69. ಪೆನ್ ರಿಪೇರಿಯ ಉಮ್ಮರ್ ಸಾಹೇಬರು
ಆತ್ಮೀಯರೇ,
ಫೆಬ್ರವರಿ ತಿಂಗಳ ಈ ಸಂಚಿಕೆಯಲ್ಲಿ ಹಳೆಯ ನೆನಪು ಮತ್ತು ಮರೆತುಹೋಗಿರುವ ಒಂದು ವೃತ್ತಿಯ ಬಗೆಗಿನ ವಿವರಗಳಿವೆ. ನಿಜ, ಕಳೆದುಹೋದ ಕಾಲ ಮತ್ತು ನಡೆಸಿದ ಜೀವನಕ್ರಮಗಳು ಇಂದು ಮರಳಿ ಬಾರದಿರಬಹುದು. ಆದರೆ ಸಾಗಿಬಂದ ದಾರಿಯನ್ನು ತಿರುಗಿನೋಡುವ ಪರಿಪಾಠ ನಮ್ಮನ್ನು ಇನ್ನಷ್ಟು ಗಟ್ಟಿಗೊಳಿಸಲು ನೆರವಾಗುತ್ತದೆ. ಪೆನ್ ರಿಪೇರಿಯಂಥ ಚಿಕ್ಕ ಕೌಶಲವನ್ನೇ ವೃತ್ತಿಯನ್ನಾಗಿಸಿ ಜೀವನ ನಡೆಸಿದ, ಅಜ್ಜಂಪುರದ ಪೇಟೆ ಬೀದಿಯಲ್ಲಿ ತುಂಬ ಪರಿಚಿತರಿದ್ದ ವ್ಯಕ್ತಿ ಶೇಖ್ ಉಮ್ಮರ್ ಸಾಬ್ ರನ್ನು ನೆನಪಿಸಿಕೊಂಡು ಮಿತ್ರ ಅಪೂರ್ವ ಬಸು ತಮ್ಮ ನೆನಪುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಇಂಥ ನೆನಪುಗಳ ಸಂಗ್ರಹ ಊರಿನಲ್ಲಿರುವವರ, ಅಜ್ಜಂಪುರದ ಸ್ಥಳೀಕರ ಸಂಗ್ರಹಗಳಲ್ಲಿ ಇರಬಹುದು. ಅವನ್ನು ಲೇಖನ ರೂಪದಲ್ಲಿ ಇಲ್ಲಿ ಹಂಚಿಕೊಳ್ಳಲು ಮುಕ್ತ ಅವಕಾಶವಿದೆ. ಹಾಗೆ ಮಾಡುವಿರೆಂದು ಆಶಿಸುತ್ತೇನೆ.
ಅಜ್ಜಂಪುರದ ಪೇಟೆ ಭಾಗವು ಊರು ಬೆಳೆದಂತೆಲ್ಲ ಅದರ ಕುರುಹೂ ಉಳಿಯದಂತೆ ಬದಲಾಗಿಹೋಗಿರುವುದನ್ನು ಕಾಲಧರ್ಮ ಎಂದು ಕರೆಯಬೇಕಲ್ಲದೆ, ಬೇರೆ ಯಾವ ವಿವರಣೆಯೂ ಹೊಂದಲಾರದು. ಇದ್ದರೂ ಒಂದೊಮ್ಮೆ ಗಿಜಿಗುಡುತ್ತಿದ್ದ ಆ ದಿನಗಳನ್ನು ನೆನಪು ಮಾಡಿಕೊಂಡರೆ, ಕಣ್ಣಮುಂದೆ ಬರುವ ಚಿತ್ರ ಹೀಗಿತ್ತು. ಮೃತ್ಯುಂಜಯಣ್ಣನವರ ಮನೆಯ ಎಡಬದಿಗೆ ಇತ್ತು ಬಂದಯ್ಯನವರ ಪಕೋಡ ಮತ್ತು ಸಿಹಿ ತಿಂಡಿಗಳ ಅಂಗಡಿ. ಬಲಬದಿಯಲ್ಲಿ ಮಲ್ಲಣ್ಣ ಶೆಟ್ಟರ ಅಂಗಡಿಯಲ್ಲಿ ವ್ಯಾಪಾರದ ಭರಾಟೆಯಿರುತ್ತಿತ್ತು. ಇದೀಗ ನೆಹರೂ ಚೌಕವೆಂದು ಹೆಸರು ಪಡೆದಿರುವ ಆಯಕಟ್ಟಿನ ಜಾಗದಲ್ಲಿದ್ದ ಅಲಂಕಾರ್ ಹೋಟೆಲ್, ಅದರ ಎದುರಿನಲ್ಲೇ ಸಿ.ಜಿ. ತಿಮ್ಮಯ್ಯನವರ ಹೂವಿನ ಅಂಗಡಿ, ಪುರಸಭೆಯ ಮಳಿಗೆಗಳು, ಪೇಟೆಯ ಪ್ರವೇಶ ದ್ವಾರದಲ್ಲೇ ಇದ್ದ ಗುರುನಂಜಪ್ಪನವರ ಜವಳಿ ಅಂಗಡಿ, ಇನ್ನೊಂದು ಬದಿಯಲ್ಲಿದ್ದ ಜಿ.ಎಂ. ಬಸಪ್ಪನವರ ಕಿರಾಣಿ ಅಂಗಡಿ, ಹೀಗೇ ಮುಂದುವರೆದು ಸುಬ್ರಹ್ಮಣ್ಯ ಶೆಟ್ಟರ ಕಿರಾಣಿ ಅಂಗಡಿ, ಮೆಡಿಕಲ್ ಸ್ಟೋರ್ - ಹೀಗೆ ಇವೆಲ್ಲವೂ ಈಗ ನೆನಪುಗಳು ಮಾತ್ರ. ಇದು ಕಳೆದ ಶತಮಾನದ ಅರುವತ್ತರ ದಶಕದಲ್ಲಿದ್ದ ಚಿತ್ರ.

- ಶಂಕರ ಅಜ್ಜಂಪುರ
-----------------------------------------------------------------------------------------------------------------------------------------------------------------------------------------------
ಚಿತ್ರಗಳು, ಲೇಖನ
ಅಪೂರ್ವ ಬಸು, ಅಜ್ಜಂಪುರ
ಅಜ್ಜಂಪುರದ ಪೇಟೆ ಭಾಗವು ಊರು ಬೆಳೆದಂತೆಲ್ಲ ಅದರ ಕುರುಹೂ ಉಳಿಯದಂತೆ ಬದಲಾಗಿಹೋಗಿರುವುದನ್ನು ಕಾಲಧರ್ಮ ಎಂದು ಕರೆಯಬೇಕಲ್ಲದೆ, ಬೇರೆ ಯಾವ ವಿವರಣೆಯೂ ಹೊಂದಲಾರದು. ಇದ್ದರೂ ಒಂದೊಮ್ಮೆ ಗಿಜಿಗುಡುತ್ತಿದ್ದ ಆ ದಿನಗಳನ್ನು ನೆನಪು ಮಾಡಿಕೊಂಡರೆ, ಕಣ್ಣಮುಂದೆ ಬರುವ ಚಿತ್ರ ಹೀಗಿತ್ತು. ಮೃತ್ಯುಂಜಯಣ್ಣನವರ ಮನೆಯ ಎಡಬದಿಗೆ ಇತ್ತು ಬಂದಯ್ಯನವರ ಪಕೋಡ ಮತ್ತು ಸಿಹಿ ತಿಂಡಿಗಳ ಅಂಗಡಿ. ಬಲಬದಿಯಲ್ಲಿ ಮಲ್ಲಣ್ಣ ಶೆಟ್ಟರ ಅಂಗಡಿಯಲ್ಲಿ ವ್ಯಾಪಾರದ ಭರಾಟೆಯಿರುತ್ತಿತ್ತು. ಇದೀಗ ನೆಹರೂ ಚೌಕವೆಂದು ಹೆಸರು ಪಡೆದಿರುವ ಆಯಕಟ್ಟಿನ ಜಾಗದಲ್ಲಿದ್ದ ಅಲಂಕಾರ್ ಹೋಟೆಲ್, ಅದರ ಎದುರಿನಲ್ಲೇ ಸಿ.ಜಿ. ತಿಮ್ಮಯ್ಯನವರ ಹೂವಿನ ಅಂಗಡಿ, ಪುರಸಭೆಯ ಮಳಿಗೆಗಳು, ಪೇಟೆಯ ಪ್ರವೇಶ ದ್ವಾರದಲ್ಲೇ ಇದ್ದ ಗುರುನಂಜಪ್ಪನವರ ಜವಳಿ ಅಂಗಡಿ, ಇನ್ನೊಂದು ಬದಿಯಲ್ಲಿದ್ದ ಜಿ.ಎಂ. ಬಸಪ್ಪನವರ ಕಿರಾಣಿ ಅಂಗಡಿ, ಹೀಗೇ ಮುಂದುವರೆದು ಸುಬ್ರಹ್ಮಣ್ಯ ಶೆಟ್ಟರ ಕಿರಾಣಿ ಅಂಗಡಿ, ಮೆಡಿಕಲ್ ಸ್ಟೋರ್ - ಹೀಗೆ ಇವೆಲ್ಲವೂ ಈಗ ನೆನಪುಗಳು ಮಾತ್ರ. ಇದು ಕಳೆದ ಶತಮಾನದ ಅರುವತ್ತರ ದಶಕದಲ್ಲಿದ್ದ ಚಿತ್ರ.
ಇಂತಿಪ್ಪ ನಮ್ಮೂರಿನ ಪೇಟೆ ಚೌಕದಲ್ಲಿ ಶೇಖ್ ಉಮ್ಮರ್
ಸಾಬ್ ಬಿಳುಪಾದ ಇಜಾರ, ಉದ್ದ ತೋಳಿನ ಬಿಳಿ ಅಂಗಿ ಧರಿಸಿ, ತಲೆಗೆ ಬಿಳಿ ಅಂಗವಸ್ತ್ರ ಕಟ್ಟಿಕೊಂಡು,
ತಮ್ಮ ಮುಂದೆ ಮರದ ಪೆಟ್ಟಿಗೆಯನ್ನು ಇಟ್ಟುಕೊಂಡು ಕುಳಿತಿರುತ್ತಿದ್ದರು. ಅದರಲ್ಲಿ ಪೆನ್, ಕನ್ನಡಕ
ಮುಂತಾದ ವಸ್ತುಗಳ ರಿಪೇರಿಯ ಪರಿಕರಗಳಿರುತ್ತಿದ್ದವು.
ಇವುಗಳನ್ನು ಬಳಸಿ ಊರಿನ, ಸುತ್ತಮುತ್ತಲ ಹಳ್ಳಿಗಳ ಗ್ರಾಹಕರಿಗೆ ತಮ್ಮ ಸೇವೆಯನ್ನು
ಒದಗಿಸುತ್ತಿದ್ದರು. ಈಗಿನ ಯೂಸ್ ಅಂಡ್ ಥ್ರೋ ಕಾಲದಲ್ಲಿ ಪೆನ್ನು ರಿಪೇರಿಯಂಥ ವೃತ್ತಿಯ ಕಲ್ಪನೆಯೂ
ಇರಲಾರದು. ಆದರೆ ಒಂದು ಜಮಾನಾದಲ್ಲಿ ಪೆನ್ನು ರಿಪೇರಿ ಒಂದು ವೃತ್ತಿಯಾಗಿತ್ತು.
ನಾವು ಶಾಲಾ ಮಕ್ಕಳು ಫೌಂಟನ್ ಪೆನ್ ಸರಿಯಾಗಿ
ಬರೆಯುತ್ತಿಲ್ಲವೆಂದೋ, ಸೋರುತ್ತಿದೆಯೆಂದೋ ನಮ್ಮ ಪೆನ್ನುಗಳನ್ನು ಉಮ್ಮರ್ ಸಾಬ್ ರಿಗೆ
ಕೊಡುತ್ತಿದ್ದೆವು. ಈಗೇನಿದ್ದರೂ ಬಾಲ್ ಪೆನ್ ಗಳ ಕಾಲವಷ್ಟೆ. ಅಂದಿದ್ದ ಫೌಂಟನ್ ಪೆನ್ ಗಳಲ್ಲಿ ಪ್ಲೇಟೋ, ಸ್ವಾನ್ ಮುಂತಾದವು ಪ್ರಸಿದ್ಧವಾಗಿದ್ದವು. ಪೆನ್ನುಗಳ ಬಿಡಿಭಾಗಗಳ ಹೆಸರುಗಳು ಈ ತಲೆಮಾರಿನ ಜನರಿಗೆ ತಿಳಿದಿರಲಾರದು. ಅವುಗಳಿಗೆ ಕನ್ನಡ ಪದಗಳನ್ನೇ
ಬಳಸಲಾಗುತ್ತಿತ್ತು. ನಿಬ್ ಗೆ ಮುಳ್ಳು ಎಂಬ ಹೆಸರಿದ್ದರೆ, ಟಂಗ್ ಗೆ
ನಾಲಿಗೆಯೆನ್ನುತ್ತಿದ್ದೆವು. ತಿರುಪು (ಥ್ರೆಡ್)
ಸಡಿಲಾದಾಗ ನಾವೇ ಬಿಗಿಮಾಡಲು ಹೋಗಿ ಅದು ಮುರಿದುಹೋಗಿದ್ದೂ ಉಂಟು. ಮಸಿಯನ್ನು ಹಿಡಿದಿಡುತ್ತಿದ್ದ
ಕೊಳವೆಯೇ ಕೆಲವೊಮ್ಮೆ ಬಿರುಕು ಬಿಡುತ್ತಿತ್ತು. ಅದರಿಂದ ಸೋರಿದ ಮಸಿ ಅಂಗಿಗೆ ಅಂಟಿಕೊಂಡಾಗ, ಕೊಳೆ
ಒಳ್ಳೆಯದು ಎಂದು ಈಗ ಜಾಹಿರಾತಿನಲ್ಲಿ ಹೇಳುವಂಥ ಅಮ್ಮಂದಿರಾಗಲೀ, ಅಜ್ಜಿಯರಾಗಲೀ ಇರುತ್ತಿರಲಿಲ್ಲ.
ಚಿಕ್ಕದೊಂದು ಬೈಗುಳವಂತೂ ಖಾತ್ರಿಯಾಗಿರುತ್ತಿತ್ತು. ಇಂಥ ತೊಂದರೆಗಳನ್ನೆಲ್ಲ ಉಮ್ಮರ್ ಸಾಬರು
ಪರಿಹರಿಸುತ್ತಿದ್ದರು.
ಈ ಪೆನ್ನುಗಳಿಗೆ ಅವುಗಳ ಬಾಯಿಯನ್ನು ತೆಗೆದು ಮಸಿ
ಸುರಿಯಬೇಕಾಗುತ್ತಿತ್ತು. ಹಾಗೆ ಸುರಿಯುವಾಗ
ತೋರುತ್ತಿದ್ದ ಎಚ್ಚರಿಕೆ, ಇಂಕಿನ ಪ್ರಮಾಣವನ್ನು ಮುಂದಾಗಿ ಊಹಿಸಿ ಇಂಕ್ ಬಾಟಲನ್ನು
ನಿಗ್ರಹಿಸುತ್ತಿದ್ದ ಕೌಶಲಗಳು ಈಗ ಮಾಡುತ್ತೇವೆಂದರೂ ಬರಲಾರದು. ಮಸಿ ಚೆಲ್ಲದಿರಲೆಂದು ಇಂಕ್ ಫಿಲ್ಲರುಗಳೂ
ಇರುತ್ತಿದ್ದವು. ರಾಯಲ್ ಬ್ಲ್ಯೂ ಹೆಸರಿನ ನೀಲಿಯ ಶಾಯಿ ಸಾಮಾನ್ಯವಾಗಿರುತ್ತಿದ್ದರೆ, ಸರಕಾರೀ
ಕಚೇರಿಗಳಲ್ಲಿ ಬಳಸುತ್ತಿದ್ದ ಕೆಂಪು ಮಸಿ, ಹಸಿರು ಮಸಿ, ಇಂಡಿಯನ್ ಬ್ಲ್ಯಾಕ್ ಇಂಕ್ ಮುಂತಾಗಿ
ಹಲವು ವರ್ಣಗಳ ಮಸಿಗಳು ದೊರೆಯುತ್ತಿದ್ದವು.
ಶೇಖ್ ಉಮ್ಮರ್ ಸಾಬ್ ಅಜ್ಜಂಪುರದವರೇನೂ ಅಲ್ಲ. ಅವರು
ಮೂಲತಃ ಉಡುಪಿಯ ಸಮೀಪದ ತೋನ್ಸೆಯವರು. ಸಿಂಡಿಕೇಟ್ ಬ್ಯಾಂಕ್ ನ ಸಂಸ್ಥಾಪಕರಾದ ಡಾ. ಟಿ.ಎಂ.ಎ.
ಪೈಗಳ ಊರು ಕೂಡ ತೋನ್ಸೆಯೇ. ಅಂದು ಕುಗ್ರಾಮವಾಗಿದ್ದ ಈ ಹಳ್ಳಿಯಿಂದ ತಮ್ಮ ಯೌವನಾರಂಭ ಕಾಲದಲ್ಲಿ
ಮಿತ್ರರೊಡನೆ ಉಮ್ಮರ್ ಸಾಬ್ ಮುಂಬಯಿಗೆ ಹೋಗಿದ್ದರು. ಅಲ್ಲಿ ಇಬ್ಬರು ಗೆಳೆಯರು ಹಿಂದಿ
ಚಲನಚಿತ್ರಗಳ ಹೀರೋಗಳ ವೇಷಗಳನ್ನು ಅನುಕರಿಸಿ, ತಮ್ಮ ಬಟ್ಟೆಗಳನ್ನು ಹೊಲಿಸಿಕೊಳ್ಳುತ್ತಿದ್ದರಂತೆ.
ಮುಂಬಯಿಯಿಂದ ಬಂದ ನಂತರ ದಾವಣಗೆರೆಯಲ್ಲಿ ಕೆಲಕಾಲ ನೆಲೆಸಿ, ಅಜ್ಜಂಪುರಕ್ಕೆ ಬಂದರು. ಇಲ್ಲಿ
ಅಜ್ಜಂಪುರದ ಏಕಮಾತ್ರ ಹೋಮಿಯೋಪಥಿ ವೈದ್ಯರಾಗಿದ್ದ ಡಾ. ಕರೀಮ್ ಖಾನರ ಸೋದರಿ ಮೆಹಬೂಬ್ ಬೀಯವರನ್ನು ವಿವಾಹವಾದರು. ಈಗ ಈ ಮೂವರೂ ಕೇವಲ
ನೆನಪು ಮಾತ್ರವಾಗಿ ಉಳಿದಿದ್ದಾರೆ.
ಶೇಖ್ ಉಮ್ಮರ್ ಸಾಬರು ದೊಡ್ಡವರ ಚಾಳೀಸು, ಚಷ್ಮಾಗಳನ್ನು
ರಿಪೇರಿ ಮಾಡಿಕೊಡುತ್ತಿದ್ದರು. ಚೌಕಟ್ಟುಗಳಿಗೆ ತಿರುಪು ಹಾಕಿ, ತಂತಿ ಬಿಗಿದು
ಸರಿಮಾಡುತ್ತಿದ್ದರು. ಟಾರ್ಚುಗಳಿಗೆ ಸ್ವಿಚ್, ಗ್ಲಾಸ್, ಕ್ಯಾಪ್ ಇತ್ಯಾದಿ ಬಿಡಿಭಾಗಗಳನ್ನು
ಬದಲಿಸುತ್ತಿದ್ದರು. ಬಲ್ಬ್ ಹೋಗಿದ್ದರೆ ಅದಕ್ಕೆ ತಕ್ಕ ಬಲ್ಬ್ ತರಿಸಿ ಹಾಕುತ್ತಿದ್ದರು. ಅವರ
ರಿಪೇರಿ ದರಗಳೇನೂ ದುಬಾರಿಯಾಗಿರುತ್ತಿರಲಿಲ್ಲ. ಶೇಖರ ಹಿರಿಯ ಮಗ ಹುಸೇನ್ ಸಾಬ್ ತಮ್ಮ ತಂದೆಯವರ
ವೃತ್ತಿರಹಸ್ಯವೊಂದನ್ನು ಹಂಚಿಕೊಂಡರು. ಆಗೆಲ್ಲ ಪಾರ್ಕರ್ ಪೆನ್ ತುಂಬ ಜನಪ್ರಿಯ ಹಾಗೂ
ಪ್ರತಿಷ್ಠಿತವಾದ ಬ್ರಾಂಡ್. ಅದರ ನಿಬ್ ಗೆ ಬಂಗಾರದ ಲೇಪನವಿರುತ್ತಿತ್ತಂತೆ. ಅಂಥ ಪೆನ್ ಗಳು
ರಿಪೇರಿಗೆ ಬಂದಾಗ ಅದನ್ನು ಎತ್ತಿಟ್ಟುಕೊಂಡು ತಾಮ್ರದ ನಿಬ್ ಹಾಕಿ ಹಿಂದಿರುಗಿಸುತ್ತಿದ್ದರಂತೆ.
ಅದರಿಂದ ಸ್ವಲ್ಪ ಹೆಚ್ಚಿನ ಕಮಾಯಿಯಾಗಿದ್ದುಂಟು ಎಂದು ಹುಸೇನ್ ನಗುತ್ತ ಹೇಳಿದರು.
ಶೇಖ್ ಸಾಹೇಬರದು ದೊಡ್ಡ ಕುಟುಂಬ. ಮೂರು ಗಂಡು ಮೂರು
ಹೆಣ್ಣುಮಕ್ಕಳು. ಹಾಗಿದ್ದೂ ಜೀವನೋಪಾಯವೆಂದು ಅವರು ಅವಲಂಬಿಸಿದ ಪೆನ್ ರಿಪೇರಿ ಕೆಲಸ ಅವರಿಗೆ ಮೋಸಮಾಡಿದಂತೆ ತೋರಲಿಲ್ಲ. ಗೌರವಯುತ ಜೀವನ ನಡೆಸಿದರು. ಅವರ ಮೊಮ್ಮಗ ನಯಾಜ್ ಅಹ್ಮದ್ ಅಜ್ಜಂಪುರದ
ಸರ್ಕಾರೀ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜಶಾಸ್ತ್ರದ ಸಹ ಪ್ರಾಧ್ಯಾಪಕರು. ಒಟ್ಟಾರೆ ಒಂದು
ಕಾಲದಲ್ಲಿ ಬದುಕು ಹೀಗೂ ನಡೆಯುತ್ತಿತ್ತು ಎಂಬುದೇ ಇಂದಿಗೆ ಅಚ್ಚರಿಯ ಸಂಗತಿ.
ಉಮ್ಮರ್ ಸಾಹೇಬರ ಬಗ್ಗೆ ಲೇಖನ ಸೊಗಸಾಗಿದೆ. ಕೆಲಹೊತ್ತು ನಮ್ಮ ಅಜ್ಜಂಪುರದ ಹಳೇ ನೆನಪುಗಳು ಕಣ್ಣುಗಳ ಮುಂದೆ ಹಾದು ಹೋದ ಅನುಭವಾಯಿತು.ಧನ್ಯವಾದಗಳು ಸರ್
ಪ್ರತ್ಯುತ್ತರಅಳಿಸಿThanks for feedback !
ಪ್ರತ್ಯುತ್ತರಅಳಿಸಿಬಹಳ ತಡವಾಗಿ ಈ ಲೇಖನವನ್ನು ಓದಿದ್ದಕ್ಕೆ ಕ್ಷಮೆಯಿರಲಿ.ಮಸಿ ಲೀಖನಿ ಸರಿಮಾಡುವುದೊಂದೇ ಅಲ್ಲ ಅವರು ಸುಲೋಚನವನ್ನು ಜನರಿಗೆ ಕೊಡುವ ಪರಿ ಈ ದಿನವೂ ಆಶ್ಚರ್ಯವಾಗುತ್ತದೆ. ವೈದ್ಯರು ಪರೀಕ್ಷೆ ಮಾಡಿ ಸುಲೋಚನವನ್ನು ಕೊಟ್ಟರೇ.... ಇವರ ಪರಿ ಬೇರೆ. ಹತ್ತೀರದಿಂದ ಬಲ್ಲವರಿಗೆ ಗೊತ್ತು. ಅಂತು ಅವರು ಸಜ್ಜನ.
ಪ್ರತ್ಯುತ್ತರಅಳಿಸಿ