ಅಪರೂಪದ ಸಾಧನೆಯ ಹೆಚ್.ಆರ್.ಇಂದಿರಾ

ಅಜ್ಜಂಪುರದ ಹಿರೇನಲ್ಲೂರು ರಾಮಸ್ವಾಮಿಯವರ ಪುತ್ರಿ ಇಂದಿರಾ, 1960ರ ದಶಕದಲ್ಲಿ ಬೆಂಗಳೂರಿನ ಕಾಫೀ ಬೋರ್ಡ್ ನಲ್ಲಿ ಉದ್ಯೋಗಿಯಾಗಿದ್ದರು.  ಅವರಿಗೆ ಆಕಾಶವಾಣಿಯ ಸಂಪರ್ಕ ಚೆನ್ನಾಗಿತ್ತು. ಅವರಲ್ಲಿದ್ದ ಸಾಹಿತ್ಯ, ಸಂಗೀತಗಳ ಸದಭಿರುಚಿಯ ಪರಿಣಾಮವಾಗಿ, ಎಚ್. ವಿ. ನಾರಾಯಣ್ ಅವರ ಸಲಹೆ-ಸಹಕಾರಗಳೊಂದಿಗೆ ಕನ್ನಡ ಲೇಖಕಿಯರ ಸಂಘವನ್ನು ಸ್ಥಾಪಿಸಿದರು. ಅದುವರೆಗೂ ಲೇಖಕಿಯಾಗಿ ಪರಿಚಿತರಿದ್ದ ಎಚ್. ಎಸ್. ಪಾರ್ವತಿಯವರನ್ನು ಹುರಿದುಂಬಿಸಿ ಭಾಷಣಕಾರ್ತಿಯನ್ನಾಗಿ ರೂಪಿಸಿದರು. ಅಜ್ಜಂಪುರದಂಥ ಸಣ್ಣ ಊರಿನಿಂದ ಬೆಂಗಳೂರು ತಲುಪಿ, ಅಲ್ಲಿ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡದ್ದು ಅವರ ಹೆಚ್ಚುಗಾರಿಕೆಯಾಗಿರುವಂತೆಯೇ, ಬೆಂಗಳೂರಿನಲ್ಲಿ ಆ ದಿನಗಳಲ್ಲಿ ಅಂಥ ವಾತಾವರಣ ಇದ್ದಿತೆನ್ನುವುದೂ ಸ್ಮರಣಾರ್ಹ.  ಸಾಹಿತ್ಯ, ಸದಭಿರುಚಿ, ಸಂಘಟನೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸದಾ ಚಟುವಟಿಕೆ, ಕ್ರಿಯಾಶೀಲತೆಯ ಸ್ವಭಾವ ಹೊಂದಿದ್ದ ಇಂದಿರಾ ನಮ್ಮ ಊರಿನವರೆಂಬುದು ಹೆಮ್ಮೆಯ ಸಂಗತಿ.



ಶ್ರೀಮತಿ ಮಾಲಾ ಮಂಜುನಾಥ್  
ಇಂಥ ಸಾಧಕಿಯ ಸೋದರಿ, ಶ್ರೀಮತಿ ಮಾಲಾ ಮಂಜುನಾಥ್ ಕೂಡ ಸಾಹಿತ್ಯದ ಅಭಿರುಚಿಯುಳ್ಳವರು. ನಾಡಿನ ಹಲವು ಕನ್ನಡ ಪತ್ರಿಕೆಗಳಲ್ಲಿ  ಅವರ ಕಿರುಗತೆಗಳು, ಕವಿತೆಗಳು ಪ್ರಕಟಗೊಳ್ಳುತ್ತಿರುತ್ತವೆ. ತಮ್ಮ ಪ್ರೀತಿಯ ಸೋದರಿಯ ಕುರಿತಾದ ನೆನಪುಗಳನ್ನು ಆತ್ಮೀಯವಾಗಿ ಇಲ್ಲಿ ಹಿಡಿದಿಟ್ಟಿದ್ದಾರೆ. 

==========================================================================================


ಹೆಚ್.ಆರ್.ಇಂದಿರಾ
ಮಹಿಳೆಯರನ್ನು ಸಂಘಟಿಸುವುದು ಕಷ್ಟದ ಕೆಲಸ, ಅದರಲ್ಲೂ ಲೇಖಕಿಯರನ್ನು ಒಂದೇ ವೇದಿಕೆಯಲ್ಲಿ - ಒಂದೇ ಸಂಘಟನೆಯಡಿ ತರುವುದು ಇನ್ನಷ್ಟು ಕಷ್ಟದ ಕೆಲಸ. ಇಂತಹ ಅಪರೂಪದ ಸಾಧನೆ ಹೆಚ್.ಆರ್.ಇಂದಿರಾ ಅವರದ್ದು. 

ಸನಿಹವಾಣಿಯಿರಲಿ, ದೂರವಾಣಿಯೇ ಅಲಭ್ಯವಿದ್ದ ದಿನಗಳವು. ಮಹಿಳೆಯರ ನೋವು - ನಲಿವುಗಳನ್ನು ಅವರೇ ಚಿತ್ರಿಸಬೇಕು, ಅಭಿವ್ಯಕ್ತಿಯು ಸಹಜವಾಗಬೇಕು. ಹೆಣ್ಣಿನ ಒಡಲೊಳಗಿನ ಕಥೆಗಳು ಹೂವಾಗಿ ಅರಳಬೇಕು. ಓದುಗರ ಮನ ಮುಟ್ಟಬೇಕು. ಹಾಗೆ ಬರೆಯುವ ಬರಹಗಾರ್ತಿಯರು ಒಟ್ಟಾಗಿ ಸೇರಿ, ಮಾತು - ಮಥನ ನಡೆದು, ಅಂತಹ  ಅಮೃತಮಥನದಿಂದ ಒಳ್ಳೆಯ ಸಾಹಿತ್ಯ ಹೊಮ್ಮಬೇಕು. ಇಂತಹ ಕನಸಿಟ್ಟುಕೊಂಡ ಇಂದಿರಾ ಅರ್ಧ ಶತಮಾನದ ಹಿಂದೆ ಅಂದರೆ, ೧೯೬೭ ರಲ್ಲಿ "ಕನ್ನಡ ಲೇಖಕಿಯರ ಸಂಘ"ದ ಸ್ಥಾಪನೆಗೆ ಕಾರಣರಾದರು. ಸಂಘದ ಸಂಸ್ಥಾಪಕ ಸಂಚಾಲಕಿಯಾಗಿ, ತಮ್ಮ ಉದ್ಯೋಗ, ಮನೆಯ ಜವಾಬ್ದಾರಿಗಳ ನಡುವೆ ಅಪಾರ ಪರಿಶ್ರಮದಿಂದ ಸಂಘವನ್ನು ಕಟ್ಟಿ ಬೆಳೆಸಿದರು. ತುಂಬ ಜನ ಲೇಖಕಿಯರು ಆಗ ಬರೆಯುತ್ತಿದ್ದರೂ, ಅಪಾರ ಜನಮೆಚ್ಚುಗೆ ಗಳಿಸಿದ್ದರೂ, ಪರಸ್ಪರ ಪರಿಚಯವಿರಲಿಲ್ಲ. ಅದಕ್ಕೊಂದು ಸಂಘಟನೆ, ವೇದಿಕೆ ಬೇಕಿತ್ತು. ಅದನ್ನು ಸಾಧಿಸಿದವರು ಇಂದಿರಾ. ಆಗ ಸಂಘವು ಹಲವು ಹತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಅದಕ್ಕಾಗಿ ಇಂದಿರಾ ಬಿಡುವಿಲ್ಲದಂತೆ ದುಡಿದರು. ಕನ್ನಡ ಲೇಖಕಿಯರನ್ನು ಒಗ್ಗೂಡಿಸಿದ ಶ್ರೇಯಸ್ಸು ಅವರದ್ದು.   ಸಂಘದ ಮೊದಲ ಅಧ್ಯಕ್ಷರು ಎಂ.ಕೆ.ಇಂದಿರಾ ಅವರು.  ಇಂದು ಬಿ.ಕೆ.ಎಸ್.ವರ್ಮ ಅವರ ಹೆಸರು ಜಗದ್ವಿಖ್ಯಾತ. ಅಂದು ಅವರು ಉದಯೋನ್ಮುಖ ಚಿತ್ರಕಲಾವಿದರು. ಹೆಚ್.ಆರ್.ಇಂದಿರಾ ಅವರು,  ಛಾಯಾಚಿತ್ರಗಳ ಬದಲು, ಎಲ್ಲ ಲೇಖಕಿಯರ ರೇಖಾಚಿತ್ರಗಳನ್ನು ವರ್ಮರಿಂದ ಬರೆಯಿಸಿ, ಎಲ್ಲ ಲೇಖಕಿಯರ ಸಂಕ್ಷಿಪ್ತ ಪರಿಚಯದೊಂದಿಗೆ ಬೆಂಗಳೂರಿನ ಬಸವನಗುಡಿಯಲ್ಲಿ ಪ್ರದರ್ಶನವೊಂದನ್ನು ಏರ್ಪಡಿಸಿದ್ದರು. ಮೈಸೂರು, ಶಿವಮೊಗ್ಗದ ಲೇಖಕಿಯರಲ್ಲದೇ, ಕರ್ನಾಟಕದ ಆಚೆಯ ಚೆನ್ನೈನ ಲೇಖಕಿಯರನ್ನೂ ಕರೆಸಿದ್ದು ಅಂದಿಗೆ ಒಂದು ದಾಖಲೆಯೇ ಹೌದು. ಅಂದು ಇಂದಿರಾ ರಚಿಸಿದ "ಪ್ರತಿಭಾನ್ವಿತೆ" ಕಿರುನಾಟಕದ ಪ್ರದರ್ಶನವೂ ಇತ್ತು.


೧೯೬೮ ರಲ್ಲಿ ಪ್ರಕಟವಾದ "ಕಥಾಪಲ್ಲವ" ಸಂಕಲನದ್ದು ಇನ್ನೊಂದು ದಾಖಲೆ. ಎಪ್ಪತ್ತೇಳು ಲೇಖಕಿಯರ ಕಥೆಗಳ ಅಪೂರ್ವ ಸಂಕಲನವದು. ಇಂದಿರಾ ಅವರೇ ಸಂಪಾದಕಿ . "ಹೆಸರಾಂತ ಹಿರಿಯ ಲೇಖಕಿಯರು ಕಥಾಲೋಕದ ಮಹತ್ತ್ವದ ಸ್ಥಾನವನ್ನು ಅರಿತು, ಲಕ್ಷಣ ಮತ್ತು ವೈಶಿಷ್ಟ್ಯಗಳಿಂದ ಕಥೆಗಳನ್ನು ವಿಶೇಷವಾಗಿ ಬರೆದುಕೊಡಲು, ತಾವು ಬರೆಯುತ್ತಿದ್ದ ಕಾದಂಬರಿಗಳನ್ನು ಸ್ವಲ್ಪ ಕಾಲ ಅಪೂರ್ಣವಾಗಿ ನಿಲ್ಲಿಸಿ, ಆಲೋಚಿಸಿ ರಚಿಸಿದ್ದಾರೆ. ಕಿರಿಯ ಲೇಖಕಿಯರು ಉತ್ಸಾಹದಿಂದ ಮಿಂಚು-ಗುಡುಗಾಗಿ ಕಥೆ ಬರೆದಿದ್ದಾರೆ. ಸಂಪ್ರದಾಯದ ಕಥೆಗಳ ಪಕ್ಕದಲ್ಲಿಯೇ ಹೊಸ ರೀತಿಯ ಕಥೆಗಳೂ ಇವೆ.  ಸೂಕ್ಷ್ಮತೆಯೊಂದಿಗೆ ತೀಕ್ಷ್ಣತೆಯೂ ಕೂಡಿದೆ. ಘನತೆಯಿದೆ. ಬದಿಯಲ್ಲಿ ಹಗುರತೆಯಿದೆ. ವೃಕ್ಷದ ಅಡಿ ಮೊಳಕೆಯೆದ್ದಿದೆ. ವೃಕ್ಷ ಇನ್ನೂ ಆಳವಾಗಿ ಬೇರುಬಿಟ್ಟು ಹೆಚ್ಚು ಫಲಭರಿತವಾಗುತ್ತದೆ. ಮೊಳಕೆ ಬೆಳೆದು ಎತ್ತರವಾಗುವುದು. ಅದಕ್ಕೆ ಎಲ್ಲ ಘಟ್ಟಗಳಲ್ಲಿಯೂ ಪೋಷಣೆ ಅಗತ್ಯವೆಂಬುದನ್ನು ನಾವು ಕಂಡಿದ್ದೇವೆ. ಇಲ್ಲಿನ ಕಥೆಗಳಲ್ಲಿ ನಾವು ಕಾಣುವುದು ಸತ್ವವನ್ನು, ಪ್ರಯೋಗವನ್ನು.  ಇಲ್ಲಿ ವೈವಿಧ್ಯವುಂಟು. ವಿಸ್ತಾರವಾಗಿಯೂ ಚಾಚಿದೆ. ಏನೇ ಆಗಲಿ, ಹೆಣ್ಣು ತನ್ನ ಕಥೆಯನ್ನು ತಾನೇ ತನ್ನದೇ ಆದ ರೀತಿಯಲ್ಲಿ ಹೇಳಿದ್ದಾಳೆ........" ಎಂದಿರುವ ಇಂದಿರಾ ಅವರ ಸಂಪಾದಕೀಯದ ಸಾಲುಗಳು ಇಂದಿಗೂ ಚಿಂತನೆಗೆ ಹಚ್ಚುತ್ತವೆ. 

ಇಂತಹ ಹೆಚ್.ಆರ್.ಇಂದಿರಾ, ನನ್ನ ಪ್ರೀತಿಯ ಅಕ್ಕ "ಇನ್ನಿ". ಅಜ್ಜಂಪುರದವರಾದ, ಹಿರೇನಲ್ಲೂರು ಶ್ಯಾನುಭೋಗರಾದ ಹೆಚ್.ವಿ.ರಾಮಸ್ವಾಮಿಯವರ ಮುದ್ದಿನ ಮಗಳು ಇಂದಿರಾ. ಒಡಹುಟ್ಟಿದವರಿಗೆ "ಇಂದಿರಕ್ಕ", ಆತ್ಮೀಯ ಗೆಳತಿಯರಿಗೆ "ಇಂದು". ಅವಳಿಗೆ ಚಿಕ್ಕ ವಯಸ್ಸಿನಿಂದಲೇ ಸಂಗೀತದಲ್ಲಿ ಆಸಕ್ತಿ. ಇದಕ್ಕೆ ತಾಯಿಯ ಒತ್ತಾಸೆ. ಮನೆಗೇ ಗುರುಗಳನ್ನು ಕರೆಯಿಸಿ ಸಂಗೀತದ ಪಾಠ ಹೇಳಿಸಲಾಗುತ್ತಿತ್ತು. ಮುಂದೆ ಬೆಂಗಳೂರಿನಲ್ಲಿ ಕಾಫಿ ಬೋರ್ಡ್‍ನ ಉದ್ಯೋಗಕ್ಕೆ ಸೇರಿದಾಗ, ಆಕಾಶವಾಣಿಯಲ್ಲಿ ಜಾನಪದ ಗೀತೆ, ಭಾವಗೀತೆಗಳನ್ನು ಹಾಡಲು ಸಹಜವಾಗಿ ಅವಕಾಶ ದೊರೆಯಿತು.


ಕನ್ನಡ, ಕನ್ನಡ ಸಾಹಿತ್ಯ, ಪತ್ರಿಕೋದ್ಯಮಗಳನ್ನು ಕಟ್ಟಿ ಬೆಳೆಸಿದ ಪ್ರಾತಃಸ್ಮರಣೀಯರು, ಡಿವಿಜಿ.  ಅವರ "ಮಂಕುತಿಮ್ಮನ ಕಗ್ಗ" ಅಧ್ಯಾತ್ಮ ಮತ್ತು ಜೀವನಾನುಭವಗಳ ಅಪೂರ್ವ ಕೃತಿ. ಕಗ್ಗದ "ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ" ಮುಂತಾದ ಪದ್ಯಗಳಿಗೆ ರಾಗ ಹಾಕಿ, ತನ್ನ ಅಕ್ಕ ಪದ್ಮಾರೊಂದಿಗೆ ಡಿವಿಜಿಯವರ ಮುಂದೆ ಕುಳಿತು ಸುಶ್ರಾವ್ಯವಾಗಿ ಹಾಡಿ, ಮೆಚ್ಚುಗೆ ಗಳಿಸಿದ್ದಳು ಇಂದಿರಕ್ಕ. ಡಿವಿಜಿಯವರೇ ಮೆಚ್ಚಿ ಸಂತೋಷಪಟ್ಟು, ತಮ್ಮ "ಮಂಕುತಿಮ್ಮನ ಕಗ್ಗ" ಹಾಗೂ "ಉಮರನ ಒಸಗೆ" ಪುಸ್ತಕಗಳನ್ನು ತಮ್ಮ ಹಸ್ತಾಕ್ಷರದೊಂದಿಗೆ, ಆಶೀರ್ವಾದದೊಂದಿಗೆ ನೀಡಿದ್ದರು. ಇದಕ್ಕಿಂತ ದೊಡ್ಡ ಪ್ರಶಸ್ತಿ ಇನ್ನೇನು ಬೇಕು. 

ಇಂದಿರಾ ನನಗಿಂತ ೨೨ ವರ್ಷ ದೊಡ್ಡವಳು. ಈಗಲೂ ನನ್ನ ನೆನಪಿನಲ್ಲಿ ಉಳಿದಿರುವುದು ಎಂದರೆ, ನಮ್ಮ ತಂದೆಯವರ ಫೇವರೆಟ್ ಕೀರ್ತನೆ "ದಾಸನ ಮಾಡಿಕೋ ಎನ್ನ, ಸ್ವಾಮಿ, ಸಾಸಿರ ನಾಮದ ವೆಂಕಟರಮಣ" ಕೃತಿಯನ್ನು ಅವಳು ತುಂಬ ಅದ್ಭುತವಾಗಿ ಭಾವಪೂರ್ಣವಾಗಿ ಹಾಡುತ್ತಿದ್ದ ಬಗೆ. ಅದೂ ಕೇಳಿದ ತಕ್ಷಣ ಹಾಡುತ್ತಿದ್ದಳು. ಅಂತಹ ಸರಳತೆ ಅವಳದ್ದು. ಅಂತೆಯೇ, ಮಧ್ಯರಾತ್ರಿ ನನಗೆ ಎಂದಾದರೊಮ್ಮೆ ಎಚ್ಚರವಾದಾಗ ಕಣ್ಣಿಗೆ ಬೀಳುತ್ತಿದ್ದ ಟೇಬಲ್ ಲ್ಯಾಂಪಿನ ಬೆಳಕು. ಮಧ್ಯರಾತ್ರಿಯಲ್ಲಿ ಇಂದಿರಕ್ಕ ಪೆನ್ನು ಹಿಡಿದು ಬರೆಯುತ್ತಿದ್ದ ದೃಶ್ಯ. ದಿನವೂ ಬೆಳಿಗ್ಗೆ ನಮ್ಮ ತಂದೆಯವರೊಂದಿಗೆ, ನಾನೂ - ಇಂದಿರಕ್ಕ ಜೊತೆಯಲ್ಲಿ ಕುಳಿತು ಊಟ ಮಾಡುತ್ತಿದ್ದೆವು. ಆಗ ತಂದೆ - ಮಗಳ ಮಾತು, ಹಾಸ್ಯ ಚಟಾಕಿ. ಅನಂತರ ಇಂದಿರಕ್ಕ ಆಫೀಸಿಗೆ. ಉದ್ದವಾದ - ದಪ್ಪದ ಜಡೆ ಹೆಣೆದುಕೊಂಡು ಬಲತುದಿಗೆ ಒಂದು ಗುಲಾಬಿ ಹೂವು ಮುಡಿದು ಹೋಗುತ್ತಿದ್ದ ಅವಳ ಪರಿ.  ಅವಳನ್ನು ಆಫೀಸಿಗೆ ಕಳುಹಿಸಲು ಕಾಂಪೌಂಡ್ ಗೇಟಿನವರೆಗೂ ಬಂದು ನಿಲ್ಲುತ್ತಿದ್ದ ನಮ್ಮಮ್ಮ. ಇವತ್ತಿಗೂ ನನ್ನ ಮನಸ್ಸಿನಲ್ಲಿ  ಹಸಿರಾಗಿ ಉಳಿದಿರುವ ನೆನಪುಗಳಿವು.


ಕಾಫಿಬೋರ್ಡ್‍ನಲ್ಲಿ ಕೆಲಸ ಮಾಡುತ್ತಿದ್ದ ಇಂದಿರಕ್ಕ ತುಂಬಾ ಸ್ನೇಹಜೀವಿ. ಅವಳ ಸ್ನೇಹವಲಯ ತುಂಬ ದೊಡ್ಡದು. ತನಗೇ ಕಷ್ಟವಿದ್ದರೂ, ಸ್ನೇಹಿತರಿಗೆ ಸಹಾಯ ಹಸ್ತ ತೋರಿಸುವಲ್ಲಿ ಸದಾ ಮುಂದೆ. ಸ್ವಲ್ಪ ಹೆಚ್ಚು ಮೊತ್ತದ ಹಣ ಒಟ್ಟು ಮಾಡಬೇಕಾದ ಇಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದ ಗೆಳೆಯರೊಬ್ಬರಿಗೆ, ಒಂದು ದಿನ ಬೆಳಿಗ್ಗೆ ಕಚೇರಿಗೆ ಬರುತ್ತಿದ್ದಂತೆಯೇ ಒಬ್ಬರು ಒಂದು ಲಕೋಟೆಯನ್ನು ತಂದು ಕೊಟ್ಟರು. ಒಡೆದು ನೋಡಿದರೆ ಅಂದು ಅವರಿಗೆ ಕಡಿಮೆ ಬಿದ್ದಿದ್ದಷ್ಟು ಮೊತ್ತದ ಹಣ, ಜೊತೆಗೊಂದು ಸಣ್ಣ ಚೀಟಿ. "ನಿನ್ನೆ ಅಷ್ಟು ಹೊತ್ತು ಮಾತನಾಡುತ್ತಿದ್ದೆವಲ್ಲ. ಆಗ ನಿಮ್ಮ 
ತೊಂದರೆ ಕುರಿತು ಒಂದು ಮಾತೂ ಹೇಳಲಿಲ್ಲ. ಬೆಳಿಗ್ಗೆ ಗೊತ್ತಾಯಿತು. ಇದು ನ್ಯಾಯವೇ? ಸಾಧ್ಯವಿರುವಾಗಲಾದರೂ ಒಬ್ಬರು ಇನ್ನೊಬ್ಬರಿಗೆ ನೆರವಾಗದಿದ್ದರೆ, ಜೀವನ ಏನು ಸಾರ್ಥಕ ಎನ್ನುವಿರಿ?" ಇಂತಹ ಸ್ನೇಹಜೀವಿ ಇಂದಿರಕ್ಕ. ಕಷ್ಟಕ್ಕೆ ಮರುಗುವುದು ಅವಳ ಜಾಯಮಾನ. ಸಂತೋಷದಿಂದ ಸಹಾಯ ಮಾಡುವುದು ಅವಳ ಸ್ವಭಾವ. ಮನೆ, ಆಫೀಸ್, ಸಾಹಿತ್ಯ, ಲೇಖಕಿಯರ ಸಂಘ, ಉಳಿದ ಸಾಹಿತ್ಯಕ ಚಟುವಟಿಕೆಗಳು  ಎಲ್ಲವುಗಳಿಗೂ ನ್ಯಾಯ ದೊರಕಿಸುತ್ತಿದ್ದ ಅವಳ 
ಪರಿ ನಿಜಕ್ಕೂ ಅದ್ಭುತ.

ಇಂದಿರಕ್ಕ ಬರೆದ ಕಾದಂಬರಿಗಳು : ಮರಳಿ ಹಳ್ಳಿಗೆ, ಬಯಕೆಯ ಬಳ್ಳಿ, ಚೌಕಾ ಬಾರಾ ("ಸಂಯುಕ್ತ ಕರ್ನಾಟಕ"ದಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು), ಕಲಾರತ್ನ, ಲಕ್ಷ್ಮೀಕಟಾಕ್ಷ ("ಕನ್ನಡ ಪ್ರಭ"ದಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು), ಸುಚಿತ್ರಾ, ದಾದಿ.
ನಾಟಕಗಳು : ಗುಡ್‍ಲಕ್, ಬಿದ್ದೆನಲ್ಲ ಬೇಸ್ತು, ಧರೆಗಿಳಿದು ಬಾ ದೇವಿ, ಪ್ರತಿಭಾನ್ವಿತೆ.
ಕಥಾ ಸಂಕಲನಗಳು : ಸಪ್ತಸ್ವರ, ಸಪ್ತ ಸರೋಜ.


ಬರೆಯುತ್ತಾ ಹೋದರೆ ಇಂದಿರಕ್ಕನ ಬಗೆಗೆ ಹೇಳಬೇಕಾದ್ದು ಇನ್ನೂ ಇದೆ ಎನ್ನಿಸುತ್ತೆ. ಒಟ್ಟಾರೆ ಮಗಳಾಗಿ, ಒಡಹುಟ್ಟಿದವಳಾಗಿ, ಗೆಳತಿಯಾಗಿ, ಸಹೋದ್ಯೋಗಿಯಾಗಿ, ಸಾಹಿತಿಯಾಗಿ, ಸಂಘಟಕಿಯಾಗಿ ಎಲ್ಲ ಪಾತ್ರಗಳನ್ನು ಅದ್ಭುತವಾಗಿ ನಿರ್ವಹಿಸಿದ ಅವಳ ಪರಿ ವಿಶಿಷ್ಟ. ಇಂತಹ ಜೀವಗಳು ಸಿಕ್ಕುವುದು ದುರ್ಲಭ.




ಕಾಮೆಂಟ್‌ಗಳು

  1. I have taken liberty to post Mala Manjunath's article on my timeline. I am very greatful for writing such a intimate profile of novelist and story teller Miss Indira H.R., and thanks to Shankara Ajjampura who has published this in his blog Antharajaladalli ajjampura.

    ಪ್ರತ್ಯುತ್ತರಅಳಿಸಿ
  2. ಸ್ವಾಗತಾರ್ಹ ಸಂಗತಿ. ಲೇಖನವನ್ನು ಹಂಚಿಕೊಳ್ಳುವುದರಿಂದ ಅದರ ಪ್ರಸಾರ ಹೆಚ್ಚುತ್ತದೆ. ಹೆಚ್ಚು ಜನ ನೋಡಲು ಅನುಕೂಲವಾಗುತ್ತದೆ. ವಿಶೇಷವೆಂದರೆ ಅಜ್ಜಂಪುರದ ಪರ್ವತರಾಯನ ಕೆರೆ ಲೇಖನದ ನಂತರದಲ್ಲಿ ಹೆಚ್ಚು ಜನರನ್ನು ತಲುಪಿರುವ ಲೇಖನವೆಂದರೆ ಎಚ್.ಆರ್. ಇಂದಿರಾ ಅವರನ್ನು ಕುರಿತ ಈ ಲೇಖನವೇ!

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಅಜ್ಜಂಪುರ ಸೀತಾರಾಂ