118. ಮರುಕಳಿಸಿದ ನೆನಪುಗಳು
ಅಜ್ಜಂಪುರದ ಮಿತ್ರ, ಸಹಪಾಠಿ ದತ್ತರಾಜ ರ ಪುತ್ರಿ ಸೌಜನ್ಯಾ ಫೇಸ್ ಬುಕ್ ನಲ್ಲಿ ಬರೆಯುತ್ತಿರುವ ಕವಯಿತ್ರಿ. ಇತ್ತೀಚೆಗೆ ಅಜ್ಜಂಪುರದಲ್ಲಿ ಅವರ ಚಿಕ್ಕಪ್ಪ ಮಂಜುನಾಥ ಅಜ್ಜಂಪುರ ನಡೆದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದಾಗ, ಊರಿನ ನೆನಪುಗಳು ಒತ್ತರಿಸಿಕೊಂಡು ಬಂದುದಕ್ಕೆ ಅವರು ಬರೆದ ಈ ಟಿಪ್ಪಣಿ ಅನೇಕ ಸ್ವಾರಸ್ಯಕರ ಅಂಶಗಳನ್ನು ಒಳಗೊಂಡಿದೆ ಎಂಬ ಕಾರಣಕ್ಕೆ ಇಲ್ಲಿ ಪ್ರಕಟಿಸಲಾಗಿದೆ.
- ಶಂಕರ ಅಜ್ಜಂಪುರ
ಸಂಪಾದಕ
ಅಂತರಜಾಲದಲ್ಲಿ ಅಜ್ಜಂಪುರ
- - - - - - - - - - - - - - - - - - - - - - - - - - -
ನಿಮ್ಮೂರು ಯಾವುದು? ಅಂತ ಯಾರಾದರೂ ಪ್ರಶ್ನಿಸಿದರೆ ಅರೆಕ್ಷಣ ಗಲಿಬಿಲಿಗೊಳ್ಳುತ್ತೇನೆ ನಾನು. ತಕ್ಷಣವೇ ಮರು ಪ್ರಶ್ನಿಸುತ್ತೇನೆ. ನಿಮ್ಮೂರು ಯಾವುದು? ಅಲ್ಲಿಂದ ನಾನು ಅವರ ಊರಿನ ಹತ್ತಿರದ ನಾನು ಕಂಡ ಊರನ್ನು ನನ್ನದಾಗಿಸಿಕೊಳ್ಳುತ್ತೇನೆ. ಕಾರಣ ಇಷ್ಟೇ ನಾನು ಒಂದು ಊರಲ್ಲಿ ಬೆಳೆದವಳಲ್ಲ.
ಅಜ್ಜಂಪುರದ ಕಿರಾಳಮ್ಮನಿಗೆ ನನ್ನ ಹೆಸರಲ್ಲಿ ಎಷ್ಟು ಅರ್ಚನೆಗಳಾಗಿವೆಯೋ ಅದರಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಎನ್ನುವಷ್ಟು ತರೀಕೆರೆಯ ಸಾಲುಮರದಮ್ಮನಿಗೂ ಮತ್ತು ಬೀರೂರಿನ ಅಂತರಘಟ್ಟಮ್ಮನಿಗೂ ನನ್ನ ಹೆಸರಿನಲ್ಲಿ ಅರ್ಚನೆಗಳಾಗಿವೆ. ಶಿವಮೊಗ್ಗದ ದಿನಗಳ ನೆನಪೂ ನನ್ನೊಳಗೆ ಹಸಿರಾಗಿವೆ.
ಚಿಕ್ಕಪ್ಪನೊಂದಿಗೆ ಹೇಳುವುದಿದೆ, ನಿಮ್ಮಷ್ಟು ಅಜ್ಜಂಪುರನ ಹಚ್ಕೊಂಡಿಲ್ಲ ನಾನು. ಅದು ನನಗೆ ನಮಪ್ಪನೂರು ಅಷ್ಟೇ ಅಂತ.
ನಾನು ಬಾಯಲ್ಲಿ ಏನೇ ಹೇಳಿದರೂ ಮನದಲ್ಲಿ ಅಜ್ಜಂಪುರದ ಮೇಲಿನ ಸೆಳೆತ ತರೀಕೆರೆ, ಬೀರೂರು ಮತ್ತು ಶಿವಮೊಗ್ಗಗಳಿಗಿಂತಲೂ ಸ್ವಲ್ಪ ಹೆಚ್ಚು.
ಬೆಂಗಳೂರು ನನಗಿನ್ನೂ ನನ್ನೂರು ಅಂತ ಅನಿಸಿಲ್ಲ.
ಹೈಸ್ಕೂಲಿನಲ್ಲಿದ್ದಾಗ ಬೀರೂರಿನ ನನ್ನ ಸ್ನೇಹಿತರು ಯಾರಾದರೂ ಅಜ್ಜಂಪುರ ಹಳ್ಳಿ ಎಂದರೆ ಸಾಕು ಯುದ್ಧಕ್ಕೆ ಟೊಂಕ ಕಟ್ಟಿ ನಿಲ್ಲುತ್ತಿದ್ದೆ. ನಮ್ಮೂರು 'ಊರು' ಆಯ್ತಾ. ಹಳ್ಳಿ ಅಂದ್ರೆ ಸೊಕ್ಕೆ, ಗಿರಿಯಾಪುರ ಅಂಥವು, ನಿಮ್ಮೂರಲ್ಲಿ ಟೆಂಟ್ ಇದಿಯಲ್ಲಾ ಅಂದ್ರಂತೂ ನನ್ನದು ಸಂಪೂರ್ಣ ರೌದ್ರಾವತಾರ, ಅದು ಟೆಂಟ್ ಅಲ್ಲ ಟಾಕೀಸ್. ಗೋಡೆ ಇದೆ ನಮ್ಮೂರಿನ ಟಾಕೀಸಿಗೆ, ಹೀಗೆ ಏನೇನೋ ವಾದಕ್ಕೊಂದು ಪ್ರತಿವಾದ ಹೂಡುತ್ತಿದ್ದೆ.
ನನ್ನ ವಾದ ಸರಣಿಗೆ ಹೆದರಿ, ಬೆದರಿ, ಬಸವಳಿದು, ಸಹವಾಸಲ್ಲ ನಿಂದು ಎಂದು ಹೇಳಿ ಸುಮ್ಮನಾಗುತ್ತಿದ್ದರು. ಈಗಂತೂ ಬಿಡಿ ಅಜ್ಜಂಪುರ ತಾಲ್ಲೂಕಾಗಿದೆ. ಬೀರೂರು ಹಾಗೇ ಇದೆ. ವಿಷಯ ಅದಲ್ಲ. ವಿಷಯ ನಮ್ಮೂರಿನ ಸಾಂಸ್ಕೃತಿಕ ವಲಯದ್ದು.
ನಾನು ಅಜ್ಜಂಪುರದಲ್ಲಿ ಇದ್ದದ್ದು ಹುಟ್ಟಿದಾಗಿನಿಂದ ನಾಲ್ಕು ವರ್ಷ. ಅದು ಬುದ್ಧಿ ತಿಳಿಯದ ಕಾಲ. ಮುಂದೆ ಅಲ್ಲಲ್ಲಿ ಒಂದೈದಾರು ವರ್ಷ. ಆದರೆ ಆ ಕೆಲವೇ ವರ್ಷಗಳಲ್ಲಿ ನಾನು ಅಜ್ಜಂಪುರದಿಂದ ಕಲಿತದ್ದು ಮಾತ್ರ ಬಹಳಷ್ಟು. ಭಗವದ್ಗೀತೆ ಮತ್ತು ಆಧ್ಯಾತ್ಮ ಅಂತೂ ಅಜ್ಜಂಪುರದ ಗಾಳಿಯಲ್ಲಿಯೇ ಇದೆಯೇನೋ ಅನ್ನುವಂತೆ ಭಾಸವಾಗುತ್ತಿತ್ತು.
ನನ್ನ ಸೋದರತ್ತೆ ಹೆಸರು ಗೀತಾಲಕ್ಷ್ಮಿ. ನಮ್ಮ ಮನೆಯಿದ್ದ ರಸ್ತೆಯ ಹೆಸರು ಗೀತಾ ರಸ್ತೆ. ನಮ್ಮ ತಾತ ಪ್ರಾರಂಭಿಸಿದ್ದ ಊರಿನ ಮೊದಲ ಮುದ್ರಣಾಲಯದ ಹೆಸರು ಗೀತಾ ಪ್ರಿಂಟರ್ಸ್. ಮನೆಗೆ ಆಗಾಗ ಬರುತ್ತಿದ್ದ ಶ್ರೀ ಶಿವಾನಂದ ಆಶ್ರಮದ ಬ್ರಹ್ಮಚಾರಿಗಳೊಂದಿಗೆ ಆಗೀಗ ಚರ್ಚೆ. ಹೀಗೆ ಭಗವದ್ಗೀತೆ ಅನ್ನುವುದು ಇಲ್ಲಿನ ಬಹುತೇಕ ಜನರ ಬದುಕಿನ ಒಂದು ಭಾಗವೇ ಆಗಿ ಹೋಗಿತ್ತು.
ಇಲ್ಲಿಯ ಶಿವಾನಂದಾಶ್ರಮ ಮತ್ತು ಕನ್ನಡದಲ್ಲಿ ಅಚ್ಚಾದ ಭಗವದ್ಗೀತೆಯ ಇತಿಹಾಸ ಮತ್ತು ಪ್ರಭಾವಗಳೆರಡೂ ಬಹಳ ದೊಡ್ಡದು. ಬೇಸಿಗೆ ಶಿಬಿರ ಅಂತೆಲ್ಲಾ ಹೆಚ್ಚಿನ ಜನರು ಕಂಡು ಕೇಳರಿಯದ ಕಾಲದಲ್ಲಿ ಅಜ್ಜಂಪುರದಲ್ಲಿ ಶಿಬಿರಗಳು ನಡೆಯುತ್ತಿದ್ದವು. ಗೀತಾಧ್ಯಯನ ಶಿಬಿರ, ಸಂಸ್ಕೃತ ಶಿಬಿರ, ನಾಟಕ ಶಿಬಿರ, ಭರತನಾಟ್ಯ ತರಗತಿಗಳು ಹೀಗೆ ಒಂದಲ್ಲಾ ಒಂದು ಇದ್ದೇ ಇರುತ್ತಿತ್ತು. ಬಹುಶಃ 97-98ರ ಸಮಯದಲ್ಲಿ ಸಿದ್ಧ ಸಮಾಧಿ ಯೋಗದ ತರಗತಿಗಳೂ ನಡೆದು, ಮನೆ ಮನೆಯಲ್ಲೂ ಸತ್ಸಂಗ, ಧ್ಯಾನ ಪ್ರಾಣಾಯಾಮಗಳ ಮೋಹ ಹುಟ್ಟಿತ್ತು. ಹೊನಲು ಬೆಳಕಿನ ಕ್ರೀಡಾಕೂಟಗಳೂ ನಡೆಯುತ್ತಿದ್ದವು. ಪ್ರತಿ ವರ್ಷ ಅಲ್ಲಿ ಈಗಲೂ ನಾಟಕೋತ್ಸವ ನಡೆಯುತ್ತದೆ.
ಅಜ್ಜಂಪುರ ಅಂದರೆ ಚಲನಶೀಲ, ಚಟುವಟಿಕೆಯಿಂದಿರುವ ಊರು ಅಂತಲೇ ನನ್ನ ಅಭಿಪ್ರಾಯ. ಭಾನುವಾರ ನಡೆದ ಚಿಕ್ಕಪ್ಪನ (ಮಂಜುನಾಥ ಅಜ್ಜಂಪುರ) ಅಭಿನಂದನಾ ಸಮಾರಂಭವೂ ಇದಕ್ಕೆ ಸಾಕ್ಷಿಯಾಗಿತ್ತು. ಟೀವಿಯ ಡಿಬೇಟುಗಳಲ್ಲಿ ಕಾಣಿಸಿಕೊಳ್ಳದ, ಪತ್ರಿಕೆಗಳ ಒಳಪುಟದ ಅಂಕಣಗಳಲ್ಲಿ ಚಿಕ್ಕ ಭಾವಚಿತ್ರ ಇರುವ, ಮನರಂಜನಾ ಸಾಹಿತಿಯಲ್ಲದ, ರಾಷ್ಟ್ರೀಯ ಭಾವೈಕ್ಯತೆ, ನೈಜ ಇತಿಹಾಸದ ಕುರಿತು ಬರೆಯುವ ಬರೆಹಗಾರರೊಬ್ಬರ ಸನ್ಮಾನ ಸಮಾರಂಭದಲ್ಲಿ ಊರಿನ ಹಿರಿಕಿರಿಯರೆಲ್ಲರೂ ಸೇರಿ ಸಂಭ್ರಮಿಸಿದ್ದು ಹಾಡಿದ್ದು, ಹಾರೈಸಿದ್ದು ಊರಿನ ಸಾಂಸ್ಕೃತಿಕ ಸಂಸ್ಕಾರವೆನ್ನದೇ ಮತ್ತೇನೆಂದು ಹೇಳಲು ಸಾಧ್ಯ.
ಹೀಗೆಯೇ ಅಜ್ಜಂಪುರ ಸದಾ ಕಾಲ ಸಾಂಸ್ಕೃತಿಕ ಜೀವಂತಿಕೆಯ ಸಂಕೇತವಾಗಿರಲಿ ಎನ್ನುವುದೇ ಹಾರೈಕೆ ಮತ್ತು ಆಶಯ.
ಜೈ ಕಿರಾಳಮ್ಮ.......🙏🙏
👌😃
ಪ್ರತ್ಯುತ್ತರಅಳಿಸಿ