78. ಹೋಳಿಗೆ ಪರೇವು

ಆತ್ಮೀಯ ಓದುಗರೇ,
ಪರೇವಿನ ಕುರಿತಾಗಿ ಈ ಹಿಂದೆ ಒಂದು ಲೇಖನ ಪ್ರಕಟವಾಗಿದೆ. ಈ ತಿಂಗಳಿನಲ್ಲಿ ಶರನ್ನವರಾತ್ರಿಯ ಸಮಯದಲ್ಲಿ   ಪರೇವನ್ನು ಆಚರಿಸುವುದರಿಂದ  ಸಾಮಯಿಕವಾಗಿರುತ್ತದೆಂದು ಈ ಲೇಖನವನ್ನು ಪ್ರಕಟಿಸಲಾಗಿದೆ. ಲೇಖಕಿ ಶ್ರೀಮತಿ ಎಸ್. ರೋಹಿಣಿ ಶರ್ಮಾ ಇವರು ಓದುಗರಿಗೆ ಪರಿಚಿತರು. ಅವರು ಅಜ್ಜಂಪುರದಲ್ಲೇ ನೆಲೆಸಿದ್ದವರು. ಊರಿನ ಹಬ್ಬ-ಹರಿದಿನಗಳನ್ನು ಹತ್ತಿರದಿಂದ ಅವಲೋಕಿಸಿ, ಅವುಗಳ ಮಹತ್ವ, ಆಚರಣೆಯ ಸೌಂದರ್ಯ ಮುಂತಾದವನ್ನು ವಿವರವಾಗಿ ವಿಶ್ಲೇಷಿಸಿದ್ದಾರೆ. ವಿಶೇಷವೆಂದರೆ, ಎರಡು-ಮೂರು ದಶಕಗಳ ಹಿಂದೆ ತೆಗೆದ ಚಿತ್ರಗಳನ್ನೂ ಸಂಗ್ರಹಿಸಿಟ್ಟು ನೀಡಿರುವುದರಿಂದ ಈ ಲೇಖನ ಇನ್ನಷ್ಟು ಮಾಹಿತಿಪೂರ್ಣವಾಗಿದೆ. ಇದಕ್ಕೆಂದು ಶ್ರಮಿಸಿದ ಅವರ ಪುತ್ರ ಶ್ರೀ ಆರ್ಯಮಿತ್ರ ಹಾಗೂ ಲೇಖನವನ್ನು ಬಳಸಿಕೊಳ್ಳಲು ಅನುಮತಿ ನೀಡಿರುವುದಕ್ಕೆ ಲೇಖಕಿಗೆ ನಮ್ಮ ಕೃತಜ್ಞತೆಗಳು ಸಲ್ಲುತ್ತವೆ.

ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಬ್ಲಾಗ್ ನ ಕಮೆಂಟ್ ಅಂಕಣದಲ್ಲಿ ನಮೂದಿಸಲು ಕೋರುತ್ತೇನೆ.

ಶಂಕರ ಅಜ್ಜಂಪುರ
ಸಂಪಾದಕ
ಸಂಪರ್ಕ - ದೂರವಾಣಿ - 99866 72483
ಇ-ಮೇಲ್ - shankarajp@gmail.com


----------------------------------------------------------------------------------------------------------------------------------------------------------------------------------------------




ಶ್ರೀಮತಿ ಎಸ್. ರೋಹಿಣಿ ಶರ್ಮಾ


ಹಬ್ಬ ತಪ್ಪಿದರೂ ಹೋಳಿಗೆ ಊಟ ತಪ್ಪದು, ಇದೊಂದು ವಾಡಿಕೆಯ ಮಾತು. ಹೌದು, ಹೋಳಿಗೆ ಕನ್ನಡಿಗರಿಗೆ ಇಷ್ಟವಾದ ಹಾಗೂ ಪರಿಚಿತವಾದ ಸಿಹಿ ಊಟ. ಆದ್ದರಿಂದ ಹೋಳಿಗೆಗೆ ಅಷ್ಟು ವಿಶೇಷತೆ ಹಬ್ಬದಂದು. ಹೋಳಿಗೆ ಊಟ ಉಂಡರೆ ವರ್ಷವಿಡೀ ಪುಷ್ಟಿದಾಯಕ ಊಟ ಸಿಗುವುದೆಂಬ ನಂಬಿಕೆ ಕನ್ನಡನಾಡಿನ ಜನರಿಗಿದೆ.

ಚನ್ನಬಸವಣ್ಣನ ವಚನವೊಂದರಲ್ಲಿ ಕಡುಬು ಕಜ್ಜಾಯಗಳ ಜತೆಗೆ ಹೋಳಿಗೆಯ ಪ್ರಸ್ತಾಪವಿರುವುದರಿಂದ 12 ನೇ ಶತಮಾನದಲ್ಲಿ ಇದು ಪ್ರಚಲಿತವಾಗಿತ್ತೆಂದೂ, ಹಾಗೆಯೇ 11ನೇ ಶತಮಾನದ ಜೈನಕಾವ್ಯ ಶಾಂತೇಶ್ವರ ಪುರಾಣದಲ್ಲಿ ಅಂಗರ ಹೋಳಿಗೆ, ಅಂಗರವಳಿಗೆ, ಅಂಗರೋಳಿಗೆ ಎಂದು ಪ್ರಸ್ತಾಪಿಸಲ್ಪಟ್ಟಿದೆ. ತಮಿಳಿನ ಪೋಳಿ ಶಬ್ದವು ಕನ್ನಡದಿಂದಲೇ ಬಂದಿತೆಂದು ತಮಿಳು ಕೋಶವು ಹೇಳುತ್ತದೆ.


ಆಶ್ವಯುಜ ಮಾಸದ ಶುಕ್ಲಪಕ್ಷದ ಪಾಡ್ಯದಿಂದ ನವಮಿಯವರೆಗಿನ 9 ದಿನಗಳು ಶಕ್ತಿದೇವತೆಯ ಆರಾಧನೆಯ ಕಾಲ. ಆದ್ದರಿಂದಲೇ ಇವನ್ನು ಶರನ್ನವರಾತ್ರಿ ಎನ್ನುತ್ತಾರೆ. ಈ ಶರನ್ನವರಾತ್ರಿಯ ಆಚರಣೆ ದೇಶಾದ್ಯಂತ ಜಾರಿಯಲ್ಲಿದೆ. ಶರದೃತುವಿನಲ್ಲಿ ಬರುವ ನವರಾತ್ರಿ ಹಬ್ಬದ ವಿಶೇಷ ಭಕ್ಷ್ಯಗಳಲ್ಲಿ ಹೋಳಿಗೆ ಊಟದ ಸವಿಯೂ ಒಂದು.
ಉತ್ತರದಲ್ಲಿನ ರಾಮಲೀಲಾ, ಬಂಗಾಳದ ದುರ್ಗಾಪೂಜೆಗೆ ಮಹತ್ವ ಕೊಟ್ಟ ಹಾಗೆಯೇ ಚಿಕ್ಕಮಗಳೂರು ಜಿಲ್ಲೆ, ತರೀಕೆರೆ ತಾಲೂಕಿನ ಅಜ್ಜಂಪುರದಲ್ಲಿ ನಡೆಯುವ ಪರೇವು ಆಚರಣೆ ತುಂಬಾ ವೈಶಿಷ್ಟ್ಯಪೂರ್ಣವಾದದ್ದು.
ಹೋಳಿಗೆ ಪರೇವು
ಪರೇವು ಎಂಬ ಪದವು ಸಂಸ್ಕೃತದ ಪರ್ವದಿಂದ ಬಂದಿದ್ದು ಅದೇ ಪರೇವು ಎಂದಾಗಿದೆ ಎಂಬ ಒಂದು ಅಭಿಪ್ರಾಯವಿದೆ. ನವರಾತ್ರಿಯಲ್ಲಿ ಆಚರಿಸುವ ಆಚರಣೆಯಲ್ಲಿ ಒಂದಾದ ಆಯುಧಪೂಜೆಯ ಮಾರನೆ ದಿನ ಮಹಾನವಮಿಯಂದು ಅಜ್ಜಂಪುರದ ಜನರಿಗೆ ಹೋಳಿಗೆ ಪರೇವು. ಇದು ಒಂದು ವಿಶಿಷ್ಟ ಆಚರಣೆ. ಹೋಳಿಗೆ ಪರೇವು ಹಲವಾರು ಜನಾಂಗಗಳ ಸಂಸ್ಕೃತಿಯ ಕೂಟ ಎಂದರೆ ತಪ್ಪಾಗಲಾರದು. ಈ ಹಬ್ಬದ ದಿನ ಇಲ್ಲಿ ಊಟಕ್ಕೆ ಪ್ರಾಶಸ್ತ್ಯವಾದ್ದರಿಂದ ಹೋಳಿಗೆ ಪರೇವು ಒಂದು ಸಾಮೂಹಿಕ ಆಚರಣೆಯ ಹಬ್ಬ. 
ಈ ಹಬ್ಬದ ಆಚರಣೆಯ ಮುಂಚೆ ಊರಿನ ಎಲ್ಲ ಜನಾಂಗಗಳ ಮುಖಂಡರು ಕೂಡಿ ಪರೇವು ಆಚರಣೆಯ ಬಗ್ಗೆ ಸಮಾಲೋಚಿಸುತ್ತಾರೆ. ಬಳಿಕ ಊರಿನವರು ತಮ್ಮ ತಮ್ಮ ನೆಂಟರಿಷ್ಟರ ಮನೆಗೆ ತಾವೇ ಸ್ವತಃ ಹೋಗಿ ಹೇಳಿಬರುತ್ತಾರೆ. ಅಷ್ಟೇ ಅಲ್ಲ, ಒಂದು ವಾರ ಮುಂಚಿತವಾಗಿ ಗ್ರಾಮ ಪಂಚಾಯತಿನವರು ಹತ್ತಿರದ ಹಳ್ಳಿಗಳನ್ನು ಆಮಂತ್ರಿಸುತ್ತಾರೆ. ಪರೇವಿನ ಸಂದೇಶ ತಲುಪುವುದೇ ತಡ, ಊರಿನ ರೈತಾಪಿ ಜನರಲ್ಲಿ ಉತ್ಸಾಹ ನೂರ್ಮಡಿಸಿ, ಪರೇವಿನ ದಿನ ಪ್ರತಿಯೊಬ್ಬರ ಮನೆ ತಳಿರುತೋರಣಗಳಿಂದ ಶೃಂಗಾರವಾಗುವುದನ್ನು ಕಾಣಬಹುದು. ಊರಿನ ಜನರೆಲ್ಲ ಶುಚಿರ್ಭೂತರಾಗಿ, ತಮ್ಮ ತಮ್ಮ ಮನೆಗಳಲ್ಲಿ ಭಕ್ಷ್ಯ-ಭೋಜ್ಯಗಳ ಜತೆಗೆ ಹೋಳಿಗೆಯನ್ನು ತಯಾರಿಸುತ್ತಾರೆ. ಸಾಮಾನ್ಯವಾಗಿ ಒಂದು ಮನೆಯವರು ಒಂದು ಎಡೆಗಾಗುವಷ್ಟು, ಅಂದರೆ ಇಬ್ಬರ ಊಟಕ್ಕಾಗುವಷ್ಟು ಊಟ ಕೊಡಬೇಕೆಂದಿದೆ. ಇತರ ಪದಾರ್ಥಗಳಿಗೆ ಇಂತಿಷ್ಟೇ ಕೊಡಬೇಕೆಂಬ ರಿವಾಜು ಇಲ್ಲವಾದರೂ, ಹೋಳಿಗೆಗೆ ಮಾತ್ರ ರಿಯಾಯತಿ ಇಲ್ಲ. ಪ್ರತಿಯೊಬ್ಬರ ಮನೆಯಿಂದಲೂ ಹತ್ತರಿಂದ ಹದಿನೈದು ಹೋಳಿಗೆಗಳನ್ನು ಕೊಡಬೇಕೆಂಬ ಕಡ್ಡಾಯವೇ ಇದೆ. ಹಿಂದೆ ಹೋಳಿಗೆಯನ್ನು ಮಣ ತೂಕದಲ್ಲಿ ತೂಗಿ ತೆಗೆದುಕೊಳ್ಳುತ್ತಿದ್ದರಂತೆ. ಆದರೆ ಈಗ ಸಾಮಾನ್ಯವಾಗಿ ಹತ್ತು ಹೋಳಿಗೆಗಳಿಗಿಂತ ಕಡಿಮೆ ಕೊಡುವವರಿಲ್ಲ. ಹೀಗೆ ತಯಾರಾದ ಊಟವನ್ನು ಮಂಕರಿ, ತಪ್ಪಲೆಗಳಲ್ಲಿ ತುಂಬಿಕೊಂಡು ಮಠದ ದೇವಸ್ಥಾನಕ್ಕೆ ತಂದೊಪ್ಪಿಸುತ್ತಾರೆ. ಇಲ್ಲಿ ಬಡವ, ಬಲ್ಲಿದ, ಮೇಲು-ಕೀಳು, ಜಾತಿ ಪಂಗಡಗಳ ಗೊಡವೆ ಇಲ್ಲದೆ, ಎಲ್ಲರೂ ಸಮಾನರೆಂಬ ಸಮಭಾವನೆ, ಶ್ರದ್ಧಾ-ಭಕ್ತಿಯೇ ಇಲ್ಲಿ ಮುಖ್ಯವಾಗಿರುತ್ತದೆ. ಹೀಗೆ ಒಂದೆಡೆ ಸೇರಿದ ಊರಿನ ಜನರ ಊಟದ ಪಾತ್ರೆಗಳನ್ನು ಊರ ಬಸವನೊಡಗೂಡಿ ಮುಖ್ಯ ಸ್ಥಳಕ್ಕೆ ಕೊಂಡೊಯ್ಯುತ್ತಾರೆ. ಇಲ್ಲಿಗೆ ಕೊಂಡೊಯ್ಯುವ ಮುನ್ನ ಊರ ಬಸವ (ಸೊಲ್ಲಾಪುರಸ್ವಾಮಿಯ ಭಕ್ತ)ನನ್ನು ಶೃಂಗರಿಸಿ, ಬ್ಯಾಂಡು ವಾದ್ಯಗಳೊಂದಿಗೆ ಊರ ಮುಂದೆ ಮೆರವಣಿಗೆ ಹೊರಡುತ್ತಾರೆ. ಪರೇವು ನಡೆಯುವ ಕಾರ್ಯಕ್ರಮ ರಾತ್ರಿ ಹೊತ್ತೇ ಆದ್ದರಿಂದ ವಿದ್ಯುತ್ತಿನ ಬೆಳಕಿನಲ್ಲಿ ಈ ಮೆರವಣಿಗೆ ಸಾಗುತ್ತದೆ. ಊರಿನ ಕೊನೆಯಲ್ಲಿರುವ ಸೊಲ್ಲಾಪುರ ಸ್ವಾಮಿಯ ಗದ್ದುಗೆಯಲ್ಲಿ ಪೂಜೆ ಸಲ್ಲಿಸಿ, ಊಟದ ಪದಾರ್ಥಗಳನ್ನು ಒಟ್ಟಾಗಿ ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಸಂಗ್ರಹಿಸುತ್ತಾರೆ. ಈ ಊಟದ ಪದಾರ್ಥಗಳಲ್ಲಿ ಮಂಕರಿ ತುಂಬಿ ಕುಳಿತ ಹೋಳಿಗೆ ರಾಶಿ ನೋಡುವುದೆಂದರೆ ವಿಸ್ಮಯದ ಸಂಗತಿಯೇ ಸರಿ. 
ಪೂಜೆ ಸಲ್ಲಿಸಿದ ಬಳಿಕ ಬಸವನನ್ನು ಊಟದ ಪದಾರ್ಥ ಇಡುವ ಸ್ಥಳಕ್ಕೆ ಕೊಂಡೊಯ್ದು ತಿನ್ನಿಸುತ್ತಾರೆ. ಒಮ್ಮೊಮ್ಮೆ ಬಸವ ಯಾವ ಆಹಾರವನ್ನೂ ಮೂಸಿನೋಡುವುದಿಲ್ಲವಂತೆ. ಆಗ ಜನರು ಗಾಬರಿಯಿಂದ ಹೊಯ್ಯಲಿಡುವ ಪರಿ ಆಶ್ಚರ್ಯವೆನಿಸುತ್ತದೆ. ರುಚಿ ಸರಿ ಇಲ್ಲವೇನೋ ಎಂಬ ನಂಬಿಕೆ (ಮೂಢನಂಬಿಕೆ)ಯಿಂದ ಅಡ್ಡಬಿದ್ದು ಪರಿಪರಿಯಾಗಿ ಬೇಡಿಕೊಂಡಾಗ ಬಸವ ಮನಸ್ಸು ಬದಲಾಯಿಸಿ ನೈವೇದ್ಯ ಸ್ವೀಕರಿಸುತ್ತಾನೆ ಎಂಬ ಹೇಳಿಕೆಯಿದೆ. 
ಈ ನೈವೇದ್ಯದ ಒಂದು ಹಂತ ಮುಗಿದ ಕೂಡಲೇ ಆ ಬಯಲಿನಲ್ಲಿ ಎಲ್ಲರಿಗೂ ಅನ್ನಸಂತರ್ಪಣೆ ಸಾಮೂಹಿಕವಾಗಿ ನಡೆಯುತ್ತದೆ. ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ಜನರು ಈ ಊಟದಲ್ಲಿ ಪಾಲ್ಗೊಂಡರೂ ಯಾರೂ ತಕರಾರು ಇಲ್ಲದೆ ಎಲ್ಲರೂ ಒಟ್ಟಾಗಿ ಕುಳಿತು ಊಟಮಾಡುತ್ತಾರೆ. ಹೋಳಿಗೆ ಸಾರು, ಎಂದರೆ ಬೇಳೆ ಕಟ್ಟಿನಿಂದ ತಯಾರಿಸಿದ ಎಲ್ಲರ ಮನೆಯ ಸಾರನ್ನು ಒಂದೇ ತಪ್ಪಲೆಗೆ ಸುರಿದಾಗ ಅದರಲ್ಲಿ  ಏನೋ ವಿಶೇಷವಾದ ರುಚಿ ಇರುವುದೆಂದು ಪ್ರತಿಯೊಬ್ಬರೂ ತಮ್ಮ ಮನೆಗೆ ಸ್ವಲ್ಪ ಸಾರನ್ನು ಮನೆಗೆ ಪ್ರಸಾದ ರೂಪದಲ್ಲಿ ಕೊಂಡೊಯ್ಯಲು ಮರೆಯುವುದಿಲ್ಲ. ಊರಿನ ಮತ್ತೊಂದು ನಂಬಿಕೆಯೆಂದರೆ ಪರೇವು ಆದ ಸ್ವಲ್ಪ ಹೊತ್ತಿಗೆ ಮಳೆ ಬರುತ್ತದೆ ಎಂಬುದು.
ಹಂಚಿ ತಿನ್ನುವ ಬುದ್ಧಿ ಬಂದಂದೇ ಕಲ್ಯಾಣ ಸಿದ್ಧಿ ಎಂದು ಬಸವಣ್ಣ ಸಾರಿದ್ದನ್ನು ಅಜ್ಜಂಪುರದ ಎಲ್ಲ ಸಹೃದಯರೂ ಆಚರಿಸುತ್ತಿರುವುದು ಅನುಕರಣೀಯ ಅಂಶ. ಬೇಡಿಬಂದವರಿಗೆ ತುತ್ತನ್ನು ಹಾಕಲು ಹಿಂಜರಿಯುತ್ತಿರುವ ಇಂದಿನ ದಿನಗಳಲ್ಲಿ, ಊರಿಗೆ ಬಂದವರಿಗೆಲ್ಲ ಸಾಮೂಹಿಕವಾಗಿ ಹೊಟ್ಟೆ ತುಂಬ ಹೋಳಿಗೆ ಊಟ ಹಾಕಿ ಅದರಲ್ಲಿಯೇ ಜೀವನದ ಸಾರ್ಥಕತೆಯನ್ನು ಕಾಣುವ ಹೃದಯ ಶ್ರೀಮಂತಿಕೆಯ ಸಂಸ್ಕೃತಿ ಇಂದಿಗೂ ಪ್ರಚಲಿತವಿರುವುದು ವಿಶೇಷ. 
ಮುಂದಿನ ವರ್ಷ ಬರುವ ಪರೇವಿನ ತನಕ ಈ ವರ್ಷದ ಪರೇವಿನ ಹೊಸ ಹೊಸ ಸಂಗತಿಗಳನ್ನು ಮೆಲುಕು ಹಾಕುತ್ತ ಆನಂದ ಪಡುತ್ತಲೇ ಇರುತ್ತಾರೆ. ಆದ್ದರಿಂದಲೇ ಅಂದಿನ ಗಾದೆಗೆ ಇಂದಿನ ಸೇರ್ಪಡೆ – ಅಜ್ಜಂಪುರದ ಹೋಳಿಗೆ ಪರೇವು ಮುಗಿದರೂ ವಿವರದ ಪರಿ ಮುಗಿಯದು.


-0-0-0-0-0-0-0-0-0-0-0-

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಅಜ್ಜಂಪುರ ಸೀತಾರಾಂ