109. ಜನಪ್ರಿಯ ಜಾನಪದ ದೈವ - ಅಂತರಗಟ್ಟೆಯ ಅಂತರಗಟ್ಟಮ್ಮ,

ಆತ್ಮೀಯ ಓದುಗರೇ,

ಅಜ್ಜಂಪುರವು ತಾಲೂಕು ಆದ ನಂತರ, ಈ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ದೇಗುಲಗಳು, ಐತಿಹಾಸಿಕ ಸ್ಥಳಗಳನ್ನು ಈ ಬ್ಲಾಗ್ ನಲ್ಲಿ ದಾಖಲಿಸುವ ಕಾರ್ಯ ಇದೀಗ ನಡೆದಿದೆ. ನನ್ನ ಕೋರಿಕೆಯನ್ನು ಮನ್ನಿಸಿ ಚಿತ್ರ-ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುವ ಎಲ್ಲ ಸಹೃದಯರಿಗೆ ನನ್ನ ವಂದನೆಗಳು.

ಈ ಸಂಚಿಕೆಯಲ್ಲಿ ಈ ವರ್ಷದ ಫೆಬ್ರವರಿ 19ರಂದು ಅಜ್ಜಂಪುರ ತಾಲೂಕಿಗೆ ಸೇರಿದ ಅಂತರಗಟ್ಟೆ ಗ್ರಾಮದಲ್ಲಿ ಜರುಗಿದ ಜಾತ್ರಾ ಮಹೋತ್ಸವವು ಸಂಪನ್ನವಾಯಿತು. ಅಂತರಗಟ್ಟೆಯ ಅಂತರಗಟ್ಟಮ್ಮನ ಜಾತ್ರೆಯ ನೆನಪು ನನ್ನನ್ನು ಆರು ದಶಕಗಳ ಹಿಂದಕ್ಕೆ ಕರೆದೊಯ್ದಿತು. ಆಗಿನ ಬಸ್ ಸ್ಟಾಂಡ್ ಸಮೀಪದಲ್ಲಿ ನಿಂತು ವೇಗವಾಗಿ ಸಾಗುತ್ತಿದ್ದ ಪಾನಕ ತುಂಬಿದ ಅಲಂಕೃತ ಎತ್ತಿನ ಗಾಡಿಗಳನ್ನು ಎಣಿಸುತ್ತಿದ್ದುದೇ ಒಂದು ಸವಿ ನೆನಪು. ಈಗಲೂ ಆ ಸಂಪ್ರದಾಯ ಮುಂದುವರೆದಿದೆಯಾದರೂ, ಎತ್ತಿನ ಗಾಡಿಗಳ ಭರಾಟೆಯು ಕಾಲಕ್ರಮದಲ್ಲಿ ಕಡಿಮೆಯಾದಂತಿದೆ.


ಸುಮಾರು ಹದಿನೈದು ವರ್ಷಗಳ ಹಿಂದೆ ದೇಗುಲದಲ್ಲಿದ್ದ ಮೂಲಮೂರ್ತಿಯು ಭಿನ್ನವಾಗಿಯಿತೆಂಬ ಕಾರಣಕ್ಕಾಗಿ, ನೂತನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಹಳೆಯ ವಿಗ್ರಹವನ್ನು ಕೆರೆಪಾಲು ಮಾಡುವ ಸಂಪ್ರದಾಯ ಹಿಂದಿತ್ತು. ಈಗಿನವರು ಹಾಗೆ ಮಾಡದೇ ಅದನ್ನು ಒಂದೆಡೆ ಸಂರಕ್ಷಿಸಿ, ಸುಸ್ಥಿತಿಯಲ್ಲಿ ಇಟ್ಟಿರುವರು. ಇದು ನಿಜಕ್ಕೂ ಉತ್ತಮ ಬೆಳವಣಿಗೆಯೇ ಸರಿ. 

ದೇವಾಲಯದ ಆವರಣದಲ್ಲಿ ಅಂತರಘಟ್ಟಮ್ಮನ ತಂಗಿ ಮಾತಂಗಮ್ಮನ ದೇಗುಲವಿದೆ. ಪ್ರಾಚೀನ ದೀಪಸ್ಥಂಬ ಮತ್ತು ಭೂತರಾಯನ ಗುಡಿಗಳನ್ನು ನವೀಕರಣದ ನೆಪದಲ್ಲಿ ಕೆಡವದೆ, ಸಂರಕ್ಷಿಸಿರುವುದು ಯೋಗ್ಯವಾಗಿದೆ. ದೇವಾಲಯವೂ ನವೀಕರಣಗೊಂಡಿದ್ದರೂ, ಅದರ ಸಾಂಪ್ರದಾಯಿಕತೆಯನ್ನು ನಷ್ಟಗೊಳಿಸದೇ ಕಾಪಾಡಿಕೊಂಡು ಮುಂದುವರೆದಿರುವುದು ಅಭಿನಂದನಾರ್ಹ. ಒಂದು ಮಂಟಪದಲ್ಲಿ ಗಣಪತಿಯ ವಿಗ್ರಹವಿದೆ. ಇದಲ್ಲದೆ ಕಂಬದಲ್ಲಿಯೂ ಒಂದು ಗಣಪತಿಯ ವಿಗ್ರಹವಿದೆ. ಇದನ್ನು ನವೀಕರಣದ ಕಾಲಕ್ಕೆ ಮುಚ್ಚಲಾಗಿತ್ತು. ನಂತರ ಅದರ ಮುಚ್ಚಿಗೆಯನ್ನು ತೆರವುಮಾಡಿ, ಕಾಣುವಂತೆ ಮಾಡಲಾಗಿದೆ. 

ದೇವಾಲಯದಲ್ಲಿ ಚೋಮನ ಮುಖವಾಡವೂ ಇದೆ. ಚೋಮನ ಕುಣಿತ ಒಂದು ಕಾಲಕ್ಕೆ ಪ್ರಸಿದ್ಧ ಆಕರ್ಷಣೆಯಾಗಿತ್ತು. ಈಗೀಗ ಅದನ್ನು ಹೊತ್ತು ಮೆರೆಸುವವರು ಕಡಿಮೆಯಾದ ಕಾರಣಕ್ಕೆ ಚೋಮನ ಕುಣಿತ ನಿಲುಗಡೆಗೆ ಬಂದಂತಾಗಿರುವುದು ವಿಷಾದನೀಯ. 

ಪ್ರತಿವರ್ಷ ಮಾಘ ಮಾಸದ ಎರಡನೇ ಶುಕ್ರವಾರ, ಶನಿವಾರಗಳಂದು ನಡೆಯುವ ವಿಶೇಷ ಸಾಂಪ್ರದಾಯಿಕ ಪೂಜಾವಿಧಾನಗಳು, ಜಾತ್ರಾ ಉತ್ಸವಗಳು ಸುತ್ತಲಿನ ಸಮಾಜವನ್ನು ಹಿಡಿದಿಟ್ಟಿದೆ. ಜನರು ಐಕಮತ್ಯದಿಂದ ಬಾಳಲು ಸಹಕಾರಿಯಾಗಿರುವ ಅಂತರಘಟ್ಟಮ್ಮನ ದೇವಾಲಯವು ಈಗ ಹೆಚ್ಚು ಪ್ರಸಿದ್ಧಿಯನ್ನು ಪಡೆಯುತ್ತಿದೆ. ಇದೇ ಕಾರಣಕ್ಕಾಗಿ ಸಮೀಪದ ವಿವಿಧ ಜಿಲ್ಲೆಗಳಲ್ಲಿ ಅಂತರಘಟ್ಟಮ್ಮನ ದೇವಾಲಯಗಳು ಸ್ಥಾಪಿತವಾಗಿ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. 

ಇಲ್ಲಿ ಪ್ರಕಟವಾಗಿರುವ ಎಲ್ಲ ಚಿತ್ರಗಳನ್ನೂ ಅಂತರಗಟ್ಟೆಯಲ್ಲಿ ವಾಸಿಸುತ್ತಿರುವ ಶ್ರೀ ಸೋಮಸುಂದರ ನಾಡಿಗರು ಒದಗಿಸಿದ್ದಾರೆ. ನನ್ನ ಕೋರಿಕೆಗೆ ಸ್ಪಂದಿಸಿ, ಸಕಾಲದಲ್ಲಿ ಚಿತ್ರಗಳನ್ನು ಸಂಗ್ರಹಿಸಿ ಕೊಟ್ಟಿರುವ ಅವರ ಸಹಕಾರವನ್ನು ಕೃತಜ್ಞತೆಯಿಂದ ನೆನೆಯುತ್ತೇನೆ.
ಜಾನಪದ ಸಾಹಿತ್ಯದಲ್ಲಿ ವಿಶೇಷವಾಗಿ ವರ್ಣಿತವಾಗಿರುವ ಅಂತರಘಟ್ಟಮ್ಮನ ಕಥಾನಕ ರೋಚಕವಾಗಿದೆ.  ಈ ಸಂಚಿಕೆಯ ಲೇಖನವನ್ನು ಸಿದ್ಧಗೊಳಿಸಿದವರು ಚಿಕ್ಕಮಗಳೂರಿನಲ್ಲಿರುವ ಇತಿಹಾಸದ ಪ್ರಾಧ್ಯಾಪಕಿ ಶ್ರೀಮತಿ ಮಂಜುಳಾ ಹುಲ್ಲಹಳ್ಳಿ. ಇವರು ಜಿಲ್ಲೆಯಾದ್ಯಂತ ಸಂಚರಿಸಿ, ಕ್ಷೇತ್ರಕಾರ್ಯ ಕೈಗೊಂಡು ಚಿತ್ರ-ಮಾಹಿತಿಗಳನ್ನು ಚಿಕ್ಕಮಗಳೂರಿನ ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟಿಸುತ್ತಿರುವರು. ಅವರ ಸಹಕಾರಕ್ಕೆ ಕೃತಜ್ಞತೆಗಳು.

-0-0-0-0-0-0-0-0-0-0-0-0-0ಅಂತರಘಟ್ಟೆ: ಜನಪದಲೋಕದ ಸಾಂಸ್ಕೃತಿಕ ರಸಘಟ್ಟಿ!

ಡಾ. ಮಂಜುಳಾ ಹುಲ್ಲಹಳ್ಳಿ,
ಚಿಕ್ಕಮಗಳೂರು.


ಅಂತರಘಟ್ಟೆ ಎಂದರೆ ಅನೇಕ ಹಳ್ಳಿಗಳ ಗಡಿಭಾಗಗಳು ಸೇರುವ ಪ್ರದೇಶ. ಇದು ಒಂದು ಊರಾಗಿ ಬೆಳೆದು ದುರ್ಗಾಂಬದೇವಿಯನ್ನು ಇಲ್ಲಿ ನೆಲೆ ನಿಲ್ಲಿಸಿಕೊಂಡು ಜನಪದರ ಸಂಭ್ರಮಕ್ಕೆ ಕಾರಣವಾಗಿರುವುದು ನಮ್ಮ ಅಜ್ಜಂಪುರ ತಾಲ್ಲೂಕಿನ 'ಅಂತರಘಟ್ಟೆ' ಗ್ರಾಮದ ವಿಶೇಷ. ಅಜ್ಜಂಪುರದಿಂದ ಹತ್ತು ಕಿ.ಮೀ, ಕಡೂರು-ಶಿವಮೊಗ್ಗ ಹೆದ್ದಾರಿಯಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಅಂತರಘಟ್ಟೆಗೆ ಬಂದು ದೇವಿಯ ದರ್ಶನ ಪಡೆಯಬೇಕೆಂಬುದು ಪ್ರತಿಯೊಂದು ಜನಪದ ಮನದ ಹಂಬಲ. ದಿನನಿತ್ಯ ಪೂಜೆಯ ಜೊತೆಗೆ ಶುಕ್ರವಾರ, ಮಂಗಳವಾರ ಅಮವಾಸ್ಯೆಯ ವಿಶೇಷ ದಿನಗಳಲ್ಲಿ ದೇವಿಗೆ ತಮ್ಮ ಭಕ್ತಿ, ಕಾಣಿಕೆ, ನಮನಗಳನ್ನು ಸಲ್ಲಿಸಲು ಜನಪದರಿಗೆ ನಿತ್ಯ ಅವಕಾಶ ಇದ್ದೇ ಇದೆ. ಆದರೆ ದೇವಿಯ ಸಾನಿಧ್ಯದಲ್ಲಿ ಸ್ವಲ್ಪಕಾಲ ನಿಂತು ಬರಬೇಕೆಂಬ ಜನಪದರ ಹಿರಿಯಾಸೆಯ ಪೂರೈಕೆಗೆ ಅಂತರಘಟ್ಟೆಯ ಜಾತ್ರೆಯ ದಿನಗಳು ಪ್ರಧಾನಗುರಿಯಾಗುತ್ತವೆ. ಅಂತರಘಟ್ಟೆಯ ಜಾತ್ರೆಯ ದಿನಗಳಲ್ಲಿ ಸಹಸ್ರ ಸಹಸ್ರಾರು ಜನಪದರು ಸಾವಿರದ ರೀತಿಗಳಲ್ಲಿ ದೇವಿಯ ಪೂಜಾಕಾರ್ಯಗಳಿಗೆ ಕಂಕಣಬದ್ಧರಾಗುತ್ತಾರೆ.

  •    ಪ್ರತಿವರ್ಷವೂ ಮಾಘಮಾಸ ಬರುತ್ತಿದ್ದ ಹಾಗೆ ಚಿಕ್ಕಮಗಳೂರು ಜಿಲ್ಲೆಯ ಬಯಲುನಾಡಿನಲ್ಲಿ ಉತ್ಸಾಹದ, ಉಲ್ಲಾಸದ ಅಲೆಗಳು ಚಿಮ್ಮಿ ಹೊಳೆಯತೊಡಗುತ್ತವೆ. ಹೊಲ, ಮನೆ, ಹಿತ್ತಲು, ಗುಡಿ, ಗುಡಾರಗಳು ಶುದ್ಧತೆಯ ಕಳೆಯೇರಿಸಿಕೊಳ್ಳುತ್ತವೆ. ಮನೆ-ಮನೆಗಳ ಎತ್ತುಗಾಡಿಗಳಿಗೆ ಸೊಬಗಿನ ಅಲಂಕಾರವನ್ನು ಮಾಡುವ ಮಂಡಿಗೆಗಳು ಜನಮಾನಸದ ಮನದಲ್ಲಿ ಮೂಡುತ್ತಾ ಹೋಗುತ್ತವೆ. ಜೋಡೆತ್ತಿನ ಬಂಡಿಗಳು ಸರ್ವಾಂಗ ಸುಂದರವಾಗಿ ಅಲಂಕರಿಸಿಕೊಂಡು ಅಂತರಘಟ್ಟೆಗೆ ಸಾಗಲು ಸಿದ್ದವಾಗುತ್ತವೆ.

'ಹಟ್ಟಿಯ ಗುಡಿಸಿರಿ, ಬಟ್ಟಾಲ ಬೆಳಗಿರಿ
 ಬಟ್ಟಾ ಮಲ್ಲಿಗೆ ಹರಡಿರಿ| ಅಂತರಘಟ್ಟೆ
 ತಾಯಮ್ಮ ಪೂಜೆಗೆ ಬರುತಾಳೆ||'

ಎಂಬ ಪದಗಳ ಆಸಾದಿ ನಾದ ಎಲ್ಲೆಡೆಗಳಲ್ಲಿ ಅನುರಣಿಸತೊಡಗುತ್ತವೆ.

   ಅಂತರಘಟ್ಟೆ ಜಾತ್ರೆ ಆರಂಭವಾಗುವುದರ ಸುಳಿವು ಸಿಕ್ಕ ಕೂಡಲೇ ಊರೂರುಗಳು ಎಚ್ಚೆತ್ತುಕೊಳ್ಳತ್ತವೆ. ನಿಶ್ಚಿತ ದಿನಗಳಂದು ನಿಗದಿತ ಊರುಗಳಿಂದ ಪಾನಕದ ಬಂಡಿಗಳು ಹೊರಡುತ್ತವೆ. ಉಳಿದಂತೆ ದೂರದೂರದ ನಾಡುಗಳಿಂದ ಅಂತಘಟ್ಟೆಯೆಡೆಗೆ ಬೇಕಾದ್ದನ್ನೆಲ್ಲ ತುಂಬಿಕೊಂಡ ಅಲಂಕೃತ ಬಂಡಿಗಳು ಗುಂಪು ಗುಂಪಾಗಿ ಪಯಣ ಹೊರಟೇಬಿಡುತ್ತವೆ. ಕಡೂರು, ಶಿವನಿ, ಬೀರೂರು, ಹೊಸದುರ್ಗ, ತರೀಕೆರೆ, ಅಜ್ಜಂಪುರ ಎಲ್ಲ ಊರುಗಳ ದಾರಿಯೂ ಅಂತರಘಟ್ಟೆಯೆಡೆಗೆ ತೆರೆದುಕೊಳ್ಳುತ್ತವೆ. ಈ ದಿನಗಳಲ್ಲಿ, ಈ ಹಾದಿಗಳಲ್ಲಿ ಊರೂರುಗಳಿಂದ ಒಟ್ಟೊಟ್ಟಿಗೆ ಹೊರಡುವ ನಮ್ಮ ಎತ್ತಿನ ಬಂಡಿಗಳಿಗೇ ಮೊದಲ ಮರ್ಯಾದೆ. ಇತರೇ ವಾಹನಚಕ್ರಗಳು ಸಮಯ ನೋಡಿ ದಾರಿಮಾಡಿಕೊಂಡು ಮುಂದುರುಳಬೇಕು!

  • ನಮ್ಮ ಜನಪದ ಮನಗಳು ಪ್ರತಿ ಊರಿನಲ್ಲೂ ಮಾರಮ್ಮ, ಚೌಡಮ್ಮ, ಕರಿಯಮ್ಮ, ದುರ್ಗಮ್ಮ, ಕಬ್ಬಾಳಮ್ಮ ಮುಂತಾದ ಹೆಸರಿನಲ್ಲಿ ಗ್ರಾಮ ದೇವತೆಗಳನ್ನು ರೂಪಿಸಿಕೊಂಡಿವೆ. ಗ್ರಾಮಕ್ಕೆ, ಕುಟುಂಬಕ್ಕೆ, ವೈಯುಕ್ತಿಕ ನೆಲೆಗಳಲ್ಲಿ ಬಂದೆರಗುವ ಕೆಡಕುಗಳನ್ನು ನಿವಾರಿಸಿ ಒಳಿತನ್ನು ಕೊಡಮಾಡು ಎಂದು ಭಕ್ತಿಪೂರ್ವಕವಾಗಿ ನಿವೇದಿಸಿಕೊಳ್ಳಲು ಇದು ನಮ್ಮ ಜನಪದರು ಕಂಡುಕೊಂಡು ಸರಳ ಹಾದಿ. ಹಾಗೆಯೇ ದೇವತೆ ಮಾಡುವ ಒಳಿತಿಗೆ ಪ್ರತಿಯಾಗಿ ಹರಕೆ, ಕಾಣಿಕೆ, ನೈವೇದ್ಯಗಳನ್ನು ಸಲ್ಲಿಸಲೇಬೇಕೆಂಬುದೂ ನಮ್ಮ ಜನಪದರ ತರ್ಕ. ಹೀಗಾಗಿ ತೀರಾ ಸಂದಿಗ್ಧದ ಸಂಕಷ್ಟದ ಸನ್ನಿವೇಶಗಳಲ್ಲಿ ಆತ್ಮಬಲಿ, ನರಬಲಿ, ಪ್ರಾಣಿಬಲಿಗಳನ್ನು ಸಮರ್ಪಿಸುವ ಮತ್ತು ಸಾಧಾರಣ ಸಮಯಗಳಲ್ಲಿ ಹೂಹಣ್ಣು ಕಾಯಿ ನಿವೇದಿಸುವ ಆಚರಣೆಗಳು ಹಂತಹಂತವಾಗಿ ರೂಪಗೊಳ್ಳುತ್ತಾ ಬಂದವು. ಇದೇ ಸಮಯದಲ್ಲಿ ತಾವು ಆರಾಧಿಸುವ ತಮ್ಮ ಗ್ರಾಮ ದೇವತೆಯು ತಮ್ಮ ಸುತ್ತಲ ಇತರೆ ಗ್ರಾಮದೇವತೆಗಳಿಗಿಂತ ಹೆಚ್ಚಾಗಿರಬೇಕೆಂಬ ಮನೋಸಹಜ ಆಕಾಂಕ್ಷೆ ಅನೇಕ ಪ್ರೇರಿತ, ಸೂಚಿತ, ಕಲ್ಪಿತ ಕಥಾನುಕಥೆಗಳ ಅಂತರೆಳೆಗಳನ್ನು ಹಾಸುಹೊಕ್ಕಾಗಿ ಹೆಣೆದುಕೊಂಡಿತು. ಈ ರೀತಿಯ ಕತೆಗಳು ಸಾರ್ವಜನಿಕವಾಗುತ್ತಾ ಹೋದಂತೆ ಒಂದು ಊರಿನ ಕತೆ ಮತ್ತೂ ಒಂದೂರಿನದಾಗುವುದಕ್ಕೆ ಹೆಚ್ಚಿನ ಸಮಯ ಬೇಕಾಗಲಿಲ್ಲ.

ಹೀಗೆಯೇ ನಮ್ಮ ಅಂತರಘಟ್ಟಮ್ಮನೂ ಅನೇಕ ಕಥಾನುಕಥೆಗಳ ಸುವರ್ಣ ಹೆಣಿಗೆಯ ಜಾಲದಲ್ಲಿ ಮಿಂದೆದ್ದು ಪುಟವಿಡಿಸಿಕೊಂಡಿದ್ದಾಳೆ. ತನ್ನ ಮಹಿಮೆ ಹಾಡಿಹೊಗಳಲೆಂದೇ ತನಗೇ ಪ್ರತ್ಯೇಕ ಹಾಡುಗಾರರನ್ನು ನಿಯಮಿಸಿಕೊಂಡಿದ್ದಾಳೆ. ಹೀಗಾಗಿ ಅಂತಘಟ್ಟಮ್ಮನ ಭಕ್ತರಾದ ಆಸಾದಿಗಳ ಆಸಾದಿ ಪದಗಳು ಜನಪದ ಗೀತೆಗಳಲ್ಲಿಯೇ ಅತ್ಯಂತ ವಿಶಿಷ್ಟ ಸ್ಥಾನಪಡೆದಿವೆ. ದೇವಿಯನ್ನು ಇನ್ನಿಲ್ಲದಂತೆ ಹೊಗಳಿ ಅಟ್ಟಕ್ಕೇರಿಸುವ; ಹೀನಾಯವಾಗಿ ಬೈದು ಮೂದಲಿಸಿ ದೇವಿಯ ಮೊಗದಲ್ಲಿ ನಗೆ ಉಕ್ಕಿಸುವ ಆಸಾದಿ ಅಂತರಘಟ್ಟಮ್ಮನ ಆಪ್ತಸಹಾಯಕನಾಗಿ ಮಾನ್ಯತೆ ಪಡೆಯಲು ಸಾಧ್ಯವಾಗಿದೆ. ಆಸಾದಿಯು ಜೊತೆಗೆ ಇಲ್ಲದಿದ್ದರೆ ಈ ತಾಯಿಯ ಬಳಿಗೆ ಗಾಳಿಯೂ ಸುಳಿಯಲಾರದು! ಈ ಅಪೂರ್ವ ಬಾಂಧವ್ಯಕ್ಕೆ ಆಸಾದಿಗಳು ಕೊಣವೇಗೌಡನ ಕತೆಯ ಚೌಕಟ್ಟುಗಳನ್ನು ಅರ್ಥಪೂರ್ಣವಾಗಿ ತೊಡಿಸುತ್ತಾರೆ.

    ತುಂಬಾ ಹಿಂದಿನ ಕಾಲದಲ್ಲಿ ನಾಡಿನ ಬಲುದೊಡ್ಡ ಪಟ್ಟಣವಾದ ಆಸಂದಿಸೀಮೆಯಲ್ಲಿ ಚಿಕ್ಕಮಗುವನ್ನು ಎತ್ತಿಕೊಂಡು ಕೂಲಿ ಕೆಲಸಕ್ಕಾಗಿ ಅಲೆಯುತ್ತಿದ್ದ ಬಡವಿಧವೆ ಹೆಣ್ಣುಮಗಳು ಆ ಪಟ್ಟಣದ ದೊರೆಯ ಕಣ್ಣಿಗೆ ಬಿದ್ದಳು. ಅವಳ ಮೇಲೆ ಕನಿಕರಗೊಂಡ ರಾಜ ಅವಳಿಗೆ ಅರಮನೆಯಲ್ಲಿಯೇ ಆಶ್ರಯ ನೀಡಿದ. ಅವಳ ಮಗ ಬೆಳೆದು ದೊಡ್ಡವನಾದ ಮೇಲೆ ಅವನಿಗೆ ಒಂದಷ್ಟು ಭೂಮಿಯನ್ನೂ ಕಾಣಿಕೆಯಾಗಿ ನೀಡಿದ. ಈ ಹುಡುಗನೇ ಕೊಣವೇಗೌಡ. ಇದರಿಂದ ತಾಯಿಗೂ ತುಂಬಾ ತೃಪ್ತಿಯಾಯಿತು. ಮಲ್ನಾಡ ಪಕ್ಷಿ ನೊಗದಡಿ ನುಸುಳಿ ಹೋದ ನಂತರ ನೊಗದ ಪೂಜೆ ಮಾಡಿ ನೇಗಿಲು ಹೂಡಿ ಭೂಮಿ ಉಳುಮೆ ಮಾಡಲು ಮಗನಿಗೆ ಸೂಚಿಸುತ್ತಾಳೆ. ಹಾಗೆ ಪಕ್ಷಿ ನುಸುಳಲು ಕಾದೇ ಕಾದ ಕೊಣವೇಗೌಡ. ಕಡೆಗೊಂದು  ಸುಗ್ಗಿಯ ದಿನದಲ್ಲಿ ಹಕ್ಕಿಯ ಶಕುನ ಸಿಕ್ಕಿತು. ಆಗ ಉಳುಮೆ ಮಾಡಲು ಹೊರಟ ಕೊಣವೇಗೌಡ ಲೋಕದ ಕಣ್ಣಿನಲ್ಲಿ ನಗೆಪಾಟಲಿಗೆ ಈಡಾದ. ಆದರೂ ಎದೆಗುಂದಲಿಲ್ಲ. ಧೈರ್ಯವಾಗಿ ನಾಲ್ಕಾರು ಸಾಲು ಉತ್ತ ನಂತರ ನೊಗಕ್ಕೇನೋ ಸಿಕ್ಕಿದಂತಾಯಿತು. ನೋಡಿದರೆ, ಹೊನ್ನ ಕೊಪ್ಪರಿಗೆಗಳು! ಸಿಕ್ಕಿದ ಏಳು ಕೊಪ್ಪರಿಗೆಗಳನ್ನು ರಾಜನಿಗೆ ಸಮರ್ಪಿಸಹೋದರೆ ರಾಜ ಹೇಳಿದ್ದು, 'ಭೂಮಿಯ ಜೊತೆಗೆ ಅಲ್ಲಿ ಪಡೆದುದೆಲ್ಲಾ ನಿನ್ನದೆ! ಸುಖವಾಗಿ ಅನುಭವಿಸು!'

ಈ ಸಂಪತ್ತಿನಿಂದ ಕೊಣವೇಗೌಡನ ಹಿರಿಮೆ ರಾಜನಿಗಿಂತಲೂ ಹಿರಿದಾಯಿತು. ಅರಮನೆ, ಕೋಟೆ, ಪಟ್ಟಣಗಳನ್ನು ಕಟ್ಟಿ ಬೆಳೆದೇ ಬೆಳೆದ. ದಾನಧರ್ಮಗಳಿಗೆ ಹೆಸರಾದ. ಇವನ ಮಗಳಿಗೆ ತಂದೆಯ ಜೀವನಪ್ರೀತಿ ದಕ್ಕಲಿಲ್ಲ. ಅತಿ ಆಸೆಯ ಭರದಲ್ಲಿ ಒಮ್ಮೆ ಒಬ್ಬ ದಾಸಯ್ಯನನ್ನು ಎದುರು ಹಾಕಿಕೊಂಡಳು. ಅವಳು ದಾಸಯ್ಯನಿಗೆ ಹೊಡೆದ ಹೊಡೆತ, ದಾಸಯ್ಯನ ನೋವಿನ ಕೂಗು ಮಾರಿಕಣಿವೆಯಲ್ಲಿದ್ದ ಏಳು ಜನ ಅಕ್ಕತಂಗಿಮಾರಿಯರಿಗೆ ಮುಟ್ಟಿತು. ದಾಸಯ್ಯನು 'ಮಾರಿ ನುಗ್ಸಿ ನಿನ್ನ ಪಟ್ಟಣಕ್ಕೆ ಬೆಂಕಿ ಹಾಕುಸ್ತಿನಿ' ಎಂದು ಶಪಥ ಮಾಡಿ ನಡೆದಾಗ ತನ್ನನ್ನೆ ನಂಬಿ ಬರುತ್ತಿರುವ ದಾಸಯ್ಯನಿಗೆ ಸಹಾಯಮಾಡಲು ಮುದ್ರೆಕಲ್ಲಿನ ಬಳಿ ಮಾರಿಕಣಿವೆಯ ಹಿರಿಯಕ್ಕ ದುರ್ಗವ್ವ ಎದುರಾದಳು. ಅಪಮಾನದಿಂದ ಕುಸಿದು ಹೋಗಿದ್ದ  ದಾಸಯ್ಯನಿಗೆ ಅಭಯ ನೀಡಿ 'ಹಿಂದಿರುಗಿ ನೋಡದೆ ಪಟ್ಟಣದ ಕಡೆಗೆ ನೀನು ನಡೆ. ನಾನು ನಿನ್ನ ಹಿಂದೆಯೇ ಬರುವೆ. ನಿನ್ನ ಶಪಥ ಪೂರೈಸುವೆ' ಎಂದಳು.     

ಊರ ದೊಡ್ಡಕೆರೆಏರಿಯ ಬಳಿ ಬಂದಾಗ ಕುತೂಹಲ ತಾಳದೆ ದಾಸಯ್ಯ ಹಿಂದಿರುಗಿ ನೋಡಿಬಿಟ್ಟ. ಆಕಾಶ ಭೂಮಿ ಒಂದಾಗುವಂತೆ ಬಾಯಲ್ಲಿ ಉರಿಕಾರುತ್ತ ಬರುತ್ತಿದ್ದ ಮಾರಮ್ಮನ ಉಗ್ರರೂಪ ನೋಡಿ ತತ್ತರಿಸಿಬಿದ್ದ. ತನಗೆ ಕೊಟ್ಟ ಮಾತಿಗೆ ತಪ್ಪಿದ ದಾಸಯ್ಯನೂ ಸೇರಿದಂತೆ ಇಡೀ ಕೊಣವೇಗೌಡನ ಪಟ್ಟಣವನ್ನೇ ಮಾರಿ ಉರಿಸಿ ಬಿಟ್ಟಳು. ತತ್ತರಿಸಿಹೋದ ಕೊಣವೇಗೌಡ ಸಮೀಪವಿದ್ದ ಕೋಣನ ಹೊಟ್ಟೆಯಲ್ಲಿ ಅಡಗಿಕೊಂಡ. ಹೆದರಿಹೋದ ಕೊಣವೇಗೌಡನ ಮಗಳು ಎತ್ತಲೋ ಓಡಿಹೋದಳು.

ಕೊಣವೇಗೌಡನ ಪಟ್ಟಣ ಸುಟ್ಟು ಉಳಿದ ಸಂದಿಗೊಂದಿ ಜಾಗವನ್ನು ಆಸಂದಿಯಾಗಿ ಉಳಿಸಿ ಬೇಗೂರಿಗೆ ಬೇಗೆ ಹಚ್ಚಿದ ಮಾರಮ್ಮತಾಯಿ ಹಸಿವು ಬಾಯಾರಿಕೆಯಿಂದ ದಣಿದಿದ್ದಳು. ಸಮೀಪದ ಹೊಲದಲ್ಲಿ ಹತ್ತಿ ಬಿಡಿಸುತ್ತಿದ್ದವರಿಂದ ಮೊಸರನ್ನವನ್ನು ಬೇಡಿದಾಗ ಅವರು ಮನೆಗೆ ಹೋಗಿ ಮಾಡಿ ತರುವುದರೊಳಗೆ ಹೊಲದ ಹತ್ತಿಯನ್ನೆಲ್ಲಾ ಬಿಡಿಸಿ ರಾಶಿ ಹಾಕಿದ್ದಳು. ಈ ಹೆಣ್ಣುಮಗಳ ಸಾಹಸಕ್ಕೆ ಬೆರಗಾದ ಅವರು ಇವಳನ್ನು ಮನೆ ಸೊಸೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿದಾಗ ಅದನ್ನು ನಿರಾಕರಿಸಿ, ಅಲ್ಲಿಂದ ಅಂತರಕ್ಕೆ ಹಾರಿ ಘಟ್ಟದಲ್ಲಿ ಇಳಿದು ಅಂತಘಟ್ಟಮ್ಮನಾಗಿ ಈ ಸ್ಥಳದಲ್ಲಿ ನೆಲೆಯಾದಳು.

'ದಿಬ್ಬಾವ ಹತ್ಯಾಳೆ, ಕಿಗ್ಗಣ್ಣಲ್ಲಿ ನೋಡಾಳೆ
 ಉಜ್ಜನಿಗಿಂತಲೂ ಇದು ಮೇಲು| ಅಂತರಘಟ್ಟೆ
 ತಾಣ ಒಳ್ಳೆದೆಂದು ನೆಲೆಸ್ಯಾಳೆ||'

ಅಂತರಘಟ್ಟೆ ಮಾರಮ್ಮ, ಕರಿಯಮ್ಮ, ದುರ್ಗಮ್ಮ ಎಂದೆಲ್ಲಾ ಹೆಸರಿನಿಂದ ಪ್ರಸಿದ್ಧವಾಗಿರುವ ಈ ದೇವತೆಯ ಜೊತೆಗೆ ಮಾತಂಗಮ್ಮ, ಮಾರಾಳಮ್ಮ, ಬೇವಿನಮರದಮ್ಮ ಮುಂತಾದ ದೇವಿಯರು ಇಲ್ಲಿಯೇ ನೆಲೆಯಾದರು. ತಂಗಿ ಮಾತಂಗವ್ವನ ಸಹಾಯದಿಂದ ಕೊಣವೇಗೌಡ ಹೊಕ್ಕಿದ್ದ ಕೋಣನನ್ನು ಹಿಡಿತರಿಸಿ ಕಡಿದು ಕೊಣವೇಗೌಡನನ್ನು ಹೊರಗೆಳೆದು ಸಂಹರಿಸಿದಳು. ಆಸಂದಿ ಸುಟ್ಟುರಿಯುವಾಗ ಪರಾರಿಯಾಗಿದ್ದ ಕೊಣವೇಗೌಡನ ಮಗಳು ಮುದ್ದಮ್ಮನನ್ನು ಹುಡುಕಿ ಕರೆತಂದು ಗುಡಿಯ ಕಾವಲಿಗೆ ನೇಮಿಸಿಕೊಂಡಳು. ಈ ಎಲ್ಲವನ್ನು ಕಣ್ಣಾರೆ ಕಂಡು ಅಚ್ಚರಿಯಿಂದ ನಿಂತಿದ್ದ ಆಸಾದಿಯನ್ನು ತನ್ನ ಜೊತೆಗಿರಲೆಂದು ಕರೆದುಕೊಂಡಳು!

   ಹೀಗೆ ಅಂತರಘಟ್ಟೆಗೆ ತಾಯಿ ಬಂದು ನೆಲೆಸಿದುದರ ವೈವಿಧ್ಯಮಯತೆ ಒಂದೊಂದು ಜನಪದದ ಮನದಲ್ಲೂ ಒಂದೊಂದು ರೀತಿಯಲ್ಲಿ ತೆರೆದುಕೊಳ್ಳುತ್ತದೆ. ಈ ಕತೆಗಳ ಹಿನ್ನೆಲೆಗಳು ಜಾತ್ರೆಯ ಸಮಯದಲ್ಲಿ ಬಿಟ್ಟೂಬಿಡದೇ ಆಚರಿಸುವ ಪದ್ಧತಿ ಪರಂಪರಾನುಗತವಾಗಿ ಇರುವುದನ್ನು ಗಮನಿಸಿದರೆ ಜನಪದ ಮನಸ್ಸುಗಳ ಉತ್ಕೃಷ್ಟತೆ ಮನ ಮುಟ್ಟುತ್ತದೆ.

  ಜಾತ್ರೆ ಆರಂಭದದಿನದಲ್ಲಿಯೇ ಬೇಗೂರಿನಿಂದ ಮದುವಣಗಿತ್ತಿ ಶಾಸ್ತ್ರ ನೆರವೇರುತ್ತದೆ. ದೇವಿಗೆ ತಂಪುನೀಡಲು ಬೇವಿನಸೀರೆ ಉತ್ಸವ ಮೆರೆಯುತ್ತದೆ.  ಆಸಂದಿ ಹೊತ್ತುರಿಸಿದ ನೆನಪಿಗಾಗಿ ಆಸಂದಿ ನಾಡಿನ ಮೂಲೆಯಲ್ಲಿ ಕೆಂಡಕೊಂಡ ಹಚ್ಚಿ ಸುತ್ತ ಸಂಭ್ರಮದ ಉತ್ಸವ, ಉಯ್ಯಾಲೆ ಉತ್ಸವದ ಮೆರುಗು ಸಾಗುತ್ತದೆ. ಬಂಡಿ ಬಂಡಿ ಪಾನಕದ ಪೂಜೆ, ನೈವೇದ್ಯ, ಸಂತರ್ಪಣೆಗಳು ದೇವಿಯ ಹಸಿವು ಬಾಯಾರಿಕೆ ತಣಿಸಲು ನಾಡಿನ ಎಲ್ಲೆಡೆಗಳಿಂದಲೂ ಸಾಗಿ ಬರುತ್ತವೆ. ಕಡೆಗೆ ದೇವಿಯಿರುವ ತಾಣಕ್ಕೆ ಬರಲಾಗದೆ ತಾವಿದ್ದ ಕಡೆಯಿಂದ ಧೂಪ, ಹೊಗೆ ಕಾಣಿಸಿದರೂ ದೇವಿ ಸಂತೃಪ್ತಳಾಗುತ್ತಾಳೆ!

  ದುಡ್ಡಿನ ಧೂಪವನಾಕಿ ದೊಡ್ಡವಳ ನೆನೆದೇವು
  ಇದ್ದೂರು ಗ್ರಾಮದ ಗರತೀಯ| ಅಂತರಘಟ್ಟೆ
  ದೊಡ್ಡೋಳ ಮೊದಲೇ ನೆನೆದೇವು||

 ಮಾಘಮಾಸದ ಪೂರ್ಣಿಮೆಯ ಮೊದಲು ಬರುವ ಶನಿವಾರ ತಾಯಿಯ ವೈಭವದ ಜಾತ್ರೆಗೆ ಹತ್ತಿರ ಹತ್ತಿರ ಲಕ್ಷ ಜನ ಸೇರುತ್ತಾರೆ. ಈ ಪುಟ್ಟ ಊರಿಗೆ ಇಷ್ಟು ಧಾರಣಶಕ್ತಿ ಹೇಗೆ ಎಂಬುದೂ ಅಚ್ಚರಿಯೇ. ಎತ್ತಿನ ಗಾಡಿಗಳಲ್ಲಿ ಸಮಸ್ತವನ್ನು ತುಂಬಿಕೊಂಡು ಬಂದು ಸುತ್ತಮುತ್ತಲಿನ ಹೊಲತೋಟಗಳಲ್ಲಿ ಬೀಡುಬಿಟ್ಟು ಜಾತ್ರೆಯ ಸಂಭ್ರಮ ಸವಿಯುವ ಜನಪದರ ಜೀವನಪ್ರೀತಿ, ಅಂತರಘಟ್ಟಮ್ಮ ದೇವಿಯ ಮೇಲಣ ಭಕ್ತಿ ಎಲ್ಲವೂ ವಿಸ್ಮಯವೇ! 

ಆಸಂದ್ಯಂತರಘಟ್ಟೆ ಹಡಗಲಿ ತಿಮ್ಮಾಪುರ
ಬೆಡಗಿನಾರತಿ ದುರುಗವ್ವ| ನಿನತೇರು
ಬಡಗಣ ಮುಂದಾಗಿ ನೆಡೆದಾವೆ||

ಬಡಗಣ ಮುಂದಾಗಿ ನೆಡೆಯುವ ತಾಯಿಯ ಜಾತ್ರಾ ಮಹೋತ್ಸವದ ವೈಭವ ಇಂದು ಮತ್ತು ನಾಳೆ ನಾಡಿನ ಜನಪದರ ಕಣ್ಣುಮನಹೃದಯಗಳನ್ನು ತುಂಬುತ್ತಿದೆ. ಶಕ್ತಿ ಆಸಕ್ತಿ ಇದ್ದರೆ ಗಾಡಿ ಹತ್ತಿ ಅಂತರಘಟ್ಟೆಗೆ ಹೊರಡಬಹುದು. ಇಲ್ಲವಾದರೆ ಇದ್ದಲ್ಲಿಂದಲೇ ಕೈಮುಗಿದು ದೇವಿಗೆ ಭಕ್ತಿನೈವೇದ್ಯ ಸಮರ್ಪಿಸಬಹುದು!ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

118. ಮರುಕಳಿಸಿದ ನೆನಪುಗಳು

105. "ಅಜ್ಜಂಪುರ" ಸ್ಥಳನಾಮದ ಸುತ್ತ...........!

113. ಆಸಂದಿ ನಾಡು: ಸಂಸ್ಕೃತಿ, ಪರಂಪರೆ, ಇತಿಹಾಸದ ಬೀಡು!