರಸ್ತಾಪ ಮಾಡಿದ್ದಕ್ಕೆ ಬೆಲೆ ತೆತ್ತ ರಾಮಕೃಷ್ಣ ಹೆಗ್ಗಡೆಯವರಿಗೆ ನಿಸ್ಪೃಹರು, ಪ್ರಾಮಾಣಿಕರ ಬಗ್ಗೆ ಒಲವಿತ್ತು. ಹೆಗ್ಗಡೆಯವರು ತಿಪ್ಪಯ್ಯನವರನ್ನು 1994ರಲ್ಲಿ ಭೇಟಿಮಾಡಿದಾಗ, ತಿಪ್ಪಯ್ಯ ರಾಜಕೀಯವನ್ನು ಪ್ರವೇಶಿಸಿ ದಶಕವೇ ಕಳೆದಿತ್ತು. ಆ ದಿನಗಳಲ್ಲೂ ಅವರಿಗೊಂದು ಸ್ವಂತ ಮನೆಯಿರಲಿಲ್ಲ. ಇದೆಲ್ಲ ಇಂದು ಅನೂಹ್ಯ ಸಂಗತಿ. ಶಾಸಕನಾಗಿಯೂ ಇರಲೊಂದು ಸ್ವಂತ ಮನೆ ಮಾಡಿಕೊಳ್ಳದಿರುವ ತಿಪ್ಪಯ್ಯನವರ ಬಗ್ಗೆ ಹೆಗ್ಗಡೆಯವರಿಗೆ ಆಶ್ಚರ್ಯ ಮತ್ತು ಗೌರವಗಳು ಮೂಡಿದ್ದವು. ಅವರು ಅದನ್ನು ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸಿದರು.  ಆಗ ಅಲ್ಲಿಯೇ ಇದ್ದು ಕೇಳಿಸಿಕೊಂಡ  ಈಗಿನ ಯುವ ಜನತಾದಳದ ಹಿರಿಯ ಉಪಾಧ್ಯಕ್ಷ ಮತ್ತು ತಾಲ್ಲೂಕು ಪಂಚಾಯ್ತಿ ಸದಸ್ಯರಾಗಿರುವ ತಿಪ್ಪಯ್ಯನವರ ಮಗ ಟಿ. ಉಮಾಶಂಕರ್ ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾರೆ. ತಂದೆಯಂತೇ ಸರಳತೆ ಮತ್ತು ಶಿಸ್ತುಗಳನ್ನು ಮೈಗೂಡಿಸಿಕೊಂಡಿರುವ ಅವರಿಗೆ ಈ ಬಗ್ಗೆ ಖೇದವಾಗಲೀ, ವಿಷಾದವಾಗಲೀ ಇಲ್ಲ. 

ಡಿ.ಎಚ್. ಶಂಕರಮೂರ್ತಿ, ಹಾರ್ನಹಳ್ಳಿ
ರಾಮಸ್ವಾಮಿಯವರೊಂದಿಗೆ
ತಿಪ್ಪಯ್ಯನವರು ಪಕ್ಷಾಂತರ ಮಾಡಲಿಲ್ಲವೆನ್ನುವುದು ಅವರ ರಾಜಕೀಯ ನಿಷ್ಠೆಯನ್ನು ತೋರುತ್ತದೆ. 1995-96ರಲ್ಲಿ ರಾಮಕೃಷ್ಣ ಹೆಗ್ಗಡೆಯವರನ್ನು ಉಚ್ಚಾಟಿಸಲಾಯಿತು. ತಿಪ್ಪಯ್ಯನವರು ರಾಮಕೃಷ್ಣ ಹೆಗ್ಗಡೆಯವರನ್ನೇ ಬೆಂಬಲಿಸಿದರೇ ವಿನಾ ದೇವೇಗೌಡರ ಪಾಳೆಯಕ್ಕೆ ಹಾರಲಿಲ್ಲ.  ಮುಂದೆ ಹೆಗ್ಗಡೆಯವರು ಕರ್ನಾಟಕ ನವ ನಿರ್ಮಾಣ ವೇದಿಕೆಯನ್ನು ರಚಿಸಿದರು. ಇದರಿಂದ ರಾಜಕೀಯ ಮರುಹುಟ್ಟು ಸಾಧ್ಯ ಎಂಬ ಹೆಗ್ಗಡೆಯವರ ನಂಬಿಕೆ ಹುಸಿಯಾಯಿತು. ಅವರನ್ನು ನಂಬಿದ್ದವರು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಬೇರೆ ಬೇರೆ ದಾರಿ ಹಿಡಿದರು. ಏಕಾಂಗಿಯಾದ ಹೆಗ್ಗಡೆಯವರು ಕೇಂದ್ರದತ್ತ ಮುಖಮಾಡಿದರು. ಅಲ್ಲಿಯೂ ಅವರಿಗೆ ನೆಮ್ಮದಿಯಿಲ್ಲದಂತಾಯಿತು. ಮುಂದಿನದೆಲ್ಲ ಇತಿಹಾಸವಾಗಿ ನಮ್ಮ ಕಣ್ಣಮುಂದಿದೆ. ಆದರೆ ಈ ಹಂತದಲ್ಲಿ ತಿಪ್ಪಯ್ಯನವರ ಜೀವನದಲ್ಲಿ ನಡೆದ ಒಂದು ಘಟನೆ ಅಚ್ಚರಿ ತರುವಂತಿದೆ. ತಿಪ್ಪಯ್ಯನವರು ನವನಿರ್ಮಾಣ ವೇದಿಕೆಯಲ್ಲಿದ್ದ ರಮೇಶ್ ಬಂದಗದ್ದೆ ಮತ್ತು ಚಿತ್ರ ನಟ ಮಾನು ಇವರೊಂದಿಗೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಕಾರಿನಲ್ಲಿ ಬರುತ್ತಿದ್ದರು. ಅರಸೀಕೆರೆಯ ಬಳಿ ಕಾರು ಅಪಘಾತಕ್ಕೀಡಾಯಿತು. ಮಾನು ಮತ್ತು ರಮೇಶ್ ಬಂದಗದ್ದೆ ಸ್ಥಳದಲ್ಲೇ ಸಾವನ್ನಪ್ಪಿದರು. ಅವರೊಂದಿಗೇ ಇದ್ದ ತಿಪ್ಪಯ್ಯನವರು ಯಾವ ಗಾಯಗಳಿಲ್ಲದೇ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದರು.

ನಂತರದ ದಿನಗಳಲ್ಲಿ ರಾಜಕೀಯದ ನಂಟು ಅವರಿಗೆ ಸಾಕಾಗಿಹೋಗಿತ್ತು. ಶಿವಮೊಗ್ಗದ ಅರಬಿಂದೋ ಸೊಸೈಟಿ, ನೇತಾಜಿ ಎಜುಕೇಷನ್ ಸೊಸೈಟಿ ಮುಂತಾದ ಸಂಸ್ಥೆಗಳ ಮೂಲಕ ತಮ್ಮ ಮೆಚ್ಚಿನ ಶಿಕ್ಷಣ ಕ್ಷೇತ್ರದಲ್ಲಿ ಪುನಃ ತೊಡಗಿಸಿಕೊಂಡರು. ತಮ್ಮ 84 ವರ್ಷ ವಯಸ್ಸಿನ ತುಂಬು ಜೀವನವನ್ನು ಜನವರಿ 16, 2011ರಂದು ವಿಧಿವಶರಾದರು. ಅವರಿಗೆ ಮೂವರು ಗಂಡು ಮತ್ತು ಮೂವರು ಹೆಣ್ಣುಮಕ್ಕಳಿದ್ದಾರೆ.

ಸರಳ, ಸಭ್ಯ ರಾಜಕಾರಣಿ, ಶಿಕ್ಷಕರಲ್ಲದೆ ಅಜ್ಜಂಪುರ  ಎಲ್ಲಕ್ಕಿಂತ ಮುಖ್ಯವಾಗಿ ಓರ್ವ ಮಾನವತಾವಾದಿಯನ್ನು ಕಳೆದುಕೊಂಡಂತಾಗಿದೆ.  

   ಚಿತ್ರ-ಲೇಖನ : ಅಜ್ಜಂಪುರ ಮಲ್ಲಿಕಾರ್ಜುನ

 ದೂರವಾಣಿ 9060304592

 * * * * * * * 











ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.

126. ಅಪೂರ್ವ ಕಥೆ ಕವನಗಳ ಅವಲೋಕನ

ಅಜ್ಜಂಪುರ ಸೀತಾರಾಂ