119. ಅಜ್ಜಂಪುರದ ದೇವರಮನೆಗಳು-2

ಆತ್ಮೀಯ ಓದುಗರೇ,

ಈ ಸಂಚಿಕೆಯಲ್ಲಿ ಅಪೂರ್ವ ಅವರು ಅಜ್ಜಂಪುರದ ಮತ್ತೊಂದು ದೇವರಮನೆಯನ್ನು ಪರಿಚಯಿಸಿದ್ದಾರೆ. ಈ ಹಿಂದೆಯೂ ಎರಡು ಪ್ರಕಟವಾಗಿವೆ. ಇವು ಹಿಂದಿನಿಂದಲೂ ಅಜ್ಜಂಪುರದಲ್ಲಿ ಇವೆಯಾದರೂ, ಇವುಗಳ ಬಗ್ಗೆ ಜನರ ಗಮನ ಅಷ್ಚಾಗಿ ಹರಿದಂತಿಲ್ಲ. ಏಕೆಂದರೆ ಇವು ಹಿಂದೆ ಇದ್ದ ಸಾಧಾರಣ ಮಣ್ಣಿನ ಮನೆಗಳ ಜೊತೆಗೇ ಇರುತ್ತಿದ್ದುದರಿಂದ, ಇವುಗಳನ್ನು ವಿಶೇಷವೆಂದು ತಿಳಿದವರು ಕಡಿಮೆ. 

ಈ ವಂಶಾವಳಿಯ ಕಾರಣದಿಂದ ಅಜ್ಜಂಪುರದ ಕೆರೆಗೆ ಪರ್ವತರಾಯನ ಕೆರೆ ಎಂದು ಹೆಸರು ಬಂದಿತೆಂದು ಹೇಳಲಾಗಿದೆ. ಈ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ. ಆದರೆ ಒಂದು ತರ್ಕದ ಪ್ರಕಾರ, ವಿಜಯನಗರದ ಅರಸರು ನಾಡಿನ ಹಲವಾರು ದೇವಾಲಯಗಳನ್ನು, ಕೆರೆಗಳನ್ನು ಅಭಿವೃದ್ಧಿಪಡಿಸಿದ  ಉದಾಹರಣೆಗಳಿವೆ. ಇದೇ ವಂಶಕ್ಕೆ ಸೇರಿರಬಹುದಾದ ಸಾಮಂತರೋ, ನಾಯಕರಲ್ಲಿ ಓರ್ವನಾಗಿರಬಹುದಾದ ಪರ್ವತರಾಯನಿಂದಲೂ ಇದು ಉಗಮವಾಗಿರಬಹುದು. ಏಕೆಂದರೆ, ಬುಕ್ಕಾಂಬುಧಿಯ ಕೆರೆಗೆ ವಿಜಯನಗರದ ಸಂಸರ್ಗವಿದೆ. ಅಜ್ಜಂಪುರದ ದೇವಾಲಯಗಳ ನವೀಕರಣದಲ್ಲಿ ವಿಜಯನಗರದ ಪಾತ್ರವಿದೆ. ಏನಿದ್ದರೂ, ಇತಿಹಾಸಜ್ಞರು ಸಂಶೋಧಿಸಬೇಕಾಗಿರುವ  ಅಂಶವಿದೆಂದು ತಿಳಿಯಬಹುದು.  

ಆದರೆ ಸಾಂಸ್ಕೃತಿಕ ಮಹತ್ವವುಳ್ಳ ಈ ದೇವರಮನೆಗಳು, ಆಯಾ ಕುಟುಂಬಗಳ, ವರ್ಗಗಳ ಪದ್ಧತಿಯನ್ನು ಜೀವಂತವಾಗಿಟ್ಟಿವೆ. ಸುಧಾರಿಸಿದ ಆರ್ಥಿಕ ಪರಿಸ್ಥಿತಿಯಿಂದಾಗಿ, ಸಮುದಾಯದ ಜನರು ತಮ್ಮ ಕುಲದೈವವನ್ನು ಮರೆಯದೇ, ಅವುಗಳಿದ್ದ ಸ್ಥಳಗಳನ್ನು ನವೀಕರಿಸಿ, ಸಮಾಜದ ಕಾರ್ಯಗಳಿಗೆ ಪೂರಕವಾಗಿರುವಂಥ ವ್ಯವಸ್ಥೆ ಮಾಡಿದ್ದಾರೆ. ಇದರ ಆಚರಣೆಗಳ ಬಗ್ಗೆ, ಇತಿಹಾಸದ ಬಗ್ಗೆ ಹಿರಿಯರಿಂದ ಮಾಹಿತಿ ಸಂಗ್ರಹಿಸಿ, ಅಪೂರ್ವ ಅವರು ಉತ್ತಮ ಕಾರ್ಯವನ್ನು ಕೈಗೊಂಡಿದ್ದಾರೆ. ಅವರಿಗೆ ಅಭಿನಂದನೆಗಳು.

-ಶಂಕರ  ಅಜ್ಜಂಪುರ
ಸಂಪಾದಕರು
ಅಂತರಜಾಲದಲ್ಲಿ ಅಜ್ಜಂಪುರ ಬ್ಲಾಗ್

-----------------------------------------------------------------------------------------
 


 ಮಂಜುನಾಥಸ್ವಾಮಿ ದೇವರಮನೆ :

ಅಜ್ಜಂಪುರದ ಶ್ರೀರಾಮ ರಸ್ತೆಯ ದಕ್ಷಿಣ ಭಾಗಕ್ಕೆ  ಮಂಜುನಾಥಸ್ವಾಮಿ ದೇವರಮನೆ ಇದೆ. ಉತ್ತರಾಭಿಮುಖವಾಗಿ ದೇವರಮನೆಯ ಪ್ರವೇಶದ್ವಾರವಿದೆ. ಒಂದು ವಿಶಾಲವಾದ ಹಜಾರವಿದ್ದು, ಮುಂದುವರೆದ ಮಾರ್ಗದಲ್ಲಿ (ಪ್ಯಾಸೇಜ್) ಪಶ್ಚಿಮದ ಭಿತ್ತಿಗೆ ಹೊಂದಿಕೊಂಡಂತೆ ಇರುವ ಪೀಠದಲ್ಲಿ ಪೂರ್ವಾಭಿಮುಖವಾಗಿ ಶ್ರೀ ಮಂಜುನಾಥಸ್ವಾಮಿ ಲಿಂಗರೂಪದಲ್ಲಿದೆ. ಲಿಂಗದ ಮಾದರಿಯು ತದ್ವತ್ ಧರ್ಮಸ್ಥಳ ಮಾದರಿಯಲ್ಲಿದೆ. ಮಿಶ್ರ ಲೋಹದ ಮಂಜುನಾಥೇಶ್ವರನಿಗೆ ಬೆಳ್ಳಿಯ ಕವಚವಿದೆ.  ಮಂಜುನಾಥಸ್ವಾಮಿಯ ಮುಂದೆ ಪವಾರ್‌ಕುಲದ ಮತ್ತೊಂದು ಆರಾಧ್ಯ ದೈವ ರಾಣಾ ಶೆಟುಬಾಯಿಯ ಮೂರ್ತಿ ಇದೆ. ಬಲ ಪಕ್ಕದಲ್ಲಿ ಬೆತ್ತದ ಪೆಟ್ಟಿಗೆಯಲ್ಲಿ ಅಜ್ಜ-ಅಜ್ಜಿಯರ ಬೆಳ್ಳಿ‌ಯ ಪುಟ್ಟ ಎದೆ ಮಟ್ಟದ ವಿಗ್ರಹಗಳಿವೆ(busts). ಅವುಗಳನ್ನು ಪಿತೃಪಕ್ಷದಲ್ಲಿ ಹೊರತೆಗೆದು ಪೂಜಿಸಲಾಗುತ್ತದೆ. ಈ ಅಜ್ಜ-ಅಜ್ಜಿಯರ  ಪೂಜೆಯು ಪೂರ್ವಜರ ಸ್ಮರಣೆಯ ಜೊತೆಗೆ ಇಂದಿನ ತಲೆಮಾರಿನವರ ತಂದೆತಾಯಿಗಳ ಶ್ರದ್ಧೆಯ ಆರಾಧನೆಯಾಗಿ ಭಾವಿಸಲಾಗಿದೆ. ಮೊದಲಿಗೆ ಪವಾರ್ ಮನೆತನಕ್ಕೆ ಸೇರಿದವರೆಲ್ಲ ಅವರವರ ತಂದೆ-ತಾಯಿಯರೆಂದು ಸಣ್ಣ ಸಣ್ಣ ಮೂರ್ತಿಗಳನ್ನಿಟ್ಟು ಪೂಜಿಸುತ್ತಿದ್ದರಂತೆ. ಮೂರ್ತಿಗಳ ಬಾಹುಳ್ಯದಿಂದಾಗಿ ಅದನ್ನು ಕೈಬಿಟ್ಟು, ಅಜ್ಜ-ಅಜ್ಜಿಯರ ಎರಡೇ ಮೂರ್ತಿಗಳು ಬೆಳ್ಳಿಯಲ್ಲಿ ಒಟ್ಟಿಗೆ ಇರುವಂತೆ ದಾವಣಗೆರೆಯ ಸೋಮಣ್ಣ ಮಾಡಿಸಿಕೊಟ್ಟರೆನ್ನಲಾಗಿದೆ. ಕಟ್ಟಡ ಕಾಮಗಾರಿ ಹಾಗೂ ಕಟ್ಟಡದ ಬಣ್ಣಗಾರಿಕೆಗಳಲ್ಲಿ ಅವರ ಪಾಲು ಬಹು ದೊಡ್ಡದು ಎಂದು ಪವಾರ್ ಬಂಧುಗಳು ಸ್ಮರಿಸುತ್ತಾರೆ. ದೇವರಮನೆಯ ಮೇಲೆ  ಎರಡು ಅಂತಸ್ತುಗಳಿವೆ. ಎರಡೂ ಅಂತಸ್ತುಗಳಲ್ಲಿ ಮಂಗಳ ಕಾರ್ಯಗಳಿಗಾಗಿ ದೊಡ್ಡ ಹಜಾರ ಹಾಗೂ ಶೌಚಾಲಯ ಸೌಲಭ್ಯಗಳಿವೆ.  ಪ್ರತಿ ವರ್ಷ ಪಿತೃಪಕ್ಷ, ಮಹಾಶಿವರಾತ್ರಿ, ಕಾರ್ತೀಕ ವಿಶೇಷ ಪೂಜಾದಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತದೆ. 

ಒಂದು‌ ಕಾಲದಲ್ಲಿ ಹುಲ್ಲುಮನೆಯಲ್ಲಿ ಪ್ರಾರಂಭವಾದ ಪವಾರ್ ಕುಡಿಗಳ ದೇವರಮನೆ ಇತ್ತು. ಹಿತ್ತಾಳೆಯ ಲಿಂಗವೇ ಮಂಜುನಾಥಸ್ವಾಮಿ. ಬಿದಿರಿನ ಹುಂಡಿಯಲ್ಲಿ ಕಾಣಿಕೆ ಸಂಗ್ರಹಿಸಿಟ್ಟುಕೊಂಡು ಧರ್ಮಸ್ಥಳಕ್ಕೆ ಎತ್ತಿನ ಗಾಡಿಯಲ್ಲಿ ಹೋಗಿಬರುತ್ತಿದ್ದರಂತೆ. ದೇವರಮನೆಯ ನಿವೇಶನವು ದಿ. ದೊಡ್ಡ ಮಂಜೋಜಿರಾವ್ ಹಾಗೂ ತಾಯಿ ದಿ.ತುಳಜಾಬಾಯಿಯವರ ಹೆಸರಿನಲ್ಲಿ ಅವರ ಮಕ್ಕಳು ಮತ್ತು ಮೊಮ್ಮಕ್ಕಳು‌ ನೀಡಿರುವರು. ನಿವೇಶನ ದಾನಕ್ಕೆ ಮುಖ್ಯವಾಗಿ ‌ಮುಂದಾದವರು ತರೀಕೆರೆಯ ಜಗನ್ನಾಥ್ ರಾವ್ ಪವಾರ್ ಸಹೋದರರು. ಹನಿಗೂಡಿದರೆ ಹಳ್ಳವೆಂಬಂತೆ ಪವಾರ್ ಬಂಧುಗಳು ನಾ ಮುಂದು‌ ತಾ ಮುಂದು ಎಂಬಂತೆ ಒಗ್ಗೂಡಿ ಮೂರು ದಶಕಗಳ‌ ಹಿಂದೆ ಆಧುನಿಕ ದೇವರಮನೆ ಕಟ್ಟಿಸಿಕೊಂಡಿದ್ದಾರೆ. ಕಾರ್ಯಕ್ರಮಗಳಿಗೆ ಎಲ್ಲ ಮೂಲ ಸೌಕರ್ಯಗಳು ಕೂಡ ಈ ದೇವರಮನೆಯಲ್ಲಿವೆ.

ದೇವರಮನೆಯ ಪವಾರ್ ಕುಟುಂಬಗಳ ಐತಿಹ್ಯ : ಮುನ್ನೂರು ವರ್ಷಗಳ ಹಿಂದೆ ಛತ್ರಪತಿ ಶಿವಾಜಿ‌ ಮಹಾರಾಜರ ತಂದೆ ಷಹಾಜಿಯವರು ಯುದ್ಧಕಾಲದಲ್ಲಿ ಅಲ್ಲಲ್ಲಿ ಸೈನ್ಯದ ಬೀಡುಗಳನ್ನು ಬಿಟ್ಟಿದ್ದರಂತೆ. ಅಜ್ಜಂಪುರ ಸರ್ವೆ ನಂ. 117 ರಲ್ಲಿ ಇದ್ದ ಬೀಡು ಇವುಗಳಲ್ಲಿ ಒಂದಾಗಿತ್ತು. ಹೊದಿಗೆರೆಯಲ್ಲಿ ಷಹಾಜಿಯವರು ಬೇಟೆಯ ದುರಂತದಲ್ಲಿ‌ಮರಣ ಹೊಂದಿದಾಗ ಸೇನೆಯಲ್ಲಿದ್ದ ಪರ್ವತರಾವ್ ಪವಾರ್ ಮತ್ತು ಗೋಪಾಲರಾವ್ ಚವ್ಹಾಣ ಅಜ್ಜಂಪುರದಲ್ಲಿ ನೆಲೆನಿಂತರು. ಪರ್ವತರಾವ್ ಅಮೃತಮಹಲ್ ಕಾವಲಿನಲ್ಲಿ‌ ಕೆರೆ ಕಟ್ಟಿಸಿದ. ಅದು ಪರ್ವತರಾಯನ ಕೆರೆ ಎಂದು ಜನಜನಿತವಾಯಿತು. ಹಣ್ಣೆಗುಡ್ಡದ ತಪ್ಪಲಿನಲ್ಲಿ ಗೋಪಾಲರಾವ್ ಚವ್ಹಾಣ ಒಂದು ಕೆರೆ ಕಟ್ಟಿಸಿದ. ಹಣ್ಣೆಗುಡ್ಡದ ಕೆರೆಯು ಗೋಪಾಲರಾಯನ ಕೆರೆ ಎಂದು ಹೆಸರಾಯಿತು. ಪರ್ವತರಾವ್ ಪವಾರ್ ಶೇಷೇಗಾರ್ ಚವ್ಹಾಣ ಸಂಬಂಧದಲ್ಲಿ ಮದುವೆಯಾದ. ಗೋಪಾಲರಾವ್ ಚವ್ಹಾಣ ಪವಾರ್ ಸಂಬಂಧದಲ್ಲಿ ‌ಮದುವೆಯಾದ. ಪರ್ವತರಾವ್ ಪವಾರ್ ಸಂತಾನಭಾಗ್ಯವಿಲ್ಲದ ಕಾರಣ ಒಮ್ಮೆ ಹರಿಹರ ಪೀರನಿಗೆ  ಹರಕೆ ಹೊತ್ತಿದ್ದನಂತೆ. ತದನಂತರ ಒಂದು ಗಂಡು ಮಗು ಪಡೆದದ್ದರಿಂದ ಆ ಮಗುವಿಗೆ ಪೀರೋಜಿರಾವ್ ಹೆಸರಿಟ್ಟರಂತೆ. ಈ ಪೀರೋಜಿರಾವ್ ಪವಾರ್ ಗೆ ಆರು ಜನ ಗಂಡು ಮಕ್ಕಳು( ವಂಶಾವಳಿಯಲ್ಲಿ) ತೋರಿಸಲಾಗಿದೆ. ಒಬ್ಬೊಬ್ಬರಿಂದ ಏಳೆಂಟು ಮನೆಗಳಾಗಿ, ಮಕ್ಕಳು-ಮೊಮ್ಮಕ್ಕಳು-ಮರಿಮಕ್ಕಳು ನೂರಾರು ಮನೆಗಳಾಗಿವೆ. ಅಜ್ಜಂಪುರ ಮೂಲದ ಪವಾರ್ ಕುಡಿಗಳು ಸ್ವಂತ ಸ್ಥಳವಲ್ಲದೆ ಲಕ್ಕವಳ್ಳಿ, ರಂಗೇನಹಳ್ಳಿ, ದಾವಣಗೆರೆ, ಚನ್ನಗಿರಿ, ಭದ್ರಾವತಿ, ಶ್ರೀರಾಂಪುರ, ಬೀರೂರು, ಕಡೂರು,ಅರಸೀಕೆರೆ, ಮಂಡಗದ್ದೆ, ಶಿಕಾರಿಪುರ, ಹುಬ್ಬಳ್ಳಿ ಮುಂತಾದ ಸ್ಥಳಗಳಲ್ಲಿ ಇದ್ದಾರೆ. 

ಪವಾರ್ ಕುಟುಂಬಗಳ ಹಿರಿಯ ಜೀವ ಸ್ವಾಮಿರಾವ್(೯೪) ಬಹಳಷ್ಟು ಮಾಹಿತಿಯನ್ನು ನೀಡಿದ್ದಾರೆ. ಅವರ ನೆನಪಿನ ಶಕ್ತಿ ಆಗಾಧ. ವಂಶಾವಳಿಯನ್ನು ಅವರು ಹೇಳುವಾಗ ಸ್ಖಲಿತವಾಗಿ ಹಾಗೂ ನಾನು ಬರೆದುಕೊಳ್ಳದೆ ಕೆಲವು ವಿವರಗಳು ಬಿಟ್ಟುಹೋಗಿರಬಹುದು. ಈ ಸಂಬಂಧ ಅಂತಹ ವಿವರಗಳನ್ನು ಗೊತ್ತಿದ್ದವರು ಸೇರಿಸಬಹುದು. ದಾವಣಗೆರೆಯ ಸೋಮಣ್ಣನವರು ಕೊಟ್ಟ ಒಂದು ಸುಳಿವಿನಿಂದ ಬಹಳಷ್ಟು ವಿವರ ಕಲೆ ಹಾಕಲಾಗಿದೆ. ಅವರಿಗೆ ಕೃತಜ್ಞತೆಗಳು.

ಚಿತ್ರ-ಲೇಖನ : ಅಪೂರ್ವ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.