111. ಗೊ.ರು.ಚ ಕಾವ್ಯನಾಮದ ಶರಣತೇಜಸ್ವಿ: ನಮ್ಮ ಗೊಂಡೇದಹಳ್ಳಿಯ ಗೌರವ ತಪಸ್ವಿ!



ಆತ್ಮೀಯ ಓದುಗರೇ,

111ನೆಯ ಈ ಸಂಚಿಕೆಯಲ್ಲಿ ಹಿರಿಯರೂ, ವಿದ್ವಾಂಸರು, ಜಾನಪದ ತಜ್ಞರೂ ಆದ ಡಾ. ಗೊ.ರು. ಚನ್ನಬಸಪ್ಪನವರ ಬಗ್ಗೆ ವಿಸ್ತೃತ ಬರಹವನ್ನು ಪ್ರಕಟಿಸಲು ತುಂಬ ಸಂತೋಷವೆನಿಸುತ್ತದೆ. ಶತಾಯುಷದ ಸಮೀಪದಲ್ಲಿರುವ ಈ ಹಿರಿಯರು ತಮ್ಮ ಊರಿನ ಬಗ್ಗೆ, ಜನರು, ಸಂಸ್ಕೃತಿ, ಕಲೆಗಳ ಬಗ್ಗೆ ತಳೆದಿರುವ ಅಭಿಮಾನಗಳು ಅನ್ಯಾದೃಶವಾದುದು.  ಡಾ. ಮಂಜುಳಾ ಹುಲ್ಲಹಳ್ಳಿಯವರು ಶ್ರಮವಹಿಸಿ ಅನೇಕ ಮಾಹಿತಿಗಳನ್ನು ಸಂಗ್ರಹಿಸುರುವುದರಿಂದ ಗೊ.ರು.ಚ. ರ ಬಗ್ಗೆ ಆಕರ ಲೇಖನವಾಗುವಂತಿದೆ. 

ಅಜ್ಜಂಪುರ ತಾಲೂಕಿಗೆ ಸೇರಿದ "ಗೊಂಡೇದಹಳ್ಳಿಯ ಗೌರವ ತಪಸ್ವಿ"ಯ ವಿವರಗಳನ್ನು ಓದಿ, ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ. ಇದನ್ನು ಸಾಧ್ಯವಾಗಿಸಿದ ಡಾ. ಮಂಜುಳಾ ಅವರಿಗೆ ಕೃತಜ್ಞತೆಗಳು.

ಶಂಕರ ಅಜ್ಜಂಪುರ
ಸಂಪಾದಕ
ಅಂತರಜಾಲದಲ್ಲಿ ಅಜ್ಜಂಪುರ.

------------------------------------------------------------------------------------------------------

ಗೊ.ರು.ಚ ಕಾವ್ಯನಾಮದ ಶರಣತೇಜಸ್ವಿ: ನಮ್ಮ ಗೊಂಡೇದಹಳ್ಳಿಯ ಗೌರವ ತಪಸ್ವಿ!

      

ಗೊಂಡೇದಹಳ್ಳಿಯ ರುದ್ರಪ್ಪ ಚನ್ನಬಸಪ್ಪ ಅವರು ನಿಮಗೆ ಗೊತ್ತೇ? ಎಂದು ಚಿಕ್ಕಮಗಳೂರಿನವರನ್ನು ಕೇಳಿ ನೋಡಿ ಊಹೂ, ಯಾರಿಗೂ ಗೊತ್ತಿಲ್ಲ. ಗೊರುಚ ಎನ್ನಿ ಸಾಕು "ಓಹ್, ನಮ್ಮ ಗೊರುಚ" ಎಂದು ಕೇಳಿದವರೆಲ್ಲ ತಲೆಯಾಡಿಸುತ್ತಾರೆ! 

ಅಜ್ಜಂಪುರ ತಾಲೂಕಿನ ಪುಟ್ಟಗ್ರಾಮ ಗೊಂಡೇದಹಳ್ಳಿಯ ಗಿರಿಗೌಡ ಸ್ವಾಭಿಮಾನಕ್ಕೇ ಸಂಕೇತ. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಊರ ಗೌಡರ ವಿರುದ್ಧವೇ ನಿಂತು ಸೋತು ಸುಣ್ಣವಾಗಿ ಮಣ್ಣು ಸೇರಿದವರು.  ಇವರ ಮಗ ರುದ್ರಪ್ಪ. ಬಡತನದ ಬೇಗೆಯಲ್ಲೇ ಬೆಂದು ಹದವಾದವರು. ಆದರೂ ಅಧಿಕಾರಶಾಹಿಯ ವಿರುದ್ಧ ಸೆಟೆದು ನಿಲ್ಲುತ್ತಿದ್ದರು. ಹೊಟ್ಟೆಪಾಡಿಗಾಗಿ ಅಲ್ಲಿ-ಇಲ್ಲಿ ಕೂಲಿ ಮಠ ನಡೆಸಿ ಕೊನೆಗೆ ಕಡೂರು ತಾಲೂಕು ಹಡಗಲು ತಿಮ್ಮಾಪುರದಲ್ಲಿ ಗ್ರಾಂಟ್ ಸ್ಕೂಲ್ ಮೇಷ್ಟ್ರಾದರು. ಸಂಬಳ 7ರುಪಾಯಿ. ಪತ್ನಿ ಅಕ್ಕಮ್ಮನವರಿಗೆ ಅದೇ ತುಂಬಾ ದೊಡ್ಡದು! ಬಡತನಕ್ಕೆ ಮಕ್ಕಳು ಹೆಚ್ಚಂತೆ. ಈ ಪುಣ್ಯದಂಪತಿಗಳಿಗೆ ಒಂಬತ್ತು ಜನ ಮಕ್ಕಳು. ಆದರೆ ಐದು ಹೆಣ್ಣುಮಕ್ಕಳು ಎಳೆವೆಯಲ್ಲೇ ಸತ್ತು ಉಳಿದವರು ನಾಲ್ಕು ಜನ. ಪಾರ್ವತಮ್ಮ, ಚನ್ನಬಸಪ್ಪ, ಪರಮೇಶ್ವರಪ್ಪ, ಶಾರದೆ. ಚನ್ನಬಸಪ್ಪ  'ಮೂರು ಹೆಣ್ಣಿನ ಮೇಲೆ ಹುಟ್ಟಿದ ಗಂಡು ಚಿನ್ನ!' 18.05.1930ರಂದು ಕನ್ನಡಾಂಬೆಯ ಮಡಿಲು ಪಡೆದ ನಿಜದ ಚಿನ್ನ!

ರುದ್ರಪ್ಪ- ಅಕ್ಕಮ್ಮ ದಂಪತಿಗಳದು ಒಂದೇ ಆಸೆ ಮೊದಲ ಮಗನನ್ನು ಚೆನ್ನಾಗಿ ಓದಿಸಬೇಕು! ಅದಕ್ಕಾಗಿ ಅವರು ಪಟ್ಟಪಾಡು, ಕೈಗೊಂಡ ನಿರ್ಧಾರಗಳು ಒಂದೆರಡಲ್ಲ. ಮಗನನ್ನು ಓದಿಸಲೇಬೇಕೆಂಬ ಏಕೈಕ ಹಂಬಲದಿಂದ ಕೈಹಿಡಿದಿದ್ದ ಕೆಲಸ ಬಿಟ್ಟು ಗೊಂಡೇದಹಳ್ಳಿಗೆ ಬಂದರು. ಇದ್ದ ತುಂಡು ಹೊಲದಲ್ಲಿ ಉತ್ಪತ್ತಿ ಸಿಗದೇ ಕೂಲಿ-ನಾಲಿ ಮಾಡಿ ಮಕ್ಕಳನ್ನು ಓದಿಸಿದ ಪುಣ್ಯಾತ್ಮರು! 

1940ರಲ್ಲಿ ಮಾಧ್ಯಮಿಕ ಶಾಲೆ ಓದಿಗೆ ಅಜ್ಜಂಪುರ ಸೇರಿದ ಚನ್ನಬಸಪ್ಪ ಹತ್ತು ವರುಷದಲ್ಲೇ ಸ್ವಾತಂತ್ರ್ಯ ಹೋರಾಟದ ಬಿರುಸನ್ನು ಮನಸಾ ಅನುಭವಿಸಿದರು. ಕೃಷ್ಣೋಜಿ,  ಏಕೊರಾಮ್ ಮುಂತಾದ ಹಿರಿಯ ವಿದ್ಯಾರ್ಥಿಗಳು ಆಗಲೇ ಸ್ವಾತಂತ್ರ್ಯ ಹೋರಾಟದ ಚಳುವಳಿಯಲ್ಲಿ ಧುಮುಕಿದ್ದುದು; ಅಜ್ಜಂಪುರದ ಅಂಗಡಿ ಸುಬ್ರಹ್ಮಣ್ಯಶೆಟ್ಟರು ನಾಗಶೆಟ್ಟರು ಮೊದಲಾದವರು ಈ ಚಳವಳಿಯ ಮಂಚೂಣಿಯಲ್ಲಿದ್ದುದೆ ಈ ಮಕ್ಕಳಿಗೆ ಸ್ಫೂರ್ತಿ. ಈ ಸ್ಫೂರ್ತಿ ತಂದ ಕೆಚ್ಚಿನಿಂದ ಮೇಸ್ಟ್ರುಗಳ ವಿದೇಶಿ ವಸ್ತ್ರಗಳನ್ನೂ ಕಿತ್ತು ಬೆಂಕಿಗೆ ಹಾಕಿ 'ಭಾರತ್ ಮಾತಾ ಕೀ ಜೈ' ಘೋಷಣೆ ಕೂಗಿದ್ದರು!

ಅಜ್ಜಂಪುರದ ಕಿರಾಳಮ್ಮ ದೇವಾಲಯದ ಬಳಿ ಒಮ್ಮೆ ಸ್ವಾತಂತ್ರ ಚಳುವಳಿಯ ಬಹಿರಂಗ ಸಭೆ ಸೇರಿತ್ತು. ಮುಖ್ಯ ಅತಿಥಿ ಕಳ್ಳಿ ತಿಪ್ಪಣ್ಣ ಶಾಸ್ತ್ರಿಗಳಿಗೆ ಕುಳಿತುಕೊಳ್ಳಲು ಯಾರದೋ ಮನೆಯಿಂದ ಮರದ ಕುರ್ಚಿ ತಂದರು. ದಢೂತಿ ಆಳು ಕುಳಿತ ಕೂಡಲೇ ಕುರ್ಚಿ ಪುಡಿಪುಡಿ. ಆದರೆ ಸಂದರ್ಭೋಚಿತವಾಗಿ ಅತಿಥಿಗಳು ಗುಡುಗಿದ್ದು, ಈ ಹೊತ್ತು, ತಿಪ್ಪಣ್ಣಶಾಸ್ತ್ರಿ ಕುಳಿತ ಈ ಕುರ್ಚಿ ಹೇಗೆ ಪುಡಿಪುಡಿಯಾಯಿತೋ ಅದೇ ರೀತಿ ಇನ್ನು ಕೆಲವೇ ದಿನಗಳಲ್ಲಿ ಬ್ರಿಟಿಷರ ಸಾಮ್ರಾಜ್ಯಶಾಹಿ ಅಧಿಕಾರದ ಗದ್ದುಗೆಯೂ ಪುಡಿಪುಡಿಯಾಗುತ್ತದೆ! ಹಾಸ್ಯದಿಂದ ಶುರುವಾದ ಮಾತುಗಳು ನಂತರ ಬ್ರಿಟೀಷರ ದಬ್ಬಾಳಿಕೆ, ರಾಷ್ಟ್ರಾದ್ಯಂತ ನಡೆದಿರುವ ಹೋರಾಟ, ಸ್ವಾತಂತ್ರ್ಯದ ಸ್ವರೂಪ ಮೊದಲಾದವನ್ನು ಅವರು ವಿವರವಾಗಿ ನೀಡಿದಾಗ ಹತ್ತು ವರ್ಷದ ಹುಡುಗ ಚನ್ನಬಸಪ್ಪನ ಮೈಯಲ್ಲಿ ಮಿಂಚಿನ ಸಂಚಾರ. ಅಂದಿನಿಂದ ಸಮಯ ಒದಗಿದಾಗಲೆಲ್ಲ ಸ್ವಾತಂತ್ರ್ಯಹೋರಾಟದ ಚಳುವಳಿಗಳಲ್ಲಿ ಭಾಗಿಯಾದನು. ಕೆ.ಸಿ ರೆಡ್ಡಿ, ಕೆ. ಟಿ. ಭಾಷ್ಯಂ, ಟಿ.ಸುಬ್ರಹ್ಮಣ್ಯಂ ಮುಂತಾದವರು ಬಂದು ನಡೆಸಿದ ಸಭೆಯಲ್ಲಿ ಮೈದಾನ ಸ್ವಚ್ಛತೆ ಕಾರ್ಯ ಮಾಡಿದ್ದೂ ಉಂಟು.  ಬೀರೂರಿನ ಪ್ರೌಢಶಾಲಾ ಹಂತದಲ್ಲಂತೂ ಮಂಡಿ ಮರುಳಸಿದ್ದಪ್ಪ, ಅಶ್ವತ್ಥನಾರಾಯಣ ಶೆಟ್ಟರು, ಮಹಾಬಲಭಟ್ಟ ಮುಂತಾದ ಸ್ವಾತಂತ್ರ್ಯ ಹೋರಾಟಗಾರ ಪ್ರಭಾವ ಜೋರಾಗೆ ಆಯಿತು. ಪ್ರಭಾತ್ ಭೇರಿ, ಅಸಹಕಾರ ಚಳವಳಿ, ಪ್ರತಿಭಟನಾತ್ಮಕ ರೈಲು ಪ್ರಯಾಣ ಮುಂತಾದ ಪ್ರಸಂಗಗಳಲ್ಲಿ ಪೊಲೀಸ್ ಕೈಗೆ ಸಿಕ್ಕು ಹೊಡೆತ ತಿಂದಿದ್ದು ಉಂಟು. ಆದರೆ, ಸ್ವಾತಂತ್ರ್ಯ ಘೋಷಣೆಯ ದಿನ ಬೀರೂರಿನ ವರ್ಣಮಯ ಸಮಾರಂಭದಲ್ಲಿ ಸನ್ಮಾನಿಸಿ ಖಾದಿ ಹಾಕರ ಕೊಟ್ಟ ಅಮೃತ ಕ್ಷಣ ಮರೆಯುವಂತದ್ದಲ್ಲ.

ಶಾಲೆಯಲ್ಲಿ ಎಂದೂ ಪ್ರತಿಭಾವಂತ ವಿದ್ಯಾರ್ಥಿಯೇ ಅಲ್ಲದ ಚನ್ನಬಸಪ್ಪನದು ಸದಾ ಹರಿದ ಬಟ್ಟೆ, ಎಣ್ಣೆಯಿಲ್ಲದ ತಲೆ, ತೂತುಬಿದ್ದ ಚೀಲ, ಕಪ್ಪು ಮೈಬಣ್ಣ, ಉಬ್ಬಿದ ಹಲ್ಲು, ಸಣಕಲು ದೇಹ. ತಂದೆಯ ಸತತ ಪ್ರೇರಣೆ ತಾಯಿಯ ನಿರಂತರ ಹಂಬಲ ಇದ್ದರೂ 1947ರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನಪಾಸು. ತೇರ್ಗಡೆ ಅಂಚಿನಲ್ಲಿ  ಅಂಕಗಳು ಬಂದಿದ್ದವೆಂದು ಇ.ಪಿ.ಎಸ್ ಅಂದರೆ 'ಎಲಿಜಬಲ್ ಫಾರ್ ಪಬ್ಲಿಕ್ ಸರ್ವೀಸ್.' 1948ರ ಕಾಲದಲ್ಲಿ ಮೇಷ್ಟ್ರು ಕೆಲಸಕ್ಕೆ ಅಷ್ಟೇ ಸಾಕಿತ್ತು. 18ನೇ ವರ್ಷಕ್ಕೆ ದೇವನೂರು ಬಳಿಯ ನಿಡಘಟ್ಟದಲ್ಲಿ 'ನ್ಯೂ ಟೈಪ್ ಮಿಡಲ್ ಸ್ಕೂಲ್' ಇಲ್ಲಿ 55 ರೂ ಸಂಬಳದ ಇಂಗ್ಲಿಷ್ ಟೀಚರ್ ಆದರು. 

ಈ ಕೆಲಸ ಬಡತನದ ಬೇಗೆಯ ಬಳಲಿಕೆಯ ಕುಟುಂಬಕ್ಕೆ ಹೊಸ ಚೈತನ್ಯ ನೀಡಿತ್ತು. ಜೊತೆಗೆ ಚನ್ನಬಸಪ್ಪರ ಹೃದಯದಾಳದ ಚಟುವಟಿಕೆಗಳು ಗರಿಗೆದರಲು ಅನುವು ಮಾಡಿತು. 'ವಾಸ್ತವವಾಗಿ ಉಪಾಧ್ಯಾಯನಾದವನು ಕೇವಲ ಶಾಲಾಶಿಕ್ಷಕನಷ್ಟೇ ಆಗದೆ ಸಮಾಜ ಶಿಕ್ಷಕನೂ ಆಗಬೇಕು' ಎನ್ನುವ ಸಂಕಲ್ಪದ ಚನ್ನಬಸಪ್ಪರ ಹೃದಯದೊಳಗಿನ ಕರ್ತವ್ಯದೀಪ್ತಿ ನಿಧಾನವಾಗಿ ಪ್ರಜ್ವಲಿಸತೊಡಗಿತು.

1950ರಲ್ಲಿ ಗೊಂಡೇದಹಳ್ಳಿಯಲ್ಲಿ ಸಮಾನಮನಸ್ಕ ಗೆಳೆಯರೊಡನೆ ಆರಂಭಿಸಿದ 'ತರುಣ ಸಂಘ' ಊರಿನ ಸುಧಾರಣೆಗಾಗಿ ಹಮ್ಮಿಕೊಂಡ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಊರ ಜನರು ಭಾವನಾತ್ಮಕವಾಗಿ ಒಂದಾಗತೊಡಗಿದರು. ಜನಪದಹಾಡು, ಜನಪದ ನೃತ್ಯ, ನಾಟಕ, ಹಾಡುಹಸೆಪದಗಳ ಮೂಲಕ ಜನಮನ ಗೆದ್ದರು. ಇದರಿಂದ ಊರಿನಲ್ಲಿ ಒಂದು ಸಾಂಸ್ಕೃತಿಕ, ಸೌಹಾರ್ದ ವಾತಾವರಣ ನಿರ್ಮಾಣವಾಯಿತು. ಗೊರುಚ, ಮಹಾಲಿಂಗಪ್ಪ ಮತ್ತು ಪುಟ್ಟಸ್ವಾಮಿ ಈ ತ್ರಿಮೂರ್ತಿಗಳು ಪ್ರತಿದಿನ ಸಂಜೆ ಸಭೆ ನಡೆಸಿ ತೆಗೆದುಕೊಳ್ಳುತ್ತಿದ್ದ ತೀರ್ಮಾನಗಳು, ಅಚ್ಚುಕಟ್ಟಾಗಿ ನಿರ್ವಹಿಸಿದ ಸಂಘದ ದಾಖಲೆಗಳು, ಕರಾರುವಕ್ಕಾದ ಲೆಕ್ಕಪತ್ರಗಳು ತರುಣ ಸಂಘದ ಮೌಲ್ಯ ಹೆಚ್ಚಿಸಿದುವು. ಪ್ರತಿ ತಿಂಗಳಿಗೊಮ್ಮೆ ಕಡ್ಡಾಯವಾಗಿ ಮತ್ತು ಹಬ್ಬಹುಣ್ಣಿಮೆಗಳಲ್ಲಿ ಮಾಡುತ್ತಿದ್ದ ಗ್ರಾಮ ಸ್ವಚ್ಛತೆ ಕಾರ್ಯದಿಂದ ಗ್ರಾಮಕ್ಕೆ ಹೊಸ ಕಳೆ ಬಂದಿತ್ತು. ಸಂಘದ ವಾರ್ಷಿಕೋತ್ಸವಕ್ಕೆ ನಾಡಿನ ಪ್ರಮುಖ ಹಿರಿಯರೆಲ್ಲರನ್ನು ಕರೆಸಿಕೊಂಡ ಹಿರಿಮೆಯೂ ಬಂದಿತು. ಇದರಿಂದ ಗೊಂಡೇದಹಳ್ಳಿ ಅಜ್ಜಂಪುರ ವಲಯದಲ್ಲಿ ಪ್ರಸಿದ್ಧವಾಗತೊಡಗಿತು. 'ಹಳ್ಳಿಯ ಬಳಗ' 'ಗ್ರಾಮಾಂತರ ಯುವಜನ ಸಂಘ'ವಾಗಿ ಬೆಳೆದ ತರುಣಸಂಘದ ಮುಂದಿನ ಹೆಜ್ಜೆಯಾಗಿ 'ಸಹಕಾರಿ ಬೇಸಾಯ ಸಂಘ' 1956ರಲ್ಲಿ ರೂಪ ಪಡೆಯಿತು. ಇದರಿಂದ ಕಲ್ಲತ್ತಿಗಿರಿಯ ಸಮೀಪ ಸುಮಾರು ಮುನ್ನೂರು ಎಕರೆಯಷ್ಟು ಜಮೀನು ಪಡೆದು ಸಾಮೂಹಿಕ ವ್ಯವಸಾಯ ಮಾಡಿ ನೂರಾರು ಕುಟುಂಬಗಳು ಬದುಕು ಕಟ್ಟಿಕೊಳ್ಳಲು ಸಾಧ್ಯವಾಯಿತು. 

ಅಧ್ಯಾಪಕ ವೃತ್ತಿಯಲ್ಲಿಯೂ ಮನಸಾ ತೊಡಗಿಸಿಕೊಂಡ ಚನ್ನಬಸಪ್ಪ ಅನಕೃ, ತರಾಸು, ಕುವೆಂಪು, ಕಾರಂತರ ಕೃತಿಗಳನ್ನು ಮನನ ಮಾಡಿಕೊಳ್ಳುತ್ತಾ; ಗ್ರಾಮಜೀವನದ ಸೊಗಡು ಸೊಬಗು ಸೊಗಸುಗಳನ್ನು ಹೃದ್ಗತ ಮಾಡಿಕೊಳ್ಳುತ್ತಾ; ಶಾಲಾಮಕ್ಕಳಿಗೆ ಪಾಠಗಳ ಜೊತೆಗೆ ಸಾಂಸ್ಕೃತಿಕ ಕಲೆಗಳ ಅರಿವು ಮೂಡಿಸುತ್ತಾ; ಶಾಲೆಯಲ್ಲಿ ಮಕ್ಕಳ ವಸತಿಗೆ ಅವಕಾಶ ಕಲ್ಪಿಸಿ ಅವರಿಗೆ ಶುಚಿ ಜೀವನದ ಮಹತ್ವವನ್ನು ಮನವರಿಕೆ ಮಾಡಿಕೊಡುತ್ತಾ ತಮಗೆ ತಾವೇ ಹಿಗ್ಗಿ ಬೆಳೆದರು. ಹೆಸರು ಗೊರುಚ ಎಂದೇ ಜನಮನದಲ್ಲಿ ನೆಲೆನಿಂತಿತು. 'ಬಾಗೂರು ನಾಗಮ್ಮ' 'ಜೋಗದ ಜೋಕ್' 'ಮೈದುನ ರಾಮಣ್ಣ' 'ಗ್ರಾಮಗೀತೆಗಳು' ಇಂತಹ ಕೃತಿಗಳ ಜೊತೆಗೆ 'ನೆನಹು' 'ವಿಭೂತಿ' ಮುಂತಾದ ಸಂಪಾದಿತ ಕೃತಿಗಳನ್ನೂ ಹೊರತಂದರು. ವಿಭೂತಿ ಕೃತಿಗೆ 1962ರಲ್ಲಿ ಸಂದ ರಾಜ್ಯ ಪ್ರಶಸ್ತಿ ಇವರಿಗೆ ಸಮಾಜ ಶಿಕ್ಷಣಾಧಿಕಾರಿಯಾಗಿ ತಾಲೂಕು ಮಟ್ಟದ ಅಧಿಕಾರಿಯಾಗುವ ಅವಕಾಶ ಕಲ್ಪಿಸಿಕೊಟ್ಟಿತ್ತು. 

ಶಿವಮೊಗ್ಗದ ಹೊಸನಗರದಲ್ಲಿ 'ಸಮಾಜಶಿಕ್ಷಣ ಅಧಿಕಾರಿ' ಹುದ್ದೆ ನಿರ್ವಹಿಸುತ್ತಾ ಹೊಸ ಹೊಸ ಅನುಭವಗಳಿಗೆ ತೆರೆದುಕೊಂಡರು. ಕುಟುಂಬ ಕಲ್ಯಾಣ ಯೋಜನೆಯ ಮಹತ್ವ ಸಾರ್ವಜನಿಕರಿಗೆ ಅರಿವು ಮಾಡಬೇಕಾದರೆ ಮೊದಲು ತಾನು ಆಪರೇಷನ್ ಗೆ ಒಳಗಾಗಬೇಕು ಎನ್ನುವ ಬದ್ಧತೆ ಅವರದಾಗಿತ್ತು. ಆಗಿನ ಜಿಲ್ಲಾಧಿಕಾರಿ ಎಚ್. ಎಲ್. ನಾಗೇಗೌಡರ ನಿಕಟ ಸಂಪರ್ಕ ಜಾನಪದದ ಹೊಸ ಆಯಾಮಗಳ ಬಗೆಗೆ ಚಿಂತಿಸುವ ಪ್ರೇರಣೆ ನೀಡಿತು. ಅಲ್ಲಿಂದ ತಮಿಳುನಾಡಿನ ಗಾಂಧಿಗ್ರಾಮದಲ್ಲಿ ಪಡೆದ ಆರು ತಿಂಗಳ ತರಬೇತಿ ಹೊಸ ಆಲೋಚನಾನಿಕ್ಷೇಪವನ್ನೇ ಕಟ್ಟಿಕೊಟ್ಟಿತು.

ಗಾಂಧೀಗ್ರಾಮದಿಂದ ಹಿಂದಿರುಗಿ ಸುಧಾರಿಸಿಕೊಳ್ಳುವ ಮೊದಲೇ 'ಪಂಚಾಯತಿ ರಾಜ್ಯ' ಪತ್ರಿಕೆಯ ಸಹಾಯಕ ಸಂಪಾದಕ ಹುದ್ದೆ ಸಂದರ್ಶನಕ್ಕೆ ಬೆಂಗಳೂರಿಗೆ ಹೋಗುವ ಅವಕಾಶ ತೇಲಿಬಂದಿತು. ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಒಬ್ಬೊಬ್ಬರು ಪದವೀಧರರು, ಡಬಲ್ ಪದವೀಧರರೂ ಸಂದರ್ಶನಕ್ಕೆ ಬಂದಿದ್ದರು. ಆ ಎಲ್ಲರನ್ನೂ ಮೀರಿಸಿ ಗೊರುಚ ಆಯ್ಕೆಯಾಗಲು ಕಾರಣ ಅವರೊಳಗಿನ ಅಪಾರ ಕಾರ್ಯಕ್ಷಮತೆ, ಕರ್ತವ್ಯಬದ್ಧತೆ, ನವೀನ ಆಲೋಚನಾವಿನ್ಯಾಸ, ಪುಸ್ತಕ ಪ್ರಕಟಣೆಗಳು ಮತ್ತು ವಿಭೂತಿ ಗ್ರಂಥದ ಮೌಲ್ಯ. ಹಳ್ಳಿಗಳ ಜೊತೆಗೆ ಬೆರೆತು ಹೋಗಿದ್ದ ಜೀವನಾಡಿಗಳನ್ನು ಕಿತ್ತು ಬೆಂಗಳೂರಿಗೆ ಹೋಗಲೇಬೇಕಾದ; ಮನಸ್ಸಿಗೆ ಒಗ್ಗದ ಬೆಂಗಳೂರಿನಲ್ಲಿ ಇರಲೇಬೇಕಾದ ಅನಿವಾರ್ಯತೆ ಗೊರುಚ ಅವರದಾಯಿತು. ಆದರೆ ಅಲ್ಲಿಯೂ ಸತತ ಶ್ರಮದ ಗರಿಮೆ, ಪ್ರಾಮಾಣಿಕ ದುಡಿಮೆ, ಕನ್ನಡದ ಮೇಲಿನ ಒಲುಮೆ, ಜಾನಪದ ಬದುಕಿನ ಹಿರಿಮೆ, ಕನ್ನಡದ ಬದ್ಧ ಚೇತನಗಳ ಒಡನಾಟ ಈ ಎಲ್ಲವೂ ಒಗ್ಗೂಡಿ ಗೊರುಚ ಅವರ ವ್ಯಾಪ್ತಿ ಅವಕಾಶಗಳನ್ನು ಹಿಗ್ಗಿಸುತ್ತಲೇ ಹೋದವು.

ಬೆಂಗಳೂರು ಗೊರುಚ ಅವರ ನಿರಂತರ ದುಡಿಮೆಗೆ ಹೊಸ ಅರ್ಥ, ಭಾವ, ಮೌಲ್ಯವನ್ನು ಕಟ್ಟಿಕೊಟ್ಟಿತ್ತು. ವಾರ್ತಾ ಇಲಾಖೆಯ 'ಪಂಚಾಯತಿ ರಾಜ್ಯ''ಜನಪದ' ಪತ್ರಿಕೆಗಳಿಗೆ ಉಪಸಂಪಾದಕರು; 'ಕುಟುಂಬ' 'ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ' ಸಂಪಾದಕರು; ಬಿಬಿಸಿ ತಂಡದ ಸಮನ್ವಯಾಧಿಕಾರಿ; ವಿಶ್ವಬ್ಯಾಂಕ್ ಉಪನಿರ್ದೇಶಕ; ಭಾರತ್ ಸ್ಕೌಟ್ಸ್ ಗೈಡ್ಸ್ ಹೆಡ್ ಕ್ವಾಟರ್ಸ್ ಕಮಿಷನರ್; ಕರ್ನಾಟಕ ವಾಣಿಜ್ಯ ಮಂಡಳಿ ಯೋಜನಾಧಿಕಾರಿ; ಪಾನ ನಿಷೇಧ ಆಂದೋಲನ ಸಮಿತಿ ಸಂಚಾಲಕ; ಕರ್ನಾಟಕ ಅಂಧರ ಕ್ಷೇಮಾಭ್ಯುದಯ ಸಂಘದ ಅಧ್ಯಕ್ಷ; ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ- ಇಷ್ಟಲ್ಲದೆ ಕರ್ನಾಟಕ ಜಾನಪದ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ, ಜಾನಪದ ವಿಶ್ವವಿದ್ಯಾನಿಲಯ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್- ಮುಂತಾದ ಸಂಸ್ಥೆಗಳಿಗೆ ಸಲ್ಲಿಸಿರುವ ಸೇವೆಗೆ ಕೊನೆ ಮೊದಲಿಲ್ಲ.

ತಾಯಿಕರುಳಿನ ಮಿಡಿತವನ್ನು ಜೀವನ ದ್ಯೇಯವಾಗಿ ಇರಿಸಿಕೊಂಡಿರುವ ಗೊರುಚ ಅವರಿಗೆ ಚಿಕ್ಕಮಗಳೂರು ಎಂದರೆ ಅಪಾರ ಪ್ರೀತಿ, ಅಭಿಮಾನ. 'ಯಾರಿದ್ದಾರು ನನ್ನ ತಾಯವ್ವನ್ಹೋಲೋರು?' 'ಹೆತ್ತಂತ ತವರನ್ನು ಮತ್ತ್ಹೆಂಗೆ ಮರೆತೆನು?' ಎನ್ನುವ ಸೊಲ್ಲೇ ಸದಾ. ಅವರು ಬೆಂಗಳೂರಿಗೆ ಹೋದ ಮೇಲೆ ದೊರೆತ ಪ್ರಥಮ ಅಮೂಲ್ಯ ಅವಕಾಶದಲ್ಲೇ  ಚಿಕ್ಕಮಗಳೂರಿನ ತರೀಕೆರೆಯಲ್ಲಿ ರಾಜ್ಯದ ಮೊಟ್ಟಮೊದಲ 'ಅಖಿಲ ಕರ್ನಾಟಕ ಜಾನಪದ ಸಾಹಿತ್ಯ ಸಮ್ಮೇಳನ' ಸಂಘಟಿಸಿದರು. 1966ರಲ್ಲಿ ಜರುಗಿದ ಈ ಐತಿಹಾಸಿಕ ಸಮ್ಮೇಳನದಲ್ಲಿ ಆಗ ಜಾನಪದ ಕ್ಷೇತ್ರದಲ್ಲಿ ದುಡಿಯುತ್ತಿದ್ದ ನಾಡಿನ ಪ್ರಮುಖರೆಲ್ಲ ಪಾಲ್ಗೊಂಡಿದ್ದರು. ಆ ಸಮ್ಮೇಳನದ ಸರ್ವಾಧ್ಯಕ್ಷರು ಮೈಸೂರು ಮಹಾರಾಜ, ಜಯಚಾಮರಾಜೇಂದ್ರ ಒಡೆಯರ್ ಅವರು.  ಅಧ್ಯಕ್ಷರು ಅಂಬಿಕಾತನಯದತ್ತರು! ಅನಾರೋಗ್ಯ ಕಾರಣದಿಂದ ಬರಲಾಗದ ಬೇಂದ್ರೆಯವರ ಭಾಷಣವನ್ನು ಸಭೆಗೆ ಸಮರ್ಪಣೆ ಮಾಡಿದವರು ಶ್ರೇಷ್ಠ ಕವಿ ಚೆನ್ನವೀರ ಕಣವಿಯವರು.  ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ ವೈವಿದ್ಯಮಯವಾದ ಜನಪದ ಕಲೆಗಳ ಪ್ರದರ್ಶನಕ್ಕೆ ತರೀಕೆರೆ ಅಂದು ಸಾಕ್ಷಿಯಾಯಿತು. ಆಗ ಏರ್ಪಡಿಸಿದ್ದ ಜಾನಪದ ವಸ್ತುಪ್ರದರ್ಶನ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಜಾನಪದ ವಸ್ತುಸಂಗ್ರಹಾಲಯ ನಿರ್ಮಾಣಕ್ಕೆ ಸ್ಫೂರ್ತಿ ನೀಡಿತು! ಇದೇ ಸಮಯದಲ್ಲಿ ಗೊರುಚ ಸಂಪಾದಕತ್ವದಲ್ಲಿ ಹೊರತಂದ 'ಹೊನ್ನ ಬಿತ್ತೇವು ಹೊಲಕೆಲ್ಲ' ಕೃತಿ ಇಂದಿಗೂ ಜನಪದ ಅಧ್ಯಯನದಲ್ಲಿ ಮುಖ್ಯ ಆಕರಗ್ರಂಥವಾಗಿದೆ. ಗೊರುಚ ಪ್ರೇರಣೆಯಿಂದ ಜನಪದ ವಿಶ್ವವಿದ್ಯಾನಿಲಯದ ಘೋಷವಾಕ್ಯವೂ ಇದೇ ಆಗಿದೆ.

ಉಪಾಧ್ಯಾಯರ ಮಗನಾಗಿ ಉಪಾಧ್ಯಾಯ ವೃತ್ತಿ ಸೇರಿ ಉಪಾಧ್ಯಾಯನಾಗಿ ನಿವೃತ್ತಿ ಹೊಂದ ಬೇಕಾಗಿದ್ದ ಚೈತನ್ಯವೊಂದು ತನ್ನೊಳಗೆ ತಾನೆ ಉರಿದುರಿದು ಮಾಡಿಕೊಂಡ ಗೌರವ ತಪಸ್ಸು ಆ ವ್ಯಕ್ತಿತ್ವಕ್ಕೇ ಅಪಾರ ತೇಜಸ್ಸು ತಂದುಕೊಟ್ಟಿತ್ತು‌. ಹತ್ತಾರು ಹುದ್ದೆ ಪದವಿಗಳು, ನೂರಾರು ರೀತಿಯ ಪುರಸ್ಕಾರಗಳು ಇವರನ್ನು ಅರಸಿ ಬರುವಂತಾಯಿತು.  ಎಸೆಸೆಲ್ಸಿ  ನಪಾಸಾಗಿ ಉಪಾಧ್ಯಾಯ ಹುದ್ದೆಗೆ ಸೇರಿದ ವ್ಯಕ್ತಿ ಅಂತಃಸ್ಸಾಕ್ಷಿಯ ಗೌರವಕ್ಕಾಗಿ, ಹೊರಗಿನ ಯಾವುದೇ ಫಲಾಪೇಕ್ಷೆ ಇಲ್ಲದೇ ನಿರಂತರವಾಗಿ ದುಡಿಮೆಯೊಂದನ್ನೇ ಗೌರವದ ತಪಸ್ಸೆಂದು ಕಾರಣದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾಗಿ ನಿವೃತ್ತಿ ಪಡೆಯುವಂತಾಯಿತು. ಈ ಒಟ್ಟು ಕಾಲದಲ್ಲಿ ಜನಪದ ಕಲಾವಿದರಿಗೆ ಅವರು ನೀಡಿದ ಚೈತನ್ಯ, ಭರವಸೆ, ಯೋಜನೆ, ಕಾರ್ಯತತ್ಪರತೆ ಒಂದೊಂದೂ ಅಮೂಲ್ಯ. ಸಾಮೂಹಿಕ ಬದುಕಿನ ಒಳಿತಿಗಾಗಿ ತಮ್ಮ ವೇತನದ ಬಹುಪಾಲನ್ನು ಮೀಸಲಿರಿಸಿದ ಪುಣ್ಯಾತ್ಮ ಇವರು!

ಗಿರಿಯಾಪುರದ ನಾಗಪ್ಪನವರ ಮಗಳು ಮಲ್ಲಮ್ಮ ಗೊರುಚ ಬದುಕಿಗೆ ಬೆಳಕು ತಂದು ಮೂರು ಮಕ್ಕಳ ಕಾಣಿಕೆಯನ್ನು ಕೊಟ್ಟು ಮನೆಯನ್ನು ನಿಜವಾದ ಗ್ರಾಮಜ್ಯೋತಿ ಮಾಡಿದ ವಾತ್ಸಲ್ಯಮಯಿ. ಈಗಲೂ 90ರ ತುಂಬು ಜೀವನದ ತಪಸ್ವಿ ಗೊರುಚ ಅವರ ಮನದ ಉತ್ಸಾಹ ಕುಗ್ಗಿಲ್ಲ. ಕನ್ನಡ, ಜಾನಪದ ಎಂದರೆ ಅವರ ಕಣ್ಣುಗಳು ಮಿನುಗುತ್ತವೆ.   ಬೆಂಗಳೂರಿನ ಗ್ರಾಮಜ್ಯೋತಿಯಲ್ಲಿ ಮಗಳು ಮುಕ್ತಾಯಕ್ಕರ ಕಣ್ಣು ರಕ್ಷೆಯಲ್ಲಿ ಈಗ ಇದ್ದಾರಾದರೂ ಅವರ ಮನವೆಲ್ಲ ಗೊಂಡೇದಹಳ್ಳಿಯಲ್ಲಿಯೇ!!!



ಡಾ. ಮಂಜುಳಾ ಹುಲ್ಲಹಳ್ಳಿ.
ಸಹಾಯಕ ನಿರ್ದೇಶಕಿ,
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಿಕ್ಕಮಗಳೂರು.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಅಜ್ಜಂಪುರ ಸೀತಾರಾಂ