71. ಅಜ್ಜಂಪುರದ ಶ್ರೀ ಕನ್ಯಕಾಪರಮೇಶ್ವರೀ ದೇವಾಲಯ



ಶ್ರೀ ಕನ್ಯಕಾ ಪರಮೇಶ್ಲರೀ ಕಥಾ ಚಿತ್ರ ಮಾಲಿಕೆ










ದೇವಾಲಯದ ಹೊರನೋಟ

ಒಳಗಿನ ಗೀತೋಪದೇಶದ ಸುಂದರ ಚಿತ್ರ
ಅಜ್ಜಂಪುರದಲ್ಲಿರುವ ದೇವಾಲಯಗಳ ಬಗ್ಗೆ ಬರೆಯುತ್ತ ಸಾಗಿದಂತೆ, ಇದುವರೆಗೆ ಏಳೆಂಟು ದೇವಾಲಯಗಳನ್ನು ಈ ಬ್ಲಾಗ್ ನಲ್ಲಿ ಪರಿಚಯಿಸಲಾಗಿದೆ. ಈ ಸಂಚಿಕೆಯಲ್ಲಿ ಅಜ್ಜಂಪುರದ ಶ್ರೀ ಕನ್ಯಕಾ ಪರಮೇಶ್ವರೀ ದೇವಾಲಯದ ಬಗ್ಗೆ ಮಾಹಿತಿಗಳಿವೆ.   ಗೆಳೆಯ ಅಪೂರ್ವ ಬಸು ಅವರೊಂದಿಗೆ, ದೇವಾಲಯದ ಅಧ್ಯಕ್ಷ ಶ್ರೀ ಸತ್ಯನಾರಾಯಣ ಶೆಟ್ಟರನ್ನು ಸಂದರ್ಶಿಸಿ ಪಡೆದ ಮಾಹಿತಿಗಳ ಆಧಾರದಲ್ಲಿ ಇದನ್ನು ಪ್ರಸ್ತುತಪಡಿಸಲಾಗಿದೆ.
ಶ್ರೀ ಸತ್ಯನಾರಾಯಣ ಶೆಟ್ಟರೊಡನೆ ಲೇಖಕ
ಅಜ್ಜಂಪುರದ ಶ್ರೀ ಸುಬ್ರಹ್ಮಣ್ಯ ಶೆಟ್ಟರ ನೇತೃತ್ವದಲ್ಲಿ ಪೇಟೆಯ ಬೀದಿಯಲ್ಲಿದ್ದ ಚಿಕ್ಕ ಮಳಿಗೆಯೊಂದರಲ್ಲಿ ಶ್ರೀರಾಮಮಂದಿರ ಆರಂಭವಾಯಿತು. ಶೆಟ್ಟರಿಗೆ ಹಾರ್ಮೋನಿಯಂ, ತಬಲಾ ವಾದನಗಳ ಪರಿಣತಿ ಮತ್ತು ಕಲಾಸಕ್ತಿಗಳಿದ್ದುದರಿಂದ, ಅವರು ಪ್ರತಿ ಶನಿವಾರ ಭಜನೆಯ ಏರ್ಪಾಡನ್ನು ಮಾಡಿದ್ದರು. 
ದು ಕೆಲವು ಕಾಲ ನಡೆದುಬಂದಿತು. ಆಗಲೂ ವೈಶ್ಯರ ಕುಲದೇವತಾ ಮಂದಿರವನ್ನು ಸ್ಥಾಪಿಸುವ ಆಲೋಚನೆಯೇನೂ ಇರಲಿಲ್ಲ. ಏಕೆಂದರೆ ಅಜ್ಜಂಪುರದಲ್ಲಿ ಆರ್ಯವೈಶ್ಯ ಜನಾಂಗದ ಕುಟುಂಬಗಳ  ಸಂಖ್ಯೆ 20 ನ್ನು ಮೀರಿರಲಿಲ್ಲ. ಹೀಗಾಗಿ ಆರ್ಥಿಕವಾಗಿ ದೊಡ್ಡ ಯೋಜನೆಯಾದಇದನ್ನು ಕೈಗೆತ್ತಿಕೊಳ್ಳುವುದು ಕಠಿಣವಾಗಿತ್ತು. ಆದರೆ ಪೇಟೆಯಲ್ಲಿದ್ದ ಶ್ರೀ ರಾಮ ಮಂದಿರವನ್ನು ಆಧರಿಸಿ ಶ್ರೀ ಕನ್ಯಕಾ ಪರಮೇಶ್ವರೀ ದೇವಾಲಯದ ಹೊಳಹು ಮೂಡಲು ಆರಂಭವಾಯಿತು. ಇದಕ್ಕೆಂದು ದೇವಾಲಯ ನಿರ್ಮಾಣ ಸಮಿತಿಯನ್ನು 1966ರಲ್ಲಿ ಆರಂಭಿಸಲಾಯಿತು. ಹೀಗಾಗಿ 2016ನೇ ಇಸವಿಯು ದೇವಾಲಯದ ಸ್ವರ್ಣಮಹೋತ್ಸವ ವರ್ಷ.
ನಗರೇಶ್ವರ ಸ್ವಾಮಿ
ಶ್ರೀ ಕನ್ಯಕಾ ಪರಮೇಶ್ವರೀ
ಶ್ರೀ ರಾಮ ಮಂದಿರ


    
  
ಶಾಲಾ ಕಟ್ಟಡ



ಪ್ರವೇಶದ್ವಾರದ ಮೇಲಿನ ಸುಂದರ ಕೆತ್ತನೆ
ಆ ದಿನಗಳಲ್ಲಿ ಸಂತೆ ಮೈದಾನದ ಎದುರಿಗಿದ್ದ ಹಾಳು ಜಾಗವನ್ನು ರಾಮರಾಯನ ಗುಂಡಿ ಎಂದು ಕರೆಯಲಾಗುತ್ತಿತ್ತು. ಅದು ಊರಿನ ಕೊಳಚೆ ನೀರೆಲ್ಲ ಬಂದು ನಿಲ್ಲುತ್ತಿದ್ದ ಸ್ಥಳವಾಗಿತ್ತು. ಬೇಸಿಗೆಯಲ್ಲಿ ಒಣಗಿ ನಿಂತಾಗ ದೊಡ್ಡ ಮೈದಾನದ ರೂಪದಲ್ಲಿ ಕಾಣುತ್ತಿತ್ತು. ಅಜ್ಜಂಪುರ ಕಲಾಸೇವಾ ಸಂಘದ ಸಕ್ರಿಯ ಸದಸ್ಯರಲ್ಲಿ ಓರ್ವರು ಪಿ. ವೆಂಕಟರಾಮಯ್ಯನವರು. ಪ್ರಾಸಂಗಿಕವಾಗಿ ಅವರು ಸುಬ್ರಹ್ಮಣ್ಯಶೆಟ್ಟರ ಸಹೋದರ, ಸತ್ಯನಾರಾಯಣ ಶೆಟ್ಟರಲ್ಲಿ ಈ ಸ್ಥಳದ ಬಗ್ಗೆ ಗಮನಸೆಳೆದು, ಇಲ್ಲೇಕೆ ಒಂದು ಮಂದಿರವನ್ನು ನಿರ್ಮಿಸಬಾರದು ಎಂದು ಪ್ರಶ್ನಿಸಿದರು. ಈಗ ದೇವಾಲಯವಿರುವ ಜಾಗದಲ್ಲಿ ಸ್ಥಳೀಕರೊಬ್ಬರು ಮನೆ ಕಟ್ಟಲೆಂದು ಅಡಿಪಾಯವನ್ನು ಹಾಕಿದ್ದರು. ಮುಂದೆ ದೇವಾಲಯ ಕಟ್ಟಲು ಈ ಜಾಗದ ಅವಶ್ಯಕತೆಯನ್ನು ಅವರ ಮುಂದಿರಿಸಿದಾಗ, ಸೂಕ್ತ ಬೆಲೆಗೆ ಈ ನಿವೇಶನವನ್ನು ದೇವಾಲಯ ಸಮಿತಿಗೆ ಮಾರಾಟಮಾಡಿದರು.

ಸುಬ್ರಹ್ಮಣ್ಯಶೆಟ್ಟರ ಸಂಕಲ್ಪ ದೃಢವಾಗಿದ್ದುದರಿಂದ, ಅವರು ರಾಜ್ಯದ ವೈಶ್ಯ ಜನಾಂಗದ ಹಿರಿಯರನ್ನು, ಗಣ್ಯ ವರ್ತಕರನ್ನು ಅಜ್ಜಂಪುರಕ್ಕೆ ಆಹ್ವಾನಿಸಿ, ಅವರ ಸಮಾಜ ಸೇವೆಯನ್ನು ಶ್ಲಾಘಿಸಿ, ಅವರಿಗೆ ಮಾನಪತ್ರಗಳನ್ನು ಸಮರ್ಪಿಸುತ್ತಿದ್ದರು. ಈ ಎಲ್ಲ ಸನ್ಮಾನ ಪತ್ರಗಳನ್ನು ಸುಂದರವಾದ ಕೈಬರವಣಿಗೆಯಲ್ಲಿ ಸ್ವತಃ ಸತ್ಯನಾರಾಯಣ ಶೆಟ್ಟರೇ ಬರೆದರು. ಜತೆಗೆ ದೇವಾಲಯದ ಅಭಿವೃದ್ಧಿಗೆ ನೆರವನ್ನೂ ಕೋರುತ್ತಿದ್ದರು. ಇದೇ ಕ್ರಮದಲ್ಲಿ ಸುಮಾರು ಎಪ್ಪತ್ತು ಜನರನ್ನು ಸನ್ಮಾನಿಸಿ, ದೇವಾಲಯ ನಿರ್ಮಾಣಕ್ಕೆ ನಿಧಿ ಸಂಗ್ರಹಿಸಲಾಯಿತು. 

ಪಿ.ಎಲ್. ಗೋಪಾಲಕೃಷ್ಣ ಶೆಟ್ಟರು, ರಾಜ್ಯಾದ್ಯಂತ ಪ್ರವಾಸಮಾಡಿ ನಿಧಿ ಸಂಗ್ರಹ ಕಾರ್ಯದಲ್ಲಿ ತೊಡಗಿಕೊಂಡಿದ್ದಂತೆ, ಕೋಶಾಧಿಕಾರಿಯಾಗಿ ಎಲ್. ಸುಬ್ರಹ್ಮಣ್ಯ ಶೆಟ್ಟರು (ಸುಬ್ಬಣ್ಣ) ಸಮರ್ಥವಾಗಿ ಕಾರ್ಯನಿರ್ವಹಿಸಿದರು. ಸುಬ್ರಹ್ಮಣ್ಯ ಶೆಟ್ಟರ ನೆರಳಿನಂತಿದ್ದ ಎ.ಪಿ. ನಾಗರಾಜ ಶ್ರೇಷ್ಠಿಯವರು ಕಾರ್ಯಕ್ರಮದ ಆಯೋಜನೆ ಮತ್ತು ವ್ಯವಸ್ಥೆಗಳ ಕಾರ್ಯದಲ್ಲಿ ಶ್ರಮಿಸಿದ್ದರು. ಎಲ್. ಮಲ್ಲಿಕಾರ್ಜುನ ಶೆಟ್ಟರು  ಕಾರ್ಯಕಾರೀ ಸಮಿತಿಯಲ್ಲಿದ್ದು ಸಕ್ರಿಯವಾಗಿ ಭಾಗವಹಿಸಿದರು.  ಹಣ ಸಂಗ್ರಹವಾದಂತೆಲ್ಲ ಚಿಕ್ಕದಾಗಿ ಕಾಮಗಾರಿ ಆರಂಭಿಸಿ, ಜನಾಂಗದಲ್ಲೇ ಇದ್ದ ಸರ್ವೋತ್ತಮ ಎಂಬ ಇಂಜಿನಿಯರರ ನೆರವನ್ನು ಪಡೆಯಲಾಯಿತು. ಹಂತ ಹಂತವಾಗಿ ನಡೆದ ಕಾಮಗಾರಿ ಪ್ರತಿಷ್ಠಾಪನೆಯ ಮಟ್ಟ ತಲುಪಿದಾಗ, ಅಜ್ಜಂಪುರದ ಪುರೋಹಿತ ಸೀತಾರಾಮಭಟ್ಟರ ನೇತೃತ್ವದಲ್ಲಿ ಅದನ್ನು ನೆರವೇರಿಸಲಾಯಿತು. 

ನವಗ್ರಹ ಮಂದಿರ
1970ರಲ್ಲಿ ತುಂಬ ಸಂಭ್ರಮ, ಸಡಗರಗಳಿಂದ ನಡೆದ ಆ ಕಾರ್ಯಕ್ರಮವು ಇಂದಿಗೂ ಸ್ಮರಣೀಯವಾಗಿದೆ ಎಂದು ಸತ್ಯನಾರಾಯಣ ಶೆಟ್ಟರು ನೆನಪಿಸಿಕೊಂಡರು. ದೇವಾಲಯದ ವಿಗ್ರಹಗಳನ್ನು ಮೈಸೂರಿನಲ್ಲಿದ್ದ ಸ್ಥಪತಿಗಳಿಂದ ಮಾಡಿಸಲಾಯಿತು. ಕನ್ಯಕಾ ಪರಮೇಶ್ವರೀ ವಿಗ್ರಹವಲ್ಲದೆ, ಶ್ರೀರಾಮ, ಲಕ್ಷ್ಮಣ, ಸೀತಾ, ಆಂಜನೇಯರು ಹಾಗೂ ನಗರೇಶ್ವರ ಸ್ವಾಮಿಯ ವಿಗ್ರಹಗಳೂ ತಯಾರಾದವು. ಆದಿತ್ಯಾದಿ ನವಗ್ರಹ ವಿಗ್ರಹಗಳನ್ನೂ 1970ರಲ್ಲೇ ಸ್ಥಾಪಿಸಲಾಯಿತು.

ಶ್ರೀ ಸುಬ್ರಹ್ಮಣ್ಯ ಶೆಟ್ಟಿ ಸ್ಮಾರಕ ಕಲ್ಯಾಣ ಮಂಟಪ
ಅಂದು ದೂರದೃಷ್ಟಿಯಿಂದ ಈ ದೇವಾಲಯವನ್ನು ನಿರ್ಮಿಸಲು ಮುಂದಾಗದಿದ್ದಲ್ಲಿ, ಇಂದು ಜಾಗ ಸಿಕ್ಕುವುದಾಗಲೀ, ಕಾಮಗಾರಿಯ ಖರ್ಚುಗಳನ್ನು ನಿರ್ವಹಿಸುವುದಾಗಲೀ ಕಷ್ಟವಾಗುತ್ತಿತ್ತು. ಇನ್ನೂರು ಅಡಿಗಳ ಚೌಕದ ನಿವೇಶನ ಇರುವುದರಿಂದ ದೇವಾಲಯದ ನಿರ್ಮಾಣವು ಅಚ್ಚುಕಟ್ಟಾಗಿ ಮೂಡಿಬರಲು ಸಹಾಯಕವಾಯಿತು.   ದೇವಾಲಯಕ್ಕೆ ಸೇರಿದ ನಿವೇಶನದಲ್ಲಿ ಇನ್ನೂ ಬಹುಭಾಗ ಖಾಲಿಯಿದ್ದುದರಿಂದ, ಈ ಸ್ಥಳದಲ್ಲಿ ಒಂದು ಕಲ್ಯಾಣಮಂಟಪವನ್ನು ನಿರ್ಮಿಸುವ ಆಲೋಚನೆ 1971ರಲ್ಲಿ ಬಂದಿತು. ಏಕೆಂದರೆ ವಿವಾಹ ಮುಂತಾದ ಸಮಾರಂಭಗಳಿಗೆ ಊರಿನಲ್ಲಿ ಅನುಕೂಲವಿರಲಿಲ್ಲವಾಗಿ, ಕಡೂರು, ಚಿಕ್ಕಮಗಳೂರುಗಳನ್ನು ಆಶ್ರಯಿಸಬೇಕಿತ್ತು. ಈಗೇನೋ ಅಜ್ಜಂಪುರದಲ್ಲಿ ಮೂರ್ನಾಲ್ಕು ಕಲ್ಯಾಣಮಂದಿರಗಳಿವೆ. ಆದರೆ ಆ ಕಾಲಕ್ಕೆ ಆರಂಭವಾದ ಮೊದಲ ಕಲ್ಯಾಣಮಂಟಪವೆಂದರೆ ಇದೇ. ಇದನ್ನು ಶ್ರೀ ಸುಬ್ರಹ್ಮಣ್ಯಶೆಟ್ಟರ ಸ್ಮಾರಕವೆಂದು ಮುಂದೆ 1978ರಲ್ಲಿ ಹೆಸರಿಸಲಾಯಿತು. ಅಜ್ಜಂಪುರದ ಬಹುತೇಕ ಮದುವೆಗಳು ಇಲ್ಲಿಯೇ ನೆರವೇರಿದವು.

ಪ್ರತಿ ವರ್ಷ ವಾಸವೀ ಜಯಂತಿಯು ವಿಜೃಂಭಣೆಯಿಂದ ನಡೆಯುತ್ತಿದೆ. ಪ್ರತಿ ಶನಿವಾರ ಭಜನೆ, ಶುಕ್ರವಾರದಂದು ಮಹಿಳೆಯರಿಂದ ಪೂಜೆ ನಡೆಯುತ್ತಿದೆ. ಈಗ ಜನಾಂಗದ ಮನೆಗಳ ಸಂಖ್ಯೆ ಕ್ಷೀಣಿಸಿದೆ. ಶಂಕರಾನಂದ ಸ್ವಾಮೀಜಿಯವರು ಕೂಡ ದೇವಾಲಯಕ್ಕೆ ಭೇಟಿ ನೀಡಿದ್ದರು. ಕಲ್ಯಾಣಮಂಟಪದ ಆವರಣದಲ್ಲಿ ಶ್ರೀ ವಾಸವೀ ಕಥಾನಕವನ್ನು ಸುಂದರ ಚಿತ್ರರೂಪದಲ್ಲಿ ಬರೆಸಲಾಗಿದೆ.

ದೇವಾಲಯಕ್ಕೆ ಹೊರಟಾಗ ಮಧ್ಯಾಹ್ನದ ಬಿಸಿಲು ಏರಿತ್ತು. ಊಟದ ಸಮಯವಾಗಿದ್ದರೂ, ಅದನ್ನು ಲೆಕ್ಕಿಸಿದೇ, ನಮ್ಮೊಡನೆ ಬಂದು ಉತ್ಸಾಹದಿಂದ ಎಲ್ಲವನ್ನೂ ಪರಿಚಯಿಸಿ, ಮಾಹಿತಿಗಳನ್ನು ಸತ್ಯನಾರಾಯಣಶೆಟ್ಟರು ನೀಡಿದರು. 96ರ ವಯೋಮಾನದ ಉತ್ಸಾಹ, ಲವಲವಿಕೆಗಳು ತರುಣರನ್ನೂ ನಾಚಿಸುವಂತಿರುತ್ತದೆ. ಅವರು ನೀಡುವ ಮಾಹಿತಿಗಳು ಅಧಿಕೃತ, ಉತ್ಪ್ರೇಕ್ಷೆಗಳಿಲ್ಲದ ನೈಜ ಸಂಗತಿಗಳು. ಅಂತೆಯೇ ಅವರ ಅದ್ಭುತ ನೆನಪಿನ ಶಕ್ತಿ ಕೂಡ.  ದೇವಾಲಯ ಮತ್ತು ಅದರ ಆವರಣದಲ್ಲಿ ನಡೆಯುತ್ತಿರುವ ವಾಸವೀ ಶಾಲೆಯ ಚಟುವಟಿಕೆಗಳ ಚಿತ್ರಗಳು ಈ ಸಂಗ್ರಹದಲ್ಲಿ ನಿಮಗಾಗಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.