116. ಅಜ್ಜಂಪುರದ ದೇವರಮನೆಗಳು:
ಆತ್ಮೀಯ ಓದುಗರೇ,
ಅಂತರಜಾಲದಲ್ಲಿ ಅಜ್ಜಂಪುರ - ಈ ಬ್ಲಾಗ್ ನ ಮುಂದುವರಿಕೆಯು ಊರಿನ ಬಗ್ಗೆ ಅಭಿಮಾನವುಳ್ಳ ಲೇಖಕರನ್ನು ಅವಲಂಬಿಸಿದೆ. ಈಗ ಅಜ್ಜಂಪುರವು ತಾಲೂಕು ಆದ ನಂತರ ಪಟ್ಟಣದ ಬೆಳವಣಿಗೆಯಲ್ಲಿ ಸಾಕಷ್ಟು ಪ್ರಗತಿ ಕಾಣುತ್ತಿದೆ. ಸ್ಥಳೀಯರು ಮನಸ್ಸು ಮಾಡಿ ಇಲ್ಲಿನ ಬೆಳವಣಿಗೆಗಳನ್ನು ದಾಖಲಿಸುವಂತಾದರೆ, ಇನ್ನಷ್ಟು ಮಾಹಿತಿಗಳು ಸೇರಿಕೊಳ್ಳುತ್ತವೆ.
ಅಜ್ಜಂಪುರದಲ್ಲೇ ವಾಸವಾಗಿರುವ ಮಿತ್ರ ಅಪೂರ್ವ, ಊರಿನಲ್ಲಿ ಏನೇ ಹೊಸದು ಕಾಣಿಸಿದರೂ, ಅದನ್ನು ದಾಖಲಿಸುತ್ತ, ಈ ಬ್ಲಾಗ್ ನ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಈ ಸಂಚಿಕೆಯಲ್ಲಿ ಅವರು ಪ್ರಸ್ತಾಪಿಸಿರುವ ವಿಷಯವು ಊರಿನಲ್ಲೇ ಅನೇಕರಿಗೆ ತಿಳಿದಿರದಿದ್ದರೆ ಆಶ್ಚರ್ಯವಿಲ್ಲ. ಅದು ಊರೊಟ್ಟಿನ ವಿಷಯವೇ ಆಗಿದ್ದರೂ, ಸಮುದಾಯಗಳ ಜನರು ತಮ್ಮ ಅಸ್ಮಿತೆಯನ್ನು ಕಾಪಾಡಿಕೊಂಡು, ತನ್ಮೂಲಕ ಧಾರ್ಮಿಕ ಆಚರಣೆಗಳನ್ನು ಅನುಸರಿಸುತ್ತಿರುವರು. ಅಂಥ ಸಂಗತಿಗಳು ಊರಿನ ಸಾಂಸ್ಕೃತಿಕ ಮಹತ್ವವನ್ನು ಬಿಂಬಿಸುತ್ತವೆ. ಅವುಗಳನ್ನು ಯಾರಾದರೂ ಗಮನಿಸಿ ತಿಳಿಸಿದಾಗಷ್ಟೇ ಇತರರಿಗೂ ತಿಳಿದೀತು. ಆಯಾ ಸಮುದಾಯದವರೇ ಆ ಬಗ್ಗೆ ಪ್ರಚುರ ಪಡಿಸಬಹುದು.
ದೇವರಮನೆ ಎಂಬ ವ್ಯವಸ್ಥೆಯು ಸಾಮುದಾಯಿಕವಾಗಿದ್ದು, ಅದು ಎಲ್ಲ ಊರುಗಳಲ್ಲೂ ಇರಬಹುದು. ಕಾಲ ಕಾಲಕ್ಕೆ ಬಂದ ಬದಲಾವಣೆಗಳನ್ನು ಅಳವಡಿಸಿಕೊಂಡು, ಪದ್ಧತಿಯನ್ನು ಜೀವಂತವಾಗಿ ಇಟ್ಟಿರುವ ಸಮುದಾಯಗಳ ಧಾರ್ಮಿಕ ಪ್ರಜ್ಞೆ ಮೆಚ್ಚುವಂಥದು. ಅಜ್ಜಂಪುರದಲ್ಲಿರುವ ಇಂಥ ಎರಡು ದೇವರಮನೆಗಳ ಬಗ್ಗೆ ವಿಷಯ ಸಂಗ್ರಹಿಸಿ, ಚಿತ್ರ ಸಹಿತಾದ ವಿವರಣೆ ನೀಡಿರುವ ಅಪೂರ್ವರು ಅಭಿನಂದನಾರ್ಹರು.
-----------------------------------------------------
ಅಜ್ಜಂಪುರದ ದೇವರಮನೆಗಳು
ಚಿತ್ರ-ಲೇಖನ : ಅಪೂರ್ವ
ಒಂದೇ ಕೋಮಿನ ಕೆಲವು ಕುಟುಂಬಗಳಿಗೆ ಮಾತ್ರ ಸಂಬಂಧಿಸಿದ ಹಾಗೂ ಸೀಮಿತವಾದ ಆರಾಧನಾ ಸ್ಥಳಗಳೇ ದೇವರಮನೆಗಳು. ದೇವಸ್ಥಾನ, ದೇಗುಲಗಳು ಸಾರ್ವಜನಿಕ ಪೂಜಾಸ್ಥಳಗಳಾಗಿದ್ದು, ಅಲ್ಲಿರುವ ದೇವರುಗಳಿಗೆ ಸಾಮಾನ್ಯವಾಗಿ ಒಂದು ಸಮುದಾಯ/ಅನೇಕ ಸಮುದಾಯಗಳ ಭಕ್ತರು ಇರುತ್ತಾರೆ. ಗ್ರಾಮ/ಪುರ/ನಗರ ದೇವತೆಗಳ ದೇವಾಲಯಗಳಿಗೆ ಆಯಾ ಪ್ರದೇಶದ ವ್ಯಾಪ್ತಿಯ ಸರ್ವರೂ ಭಕ್ತರಾಗಿ 'ನಡೆದುಕೊಳ್ಳುತ್ತಾರೆ'. ಊರೊಟ್ಟಿನ ದೇವರಾದ ಅವುಗಳನ್ನು ಎಲ್ಲ ಕೋಮಿನ ಜನರು ಆರಾಧಿಸುತ್ತಾರೆ. ಮನೆ/ಕುಲ ದೇವರಿಗೆ ಭೌಗೋಳಿಕ ವ್ಯಾಪ್ತಿ ಇಲ್ಲ. ಅಂಥ ದೇವರುಗಳಿಗೆ ಜಗತ್ತಿನ ಯಾವ ಮೂಲೆಯಲ್ಲಿದ್ದರೂ ತಮ್ಮ ಮನೆತನದ ಹಿರಿಯರ ಪದ್ಧತಿಯಂತೆ ನಡೆದುಕೊಳ್ಳುವುದು ವಾಡಿಕೆ. ಅದೊಂದು ಅಲಿಖಿತ ಬದ್ಧತೆಯುಳ್ಳ ಸಂಪ್ರದಾಯವೆಂಬಂತೆ ತಲೆಮಾರಿನಿಂದ ತಲೆಮಾರಿಗೆ ನಿರಂತರ ಆಚರಣೆಯಾಗಿ ಉಳಿದುಬಿಡುತ್ತದೆ. 'ದೇವರಮನೆ' ಎಂಬುದು ಒಂದೇ ಮೂಲದ ಸೋದರ ಸಂಬಂಧಿಗಳಿಗೆ ಅನೂಚಾನವಾಗಿ ಇರುವ ಅವರಿಷ್ಟ ದೇವರ ಪೂಜಾ ವ್ಯವಸ್ಥೆಯ ಸ್ಥಾನ.
ಅಜ್ಜಂಪುರದಲ್ಲಿ ಇಂತಹ ಅನೇಕ 'ದೇವರಮನೆ'ಗಳು ಸಹ ಇವೆ. ಅವುಗಳಲ್ಲಿ ಸದ್ಯಕ್ಕೆ ಎರಡರ ಬಗ್ಗೆ ಈ ಲೇಖನ ಸೀಮಿತಗೊಳಿಸಲಾಗಿದೆ. ಒಂದು ಶ್ರೀ ತುಳಜಾಭವಾನಿ ದೇವರಮನೆ, ಇನ್ನೊಂದು ಶ್ರೀ ಕಿರಾಳಮ್ಮ ದೇವರಮನೆ.
ಶ್ರೀ ತುಳಜಾಭವಾನಿ ದೇವರಮನೆ : ಅಜ್ಜಂಪುರದ ಭವಾನಿ ರಸ್ತೆಯಲ್ಲಿರುವ (ಹುಣಿಸೇಮರದಮ್ಮನ ಗುಡಿ ಸಮೀಪದ ಮೊದಲಿನ ಸುಣ್ಣಗಾರರ ಬೀದಿ) ಶ್ರೀ ತುಳಜಾಭವಾನಿ ದೇವರಮನೆಯು ಮರಾಠ ಸಮುದಾಯದ ಚವ್ಹಾಣ ಮನೆತನದವರದ್ದಾಗಿದೆ. ಅಜ್ಜಂಪುರದ ಚವ್ಹಾಣ ಮೂಲದ ಎಲ್ಲ ಸೋದರ ಸಂಬಂಧಿಗಳು ಈ ದೇವರಮನೆಯ ಎಲ್ಲ ಕೈಂಕರ್ಯಗಳಲ್ಲಿ ಭಾಗಿಯಾಗುತ್ತಾರೆ.
ಈ ಬಗ್ಗೆ ಹಿರಿಯರಾದ ಆರೋಗ್ಯ ಇಲಾಖೆಯ ನಿವೃತ್ತ ನೌಕರರಾದ ಬೀರೂರಿನಲ್ಲಿರುವ ಶಿವಾಜಿರಾವ್(ಬಳ್ಳಾರಿ ಗೋವಿಂದಪ್ಪನವರ ಪುತ್ರ), ನಿವೃತ್ತ ಶಿಕ್ಷಕರಾದ ಸಜ್ಜನರಾವ್, ಕೃಷಿಕ ತುಳೋಜಿರಾವ್ ಹಾಗೂ ಬೆಂಗಳೂರಿನಲ್ಲಿರುವ ವಿ. ನಾಗೇಂದ್ರರಾವ್ ಚವ್ಹಾಣ ಅವರು ಈ ಬಗ್ಗೆ ಮಾಹಿತಿ ನೀಡಿದರು. ಇವರೆಲ್ಲರ ಪ್ರಕಾರ ಈ ದೇವರಮನೆ ಅಸ್ತಿತ್ವಕ್ಕೆ ಬಂದು ಸುಮಾರು ಒಂದು ಶತಮಾನ ಸಂದಿರಬಹುದು. ಎಂಭತ್ತರ ಪ್ರಾಯದ ತುಳೋಜಿರಾವ್ ತನ್ನ ಅಜ್ಜ ತುಳೋಜಪ್ಪರ ತಲೆಮಾರಿನವರು ಇದ್ದಾಗಲೇ ತುಳಜಾಭವಾನಿ ದೇವರಮನೆ ಇತ್ತೆಂದು ಹೇಳಿದರು. ಮೊದಲಿಗೆ ಕಪ್ಪು ಹೆಂಚುಳ್ಳ ಮಣ್ಣುಗೋಡೆಗಳ ಮನೆಯೇ ದೇವರಮನೆಯಾಗಿತ್ತು. ಚವ್ಹಾಣ ಸೋದರ ಸಂಬಂಧಿ ಭಕ್ತರೆಲ್ಲ ಸೇರಿ, 2009 ರಲ್ಲಿ ಆಧುನಿಕ ಆರ್.ಸಿ.ಸಿ. ಕಟ್ಟಡದ ನಿರ್ಮಾಣವಾಯಿತು. ದಿನಾಂಕ 15-5-2009 ರಂದು ದೇವರಮನೆಯ ಪ್ರವೇಶವೂ ಆಯಿತು.
ದೇವರಮನೆಯಲ್ಲಿ ದೇವರಿಗಾಗಿ ಗರ್ಭಗುಡಿ ಎಂಬ ಪ್ರತ್ಯೇಕ ವಿಭಾಗವಿಲ್ಲ. ದೇವರಮನೆ ಪ್ರವೇಶವಾಗುತ್ತಿದ್ದಂತೆ ವಿಶಾಲವಾದ ಹಜಾರವಿದೆ. ಪಶ್ಚಿಮದ ಭಿತ್ತಿಗೆ ಲಗತ್ತಾಗಿ ಒಂದು ದೊಡ್ಡ ಮಂಟಪವಿದ್ದು, ಅದರೊಳಗಿರುವ ಮರದ ಪೀಠದ ತುಳಜಾಭವಾನಿ ಅಮ್ಮನವರ ಲೋಹದ ಮೂರ್ತಿ ಪೂರ್ವಕ್ಕೆ ಎದುರಾಗಿ ಇದೆ. ಅದರ ಬದಿಗೆ ಪುಟ್ಟ ಖಡ್ಗವಿದೆ. ಅಮ್ಮನವರ ನಿತ್ಯಪೂಜೆಗಾಗಿ ಚವ್ಹಾಣ ಮನೆತನದವರೇ ಆದ ಒಬ್ಬ ಅರ್ಚಕರಿದ್ದಾರೆ. ಇದಲ್ಲದೆ ಮರಾಠ ಸಮುದಾಯದ ಆರಾಧ್ಯ ದೈವ ಅಂಬಾ ಭವಾನಿಯ ಮುಖ್ಯ ದೇವಾಲಯವು ಗೀತಾ ರಸ್ತೆಯಿಂದ ಶ್ರೀರಾಮ ರಸ್ತೆಗೆ ಕಡೆಗೆ ಸಾಗುವ ಸಂಪರ್ಕ ತಿರುವಿನಲ್ಲಿದೆ. ಅದು ಅಜ್ಜಂಪುರದ ಇಡೀ ಮರಾಠ ಸಮುದಾಯಕ್ಕೆ ಸೇರಿದ್ದಾಗಿದೆ. 1664 ರಲ್ಲಿ ಕರ್ನಾಟಕದಲ್ಲಿದ್ದ ಷಹಾಜಿ ಮಹಾರಾಜ್ (ಛತ್ರಪತಿ ಶಿವಾಜಿ ಮಹಾರಾಜರ ತಂದೆ) ಚನ್ನಗಿರಿ ಪಾಳೆಪಟ್ಟಿನ ವ್ಯಾಪ್ತಿಯ ಅರಣ್ಯದಲ್ಲಿ ಬೇಟೆಯಾಡುವ ಸಂದರ್ಭದಲ್ಲಿ ದುರಂತಕ್ಕೀಡಾಗಿ ಮರಣ ಹೊಂದುತ್ತಾರೆ. ಚನ್ನಗಿರಿ ತಾಲೂಕಿನ ಹೊದಿಗೆರೆಯಲ್ಲಿ ಅವರ ಸಮಾಧಿ ಇದೆ. ಷಹಾಜಿಯವರ ಜೊತೆ ಬಂದ ಮರಾಠ ಯೋಧರು ದಾವಣಗೆರೆ, ಚನ್ನಗಿರಿ, ಅಜ್ಜಂಪುರ, ಬೀರೂರು ಮುಂತಾದ ಸ್ಥಳಗಳಲ್ಲಿ ನೆಲೆಯೂರಿದರು. ಅವರ ಮೂಲದವರು ಇಲ್ಲಿಯವರೇ ಎನ್ನುವಷ್ಟು ಬೆರೆತು, ಕನ್ನಡ ಮಾತೃಭಾಷೆಯ ಮರಾಠಿಗರಾಗಿದ್ದಾರೆ.
ದೇವರಮನೆ ತುಳಜಾಭವಾನಿ ಅಮ್ಮನವರ ವಿಜಯದಶಮಿ ಉತ್ಸವ :
ಈ ಸಂದರ್ಭದಲ್ಲಿ ಊರಿನ ಚವ್ಹಾಣ ಸೋದರ ಬಂಧುಗಳೆಲ್ಲ ಸೇರುತ್ತಾರೆ. ಬೀರೂರು, ದಾವಣಗೆರೆ, ಶಿವಮೊಗ್ಗ, ಬೆಂಗಳೂರು ಮತ್ತು ಭದ್ರಾವತಿ ಮುಂತಾದ ಕಡೆ ಇರುವ ಅಜ್ಜಂಪುರ ಮೂಲದ ಚವ್ಹಾಣ ಸೋದರ ಬಂಧುಗಳು ಆಗಮಿಸಿ ಅಜ್ಜಂಪುರದ ಬಂಧುಗಳ ಜೊತೆ ಸೇರಿ, ಉತ್ಸವದಲ್ಲಿ ಭಾಗಿಯಾಗುತ್ತಾರೆ. ವಿಜಯದಶಮಿಯ ದಿನ ತುಳಜಾಭವಾನಿ ಅಮ್ಮನವರ ಖಡ್ಗವನ್ನು ಬುಡಕಟ್ಟಿನ ಒಬ್ಬ ಚವ್ಹಾಣ ಪುರುಷನು ಹಿಡಿದು ದೇವರಮನೆಯಿಂದ ಹೊರತರುತ್ತಾನೆ. ಅವರ ಜೊತೆ ಚಿಂಗಹಳೆ ಊದುತ್ತಾ ಒಬ್ಬ ದಾಸಪ್ಪ, ಜೋಗಮ್ಮನ ಪಡ್ಲಿಗೆ(ಎಲ್ಲಮ್ಮದೇವಿ ಇರುವ ಚಿಕ್ಕ ಕುಕ್ಕೆ) ಹೊತ್ತ ಚವ್ಹಾಣ ಕುಟುಂಬದ ಮಹಿಳೆಯು ಸೇರಿಕೊಂಡು, ದೇವರಮನೆಯ ಮುಂದೆ ನಿಲ್ಲುತ್ತಾರೆ. ಅವರ ಪಾದಪೂಜೆ ನಡೆಯುತ್ತದೆ. ನಂತರ ಚವ್ಹಾಣ ಬಂಧುಗಳು ಬಾವಿಗೆ ತೆರಳಿ ಗಂಗೆ ತರುತ್ತಾರೆ. ಅದೇ ದಿನ ಸ್ಥಳೀಯವಾಗಿ ಬೆಳೆಯುವ ಧಾನ್ಯಗಳನ್ನು ಗಂಗೆಯಲ್ಲಿ ನೆನೆಸಿ ಮೊಳಕೆ ಹಾಕುತ್ತಾರೆ. ಒಂಭತ್ತು ದಿನಗಳ ನಂತರ 'ಬೆಳಸು'ಗಳನ್ನು ಪೂಜೆ ಮಾಡಿ, ವಿಸರ್ಜಿಸುತ್ತಾರೆ. ಈ ಆಚರಣೆಯಲ್ಲಿ ಆ ವರ್ಷದ ಬೆಳೆಗಳು ಹುಲುಸಾಗಿ ಬರಲೆಂಬ ಉದ್ದೇಶವಿರಬಹುದು. ಐತಿಹಾಸಿಕವಾಗಿ ಯೋಧರಾಗಿದ್ದ ಮರಾಠ ಚವ್ಹಾಣರು ಕರ್ನಾಟಕದಲ್ಲಿ ಉಳಿದು, ಕೃಷಿಯನ್ನು ವೃತ್ತಿಯಾಗಿ ಸ್ವೀಕರಿಸಿದರು. ಹಾಗಾಗಿ ಅವರ ಆಚರಣೆಗಳು ರೈತಾಪಿ ಬದುಕಿನೊಂದಿಗೆ ತಳಕುಹಾಕಿಕೊಂಡಿರುವ ಸಾಧ್ಯತೆ ಇದೆ. ವರ್ಷದಲ್ಲಿ ಅನೇಕ ಬಾರಿ ದೇವರಮನೆಯ ಶ್ರೀ ತುಳಜಾಭವಾನಿ ಅಮ್ಮನವರ ಆರಾಧಕರು ಹೀಗೆ ವಿವಿಧ ಆಚರಣೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಶ್ರೀ ತುಳಜಾಭವಾನಿ ದೇವರಮನೆಯು ಅಜ್ಜಂಪುರದ ಈ ಚವ್ಹಾಣ ಸೋದರ ಕುಟುಂಬಗಳ ಅಸ್ಮಿತೆಯಾಗಿ ಉಳಿದಿದೆ.
ಅಜ್ಜಂಪುರದ ಪೂರ್ವ ದಿಕ್ಕಿನಲ್ಲಿ ಪುರದೇವತೆ ಶ್ರೀ ಕಿರಾಳಮ್ಮನ ದೇವಾಲಯವಿದ್ದು, ಚೈತ್ರ ಮಾಸದಲ್ಲಿ ರಥೋತ್ಸವ ಮತ್ತು ಆಶ್ವಯುಜ ಮಾಸದಲ್ಲಿ ವಿಜಯದಶಮಿ ಉತ್ಸವಗಳು ನಡೆಯುತ್ತವೆ. ಈ ದೇವಾಲಯದ ಆಚರಣೆಗಳಿಗೆ ಕೊಂಡಿಯಾಗಿರುವ ಶ್ರೀ ಕಿರಾಳಮ್ಮ ದೇವರಮನೆಯ ವಿಚಾರವು ಇಂದಿನ ಬಹುಪಾಲು ಜನರಿಗೆ ತಿಳಿದಿರಲಾರದು. ಈ ದೇವರಮನೆಯಿಂದಲೇ ಕಿರಾಳಮ್ಮ ತೇರಿನ ಸಂದರ್ಭದಲ್ಲಿ ಸಿಡಿಗೆ ಸಂಬಂಧಿಸಿದ ಆಚರಣೆಗಳು ಪ್ರಾರಂಭವಾಗುತ್ತವೆ. ಪಟ್ಟಣದ ಗಂಗಾಮತಸ್ಥರ ಒಂಭತ್ತು ಕುಟುಂಬಗಳಿಗೆ ಸೇರಿದ ದೇವರಮನೆಯು ತನ್ನದೇ ಆದ ವಿಶಿಷ್ಟತೆ ಹೊಂದಿದೆ.
ಶ್ರೀ ಕಿರಾಳಮ್ಮ ದೇವರಮನೆ : ಈ ದೇವರಮನೆಯು ಕೂಡ ಭವಾನಿ ರಸ್ತೆಯಲ್ಲಿದೆ(ಮೊದಲಿನ ಸುಣ್ಣಗಾರರ ಬೀದಿ). ದಕ್ಷಿಣಕ್ಕೆ ಪ್ರವೇಶದ್ವಾರವಿರುವ ತಗಡಿನ ಮಾಡುಳ್ಳ ಮನೆಯ ಪಶ್ಚಿಮದ ಗೋಡೆಗೆ ಲಗತ್ತಾಗಿ ಶ್ರೀ ಕಿರಾಳಮ್ಮನ ಬೆಳ್ಳಿಯ ಮೂರ್ತಿ ಇದೆ. ಅಮ್ಮನ ಮುಖಪದ್ಮವನ್ನು ತಾಮ್ರದ ಕೀಲುಗಳಿಗೆ ಹೊಂದಿಸಲಾಗಿದೆ. ಒಂದು ಕಾಲಘಟ್ಟದಲ್ಲಿ(ಇಪ್ಪತ್ತನೆಯ ಶತಮಾನದ ಎಪ್ಪತ್ತರ ದಶಕದಲ್ಲಿ) ಈ ಕೀಲುಗಳು ಸಿಡಿ ಆಚರಣೆ ಕೈಬಿಟ್ಟ ಪರಿಶಿಷ್ಟ ಜನಾಂಗದವರಿಂದ ವರ್ಗಾಯಿಸಲ್ಪಟ್ಟವು. ಕಿರಾಳಮ್ಮನ ಜೊತೆಗೆ ಮೂವರು ಉಪದೇವತೆಗಳಿದ್ದಾರೆ. ಅವರನ್ನು ಚೌಡೇಶ್ವರಿಗಳೆಂದು ಕರೆಯುತ್ತಾರೆ. ಇವು ಕಲ್ಲಿನ ಆಕಾರರಹಿತ ರಚನೆಗಳು. ತಾಮ್ರದ ಲೋಹದ ಕಣ್ಣುಗಳನ್ನು ಜೋಡಿಸಲಾಗಿದೆ. ಅಚ್ಚರಿಯ ಹೋಲಿಕೆ ಎಂದರೆ ಜಮ್ಮವಿನಲ್ಲಿರುವ ವೈಷ್ಣೋದೇವಿ ಮಂದಿರದಲ್ಲಿರುವಂತೆ ಇಲ್ಲಿ ಕೂಡ ಮೂವರು ದೇವಿಯರ ಮೂರ್ತಿಗಳಿರುವುದು!
ಗಂಗಾಮತಸ್ಥ(ಬೆಸ್ತ) ಬಂಧುಗಳು ಮೊದಲಿಗೆ ಪುರದೇವತೆ ಕಿರಾಳಮ್ಮ ದೇವಿಯ ಪೂಜಾರಿಗಳಾಗಿದ್ದರು. ಅವರೆಲ್ಲರೂ ದೇವರಮನೆಗೆ ಸಂಬಂಧಿಸಿದ ಭಕ್ತರೇ ಆಗಿದ್ದಾರೆ. ಇಂದು ಕಿರಾಳಮ್ಮನ ಸಿಡಿ ಉತ್ಸವದಲ್ಲಿ ಗಂಗಾಮತಸ್ಥರ ಬಾಲಕರು ಪಾಲ್ಗೊಳ್ಳುತ್ತಾರೆ ಎಂದು ಖಾಸಗಿ ಪ್ರೌಢಶಾಲಾ ಶಿಕ್ಷಕ ಪಿ.ಜಯರಾಂ. ಗಂಗಾಮಾತೆಯ ಆರಾಧಕರಾದ ಇವರು ಮಹಾಭಾರತದ ಭೀಷ್ಮನನ್ನು ತಮ್ಮ ಜನಾಂಗದ ಮಹಾತ್ಮನೆಂದು ಭಾವಿಸುತ್ತಾರೆ. ಹಾಗೆಯೇ ಕನ್ನಡನಾಡಿನಲ್ಲಿ ಹನ್ನೆರಡನೆಯ ಶತಮಾನದಲ್ಲಿ ಇದ್ದ ಶರಣ ಅಂಬಿಗರ ಚೌಡಯ್ಯನನ್ನು ತಮ್ಮ ಧಾರ್ಮಿಕ ನಾಯಕನೆಂದು ಪೂಜ್ಯ ಸ್ಥಾನ ಕೊಡುತ್ತಾರೆ. ಬಸವಣ್ಣನ ಸಮಕಾಲೀನನಾದ ಅಂಬಿಗರ ಚೌಡಯ್ಯನು ಸಹ ಅನೇಕ ವಚನಗಳನ್ನು ರಚಿಸಿದ್ದಾನೆ. ಹಾವೇರಿ ಜಿಲ್ಲಾ ಅದೇ ತಾಲೂಕಿನ ನರಸೀಪುರ(ಕಂಚಾರಗಟ್ಟ)ದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠವಿದೆ. ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮಿಗಳು ಈ ಪೀಠದ ಅಧ್ಯಕ್ಷರಾಗಿದ್ದಾರೆ. ಪೂರ್ವದಲ್ಲಿ ವೃತ್ತಿಯಿಂದ ಸುಣ್ಣಗಾರರಾದ ಅಜ್ಜಂಪುರದ ಗಂಗಾಮತಸ್ಥರು ಬೆಸ್ತ(ಮೀನುಗಾರ) ಜಾತಿಯವರಾಗಿರುತ್ತಾರೆ. ಪೂರ್ವದಲ್ಲಿ ಈ ಸಮುದಾಯದವರೇ ಪುರದೇವತೆ ಶ್ರೀ ಕಿರಾಳಮ್ಮ ದೇವಿಯ ಪೂಜಾರರಾಗಿದ್ದರು. ಈ ಪೂಜಾರರ ವಂಶಸ್ಥರ ಒಂಭತ್ತು ಮನೆಯವರು ದೇವರಮನೆಯ ಕಿರಾಳಮ್ಮನ ಪೂಜಾರಿಕೆ ವ್ಯವಸ್ಥೆಯು ಮಾಸಿಕ ಪರ್ಯಾಯದ ಪ್ರಕಾರ ಅನೂಚಾನವಾಗಿ ರೂಢಿಯಲ್ಲಿದೆ. ದೀಪಾವಳಿ ಹಬ್ಬದಲ್ಲಿ ಪೂಜಿಸುವ ಕೆರಕಗಳನ್ನು ಒಂಭತ್ತು ಮನೆಯವರು ಒಟ್ಟುಮಾಡಿ ದೇವರಮನೆಗೆ ತಂದು ವಿಸರ್ಜಿಸುತ್ತಾರೆ.
ಪುರದೇವತೆ ಕಿರಾಳಮ್ಮನ ತೇರಿನ ಸಂದರ್ಭದಲ್ಲಿ ಸಿಡಿ ಸೇವೆಯ ಭಾಗವಾಗಿ ಕಂಕಣ, ಬೇವಿನಸೀರೆ, ಕೋಲಬಾನ ಆಚರಣೆಗಳನ್ನು ಇದೇ ದೇವರಮನೆಯಲ್ಲಿ ಗಂಗಾಮತಸ್ಥರು ಕೈಗೊಳ್ಳುತ್ತಾರೆ. ವಿಜಯನಗರೋತ್ತರ ತರೀಕೆರೆ ಪಾಳೇಗಾರರ ಕಾಲದ ಮೂಲ ಕಿರಾಳಮ್ಮನ ಗುಡಿಯ ನಿರ್ಮಾಣದ ನಂತರ ಈ ದೇವರಮನೆ ಪ್ರಾರಂಭವಾಗಿರಬೇಕು. ಹಾಗಾಗಿ ದೇವರಮನೆಯು ಒಂದು ಶತಮಾನ ಕಂಡಿರುವ ಸಾಧ್ಯತೆ ಇದೆ.ಕಿರಾಳಮ್ಮ ದೇವರಮನೆಯ ಅಭಿವೃದ್ಧಿ ಕಾರ್ಯಗಳನ್ನು ಪೂಜಾರ ವಂಶಸ್ಥ ಒಂಭತ್ತು ಮನೆಗಳ ಸೋದರ ಕುಟುಂಬಗಳೇ ನಿರ್ವಹಿಸುತ್ತಾರೆ.
ಚಿತ್ರ-ಲೇಖನ : ಅಪೂರ್ವ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ