110. ವಿಶ್ವ ರಂಗಭೂಮಿ ದಿನಾಚರಣೆ : ಅಜ್ಜಂಪುರದ ಒಂದು ನೆನಪು

 ಆತ್ಮೀಯ ಓದುಗರೇ,

ಇಲ್ಲಿ ಅಜ್ಜಂಪುರದ ಹಳೆಯ ನೆನಪೊಂದನ್ನು ಮಿತ್ರ ಅಪ್ಪಾಜಿ ಜಿ.ಬಿ. ಇವರು ಸುಂದರವಾಗಿ ದಾಖಲಿಸಿದ್ದಾರೆ. ಸೂಕ್ಷ್ಮಗ್ರಾಹಿಗಳಿಗೆ ಮಾತ್ರ ಸಾಧ್ಯವಾಗುವ ಇಂಥ ಅನೇಕ ಸ್ಮರಣೆಗಳನ್ನು ಅಪ್ಪಾಜಿ ಈ ಹಿಂದೆಯೂ ನೀಡಿರುವುದುಂಟು. ಡಾ. ಶಿವರಾಮ ಕಾರಂತರು ಅಜ್ಜಂಪುರಕ್ಕೆ ಬಂದಾಗ ಅವರು ಊರಿನ ಕಲಾ ಸೇವಾ ಸಂಘದ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಯಥಾರ್ಥವಾಗಿ ನೀಡಲಾಗಿದೆ. ಅಜ್ಜಂಪುರದ ಕಲಾವಿದ ಶ್ರೀ ಸಿದ್ದಪ್ಪನವರ ಬಗ್ಗೆಯೂ ನೆನಪುಗಳಿವೆ. ಅವು ಹಾಗೇ ಹಾರಿಹೋಗದಿರಲೆಂದು ಇಲ್ಲಿ ದಾಖಲಿಸಿರುವೆ. 


ಡಾ. ಶಿವರಾಮ ಕಾರಂತರು, ಕಲಾವಿದ ಜಿ.ಸಿ. ಸಿದ್ದಪ್ಪನವರು.

ಇಂದು ವಿಶ್ವ ರಂಗಭೂಮಿ ದಿನಾಚರಣೆ : ಅಜ್ಜಂಪುರದ ಒಂದು ನೆನಪು

ಪ್ರಖ್ಯಾತ ಕಾದಂಬರಿಕಾರ, ಪ್ರಖರ ಚಿಂತಕ ಕೋಟ ಶಿವರಾಮ ಕಾರಂತರಿಗೆ ಜ್ಞಾನಪೀಠ ಪ್ರಶಸ್ತಿ‌ ಬಂದ ಹೊಸತರಲ್ಲಿ ನಾಡಿನಾದ್ಯಂತ ಬಿದರೆಯಿಂದ ಕೊಡಗಿನ ತನಕ ಜನರು ಸನ್ಮಾನ ಸಮಾರಂಭ ಏರ್ಪಡಿಸಿ, ಸಂಭ್ರಮಿಸಿದರು. ಹಾಗೆಯೇ ಚಿಕ್ಕಮಗಳೂರು ಜಿಲ್ಲೆಯ ನಮ್ಮೂರು ಅಜ್ಜಂಪುರದಲ್ಲಿ ಕೂಡ ಆಗ ಕಾರಂತರಿಗೆ ಸನ್ಮಾನ ನಡೆಯಿತು. ಅಜ್ಜಂಪುರದ ಹವ್ಯಾಸಿ ರಂಗ ಸಂಸ್ಥೆ ಕಲಾ ಸೇವಾ ಸಂಘದ ರಂಗಮಂದಿರದಲ್ಲಿ ಸನ್ಮಾನ. ನಮ್ಮೂರಿನ ಸಂಘಟಕರು ಪ್ರಾಸ್ತಾವಿಕ ಭಾಷಣದಲ್ಲಿ ನಮ್ಮ ಸಂಸ್ಥೆಯ ಜಗಜ್ಯೋತಿ ಬಸವೇಶ್ವರ ನಾಟಕದ ನೂರು ಪ್ರದರ್ಶನಗಳು ನಡೆದಿವೆ ಇತ್ಯಾದಿ ಅಭಿಮಾನದ ಮಾತುಗಳನ್ನು ಹೇಳಿಕೊಂಡರು. ಮೊದಲಿಗೆ ಕಲಾ ಸೇವಾ ಸಂಘದ ಹೆಸರಿನ ಜಾಡನ್ನೇ ಹಿಡಿದು ಯಾರೂ ಕಲಾಸೇವೆ ಮಾಡುವುದಿಲ್ಲ. ನನಗೇನೋ ಹೇಳಲಿಕ್ಕಿದೆ, ‌ನಾನಿಂಥದನ್ನು ಮಾಡಿ ತೋರಿಸಬಲ್ಲೆ ಎಂದು ರಂಗದ ಮೇಲೋ ಇನ್ನೊಂದು ಮಾಧ್ಯಮದಲ್ಲೋ ತರುತ್ತೇನೆ. ಹಾಗೆಂದ ಮಾತ್ರಕ್ಕೆ ಅದು ಸೇವೆಯಾಗದು. ಕಲೆಗೆ ಸೇವೆ ಬೇಕಿಲ್ಲ. ಪ್ರತಿಭೆ, ಪರಿಶ್ರಮ, ಯೋಗ್ಯತೆ ಬೇಕು ಅಷ್ಟೆ. ನಿಮ್ಮ ಬಸವೇಶ್ವರ ನಾಟಕ ನೂರು ಪ್ರದರ್ಶನ ಕಂಡಿರಬಹುದು. ಇಲ್ಲಿ ಪ್ರಶ್ನೆ ಏನೆಂದರೆ ಬಸವಣ್ಣನವರ ಕಥೆ ಎಂಬ ಕಾರಣಕ್ಕಾಗಿ ಆ ನಾಟಕ ನೂರು ಪ್ರದರ್ಶನ ಕಂಡಿತೋ? ನಿಜವಾಗಿ ನೀವು ಚೆನ್ನಾಗಿ ನಾಟಕ ಮಾಡಿದಿರಿ ಎಂಬ ಕಾರಣಕ್ಕೋ ಎಂಬುದು ಮುಖ್ಯವಾಗುತ್ತದೆ.
ಕಲೆಯ ರೀತಿ-ನೀತಿ ಹಾಗೆ...ಎಂದು ಕಲೆಯ ಕಿರು ಪರಿಚಯದ ರುಚಿಯನ್ನು ನಮಗೆ ಉಣಬಡಿಸಿದ್ದನ್ನು ಮರೆಯಲಾರೆ. ಕಲೆಯ ಅಳತೆಗೋಲು, ಮೌಲ್ಯಮಾಪನ ಏನೇ ಇರಲಿ...ಆ ನಾಟಕದ ಬಸವಣ್ಣನವರ ಪಾತ್ರಧಾರಿಯನ್ನು ನೋಡುವ ಕುತೂಹಲ ಇದ್ದೇ ಇತ್ತು. ಕಲಾಸೇವಾ ಸಂಘದ ಅಂದಿನ ಪ್ರಧಾನ ನಿರ್ದೇಶಕರಾಗಿದ್ದ ಎ.ಪಿ.ನಾಗರಾಜ ಶ್ರೇಷ್ಠಿಯವರು ಈ ಬಸವಣ್ಣನವರ ಪಾತ್ರಧಾರಿಯ ಬಗ್ಗೆ ಹೇಳಿದ್ದರು. ಆ ಪಾತ್ರಧಾರಿ ಗಿರಿಯಾಪುರದ ಜಿ.ಸಿ. ಸಿದ್ದಪ್ಪನವರು. ಅವರು ಅಜ್ಜಂಪುರದ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು ಎಂದೂ ಶ್ರೇಷ್ಠಿಯವರು ತಿಳಿಸಿದ್ದರು. ಮುಂದೆ ಅವರು ಪರಿಚಯವಾದರು. ಅವರ ನಡೆ- ನುಡಿ ಗಮನಿಸಿದ ನನಗೆ ಬಸವಣ್ಣನವರ ಪಾತ್ರ ತಕ್ಕ ವ್ಯಕ್ತಿ ಇವರು ಎನಿಸಿತ್ತು. ಅವರ ಸುಂದರ ರೂಪ, ಸೌಮ್ಯ ಸ್ವಭಾವ ಹಾಗಿತ್ತು. ಮಾತುಗಾರಿಕೆ ಕೂಡ ಅಷ್ಟೇ ಸ್ಪಷ್ಟ, ನಿಖರ, ನಿಶಿತ. ನಮ್ಮ ಮನೋಭಿತ್ತಿಯಲ್ಲಿದ್ದ ಬಸವಣ್ಣನವರ ಚಿತ್ರಕ್ಕೆ ಹೊಂದುವಂತಿದ್ದರು.





ಶ್ರೀ ಜಿ.ಸಿ. ಸಿದ್ದಪ್ಪನವರಿಗೆ ಈಗ 95 ವರ್ಷಗಳು(1926 ಹುಟ್ಟಿದ ವರ್ಷ). ಅವರ ನೆನಪಿನ ಶಕ್ತಿ ಒಂದಿಷ್ಟೂ ಕುಂದಿಲ್ಲ. ಅಜ್ಜಂಪುರದ ಕಾರ್ಯಕ್ರಮ ಒಂದರಲ್ಲಿ ಅವರಿಗೆ ಪುಟ್ಟ ಸನ್ಮಾನವಿತ್ತು. ಸನ್ಮಾನದ ನಂತರ ವೇದಿಕೆಯಿಂದ ಅವರು ಇಳಿದು ಬಂದರು. ಅವರು ಇಳಿದು ಬರುವಾಗ ಮಾತನಾಡಿಸಿದೆ. ಅದೇ ಆತ್ಮೀಯತೆಯಿಂದ ಹೆಸರು ಹಿಡಿದು ಮಾತನಾಡಿಸಿದರು. ವೇದಿಕೆಯ ಮುಂಭಾಗದಲ್ಲಿದ್ದ ಅವರ ಸಂಬಂಧಿಯಾದ ಒಬ್ಬ ಮಹಿಳೆ ಸಿದ್ದಪ್ಪನವರನ್ನು ಮಾತನಾಡಿಸಿದಾಗ ಪ್ರಸಾದ ಸ್ವೀಕರಿಸೋಣಾಂತ ಹೊರಟೆ ಎಂದರು. "ಊಟದ ಹಾಲ್ ಮೇಲಿದೆ. ಮೆಟ್ಟಿಲು ಹತ್ತುತ್ತೀರಾ?" ಎಂದು ಆ ಮಹಿಳೆ ಪ್ರಶ್ನಿಸಿದರು. "ಊಟ ಮಾಡಬೇಕು ಅಂದರೆ ಮೆಟ್ಟಿಲು ಹತ್ತಲೇಬೇಕಲ್ಲ" ಎಂದು ನಗುತ್ತ ಉತ್ತರಿಸಿದರು. ಅವರ ವಯಸ್ಸಿನವರು ಹೀಗೆ ಉತ್ತರಿಸಲು ಸಾಧ್ಯವೇ ಎನಿಸಿತು. ಸಾಮಾನ್ಯವಾಗಿ ಬಹುಪಾಲು ಹಿರಿಯರು ಇಂತಹ ಪ್ರಶ್ನೆಗೆ ಬೇರೆ ರೀತಿಯಲ್ಲೇ ಪ್ರತಿಕ್ರಿಯಿಸುವುದನ್ನು ನೋಡಿದ್ದೇನೆ. "ಹೌದು ಕಣ್ರೀ. ಮೆಟ್ಟಿಲು ಹತ್ತೋದು ಕಷ್ಟ. ಮೊಣಕಾಲು ನೋವು. ನಮ್ಮ ಕಷ್ಟ ಅರ್ಥಮಾಡಿಕೊಳ್ಳೋರು ಯಾರು? " ಎಂದೆಲ್ಲ‌ ಗೊಣಗುವುದನ್ನು ಕೇಳಿದ್ದೇನೆ.‌ ಆದರೆ ಸಿದ್ದಪ್ಪನವರ ಉತ್ತರ ಅವರ ವ್ಯಕ್ತಿತ್ವಕ್ಕೆ ತಕ್ಕಂತೆ ವಿಶಿಷ್ಟವಾಗಿತ್ತು.
ಮೊದಲಿಗೆ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದ ಅವರು ಕೆಲಕಾಲ ಸಮಾಜ ವಿಸ್ತರಣಾಧಿಕಾರಿಯಾಗಿಯೂ ಸರಕಾರಿ ಸೇವೆಯಲ್ಲಿದ್ದರು. ಅವರಿಗೆ ಸಾಹಿತ್ಯ, ಜಾನಪದ, ಧಾರ್ಮಿಕ ವಿಚಾರಗಳಲ್ಲಿ ಅವರ ಅತೀವ ಆಸಕ್ತಿ. ಆ ವಿಚಾರಗಳಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಇವತ್ತಿಗೂ ಕ್ರಿಯಾಶೀಲರು. ಇಂತಹ ಸಮಾರಂಭ, ಸಮಾವೇಶ, ಗೋಷ್ಠಿಗಳನ್ನು ತಮ್ಮ ಊರಿನಲ್ಲಿ ಸಂಘಟಿಸುತ್ತಾರೆ. ಜಾನಪದ ಕಲೆಗಳಲ್ಲಿ ವಿಶೇಷ ಆಸಕ್ತಿ. ಅವರು ಉಪನ್ಯಾಸ ಮಾಡುವಾಗ ಜನಪದ ಗೀತೆ, ವಚನಗಳನ್ನು ಸಹಜವಾಗಿ ಉದ್ಧರಿಸುತ್ತಾರೆ. ಅಜ್ಜಂಪುರದ ಕಲಾ ಸೇವಾ ಸಂಘದಲ್ಲಿ ಅವರು ಮಾಡಿದ ಬಸವಣ್ಣನವರ ಪಾತ್ರದ ಜನಪ್ರಿಯತೆ ಎಷ್ಟಿತ್ತೆಂದರೆ ಜನಕ್ಕೆ ಬೇರೆಯವರು ಮಾಡಿದ ಬಸವಣ್ಣನವರ ಪಾತ್ರ ಇಷ್ಟವಾಗುತ್ತಿರಲಿಲ್ಲ.
ಒಮ್ಮೆ ಅವರು ಗಿರಿಯಾಪುರದ ಒಂದು ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಕೈಗಿತ್ತು, ಬರಬೇಕು ಎಂದು ಹೇಳಿದರು. ಆಹ್ವಾನ ಪತ್ರಿಕೆಯ ವಿನ್ಯಾಸ, ಮುದ್ರಣ, ಒಕ್ಕಣೆ ಎಲ್ಲವೂ ಅಚ್ಚುಕಟ್ಟಾಗಿತ್ತು. ಏಕೆಂದರೆ ಸ್ವತಃ ಸಿದ್ದಪ್ಪನವರ ಮೇಲ್ವಿಚಾರಣೆಯ ಆಹ್ವಾನಪತ್ರಿಕೆ ಅದಾಗಿತ್ತು. ಅದರಲ್ಲಿ ಗಿರಿಯಾಪುರ ಸ್ಥಳದ ಬಗ್ಗೆ ಇದ್ದ ಒಂದು ಮಾಹಿತಿ ನನಗೆ ಒಪ್ಪಿತವಾಗಲಿಲ್ಲ. ಗಿರಿಯಾಪುರವನ್ನು ಒಂದು ಕುಗ್ರಾಮ ಎನ್ನಲಾಗಿತ್ತು. ನನ್ನ ಆಕ್ಷೇಪಣೆಯನ್ನು ಅವರಿಗೆ ತಿಳಿಸಿದೆ. ಗಿರಿಯಾಪುರ ಕುಗ್ರಾಮವಾಗಲು ಹೇಗೆ ಸಾಧ್ಯ? ಎಲ್ಲ ಬಗೆಯ ಅನುಕೂಲಗಳು ಇವೆ ಎಂದು ಹೇಳಿದೆ. "ಹಾಗಲ್ಲ. ಕುಗ್ರಾಮ ಎಂದರೆ ಚಿಕ್ಕ ಹಳ್ಳಿ" ಎಂದು ಅವರು ವಿವರಣೆ ಕೊಟ್ಟರು. ನನಗೆ ಸಮಾಧಾನವಾಗಲಿಲ್ಲ. ಮನೆಗೆ ಹಿಂತಿರುಗಿದಾಗ ಅರ್ಥಕೋಶದಲ್ಲಿ ಕುಗ್ರಾಮದ ಅರ್ಥ ನೋಡಿದೆ. ಕುಗ್ರಾಮ - ಚಿಕ್ಕ ಹಳ್ಳಿ ಎಂದಿತ್ತು. ಕೂಡಲೇ ಅವರಿಗೆ ಕ್ಷಮೆ ಕೋರಿ, 'ನೀವು ತಿಳಿಸಿದ ಅರ್ಥ ಸರಿಯಾಗಿದೆ. ಆದರೆ ಕುಗ್ರಾಮ ಎಂದರೆ ಚಿಕ್ಕ ಗ್ರಾಮ ಎಂದಷ್ಟೇ ಆಗದು. ಕನಿಷ್ಠ ಸೌಲಭ್ಯವೂ ಇಲ್ಲದ ಹಳ್ಳಿ ಎಂದೂ ಆಗಬಹುದು" ಎಂದು ಒಂದು ಅಂಚೆ ಕಾಗದದಲ್ಲಿ ಬರೆದು ಹಾಕಿದೆ.

ಜಿ.ಸಿ. ಸಿದ್ದಪ್ಪನವರು ಎಷ್ಟು ಸೂಕ್ಷ್ಮಗ್ರಾಹಿ ಎಂದರೆ ಮುಂದೆಂದೂ ತಮ್ಮ‌ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಗಳಲ್ಲಿ ಗಿರಿಯಾಪುರ ಒಂದು ಕುಗ್ರಾಮ ಎಂಬ ಒಕ್ಕಣೆಯನ್ನು ಅವರು ಶಾಶ್ವತವಾಗಿ ಕೈಬಿಟ್ಟರು. ವಯಸ್ಸಿನಲ್ಲಿ ಅತ್ಯಂತ ಹಿರಿಯರಾದರೂ ಅವರು ತಿಳಿದಿದ್ದ ಅರ್ಥ ಸರಿ ಇದ್ದೂ, ನನ್ನ ಆಕ್ಷೇಪಣೆಯನ್ನು ಪ್ರಾಂಜಲ ಮನಸ್ಸಿನಿಂದ ತೆಗೆದುಕೊಂಡಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಅಜ್ಜಂಪುರ ಸೀತಾರಾಂ