115 ಅಜ್ಜಂಪುರಕ್ಕೆ ರಾಜ್ಯೋತ್ಸವ ಪ್ರಶಸ್ತಿಯ ಗರಿ : ಮಂಜುನಾಥ ಅಜ್ಜಂಪುರ


ಆತ್ಮೀಯರೇ,
ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಶ್ರೀ ಸುಬ್ರಹ್ಮಣ್ಯ ಶೆಟ್ಟರು 1968ರಲ್ಲಿ ಅಜ್ಜಂಪುರದಲ್ಲಿ  ಪ್ರಶಸ್ತಿ ಪುರಸ್ಕೃತರು. ಇದೀಗ 53 ವರ್ಷಗಳ ನಂತರ ಬಾಲ್ಯಮಿತ್ರ ಮಂಜುನಾಥ ಅಜ್ಜಂಪುರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಇದು ಅಜ್ಜಂಪುರದ ಹಿರಿಮೆಯನ್ನು ಹೆಚ್ಚಿಸಿದೆ. ಅವರಿಗೆ ಅಭಿನಂದನೆಗಳು.

ರಾಷ್ಟ್ರೀಯ ಚಿಂತನೆಯೇ ಪ್ರಧಾನವಾಗಿ, ದೇಶದ ಐತಿಹಾಸಿಕತೆಯ ಮಹತ್ವವನ್ನು ಬಿಂಬಿಸುವ ಬರಹಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮುದ್ರಣ ಮಾಧ್ಯಮವಲ್ಲದೆ, ವಿದ್ಯುನ್ಮಾನ ಮಾಧ್ಯಮದಲ್ಲೂ ಸಕ್ರಿಯರಾಗಿ ತೊಡಗಿಸಿಕೊಂಡಿರುವದರಿಂದ, ಅವರ ಓದುಗರ ವ್ಯಾಪ್ತಿ ವಿಸ್ತಾರವಾಗಿದೆ. 

ಮಂಜುನಾಥರ ಬಗ್ಗೆ ನನ್ನ ಇನ್ನೋರ್ವ ಲೇಖಕ ಮಿತ್ರ ಅಪೂರ್ವ ಅವರು ಅಭಿನಂದಿಸಿ ಬರೆದಿರುವ ಲೇಖನ ನಿಮ್ಮ ಓದಿಗೆಂದು ಇಲ್ಲಿದೆ. ಇವರ ಗೌರವ ಸಂಪಾದಕತ್ವದಲ್ಲಿ ವಾಯ್ಸ್ ಆಫ್
ಇಂಡಿಯಾ ಮಾಲಿಕೆಯು ಸಾದರಪಡಿಸುತ್ತಿರುವ ಪುಸ್ತಕ ಸರಣಿಯಲ್ಲಿ ಶ್ರೀ ಸೀತಾರಾಮ ಗೋಯೆಲ್ ರ ''ಹಿಂದೂ ಧರ್ಮ ದಿಗ್ಬಂಧನದಲ್ಲಿ" ಎಂಬ ಇಂಗ್ಲಿಷ್ ಬರಹವನ್ನು ನಾನು ಅನುವಾದ ಮಾಡುವಂತಾದುದು ನನಗೆ ಸ್ಮರಣಾರ್ಹ ಸಂಗತಿ.
-೦-೦-೦-೦-೦-೦-


ಕರ್ನಾಟಕ ರಾಜ್ಯ ಸರ್ಕಾರವು ನೀಡುವ ಸಾಹಿತ್ಯ ಕ್ಷೇತ್ರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯು ಈ ಬಾರಿ ಅಂಕಣ ಬರಹಗಾರರಾದ


ಮಂಜುನಾಥ ಅಜ್ಜಂಪುರ ಅವರಿಗೆ ಬಂದಿರುವುದು ಅತ್ಯಂತ ಸಂತಸದ ಸುದ್ದಿ. ನಮ್ಮೆಲ್ಲರ ಪ್ರೀತಿಯ ಗೆಳೆಯರು ಎಂಬುದು ‌ಕ್ಲೀಷೆಯ ಮಾತಾದೀತು. 

ವೈಚಾರಿಕ ಲೇಖನಗಳ ಕ್ಷೇತ್ರದಲ್ಲಿ ಮಂಜುನಾಥ್ ಅವರು ನಾನು ಅತ್ಯಂತ ಇಷ್ಟಪಡುವ ಲೇಖಕರು. ಅವರು ವಿಸ್ತೃತ ಅಧ್ಯಯನದಿಂದ ಇತಿಹಾಸ, ಸಂಸ್ಕೃತಿ ಹಾಗೂ ಕಲೆ-ಸಾಹಿತ್ಯಗಳ ಆಳವಾದ ಜ್ಞಾನವನ್ನು ಪಡೆದಿದ್ದಾರೆ. ಹಾಗಾಗಿ ಅವರು ೯೦೦ ಕ್ಕೂ ಮಿಕ್ಕಿದ ಲೇಖನಗಳಲ್ಲಿ ಆ ಜ್ಞಾನದ ಪ್ರಭಾವವನ್ನು ನಾವು ಕಾಣಬಹುದು. ಬೆರಳೆಣಿಕೆಯಷ್ಟು ಸಣ್ಣ ಕಥೆಗಳನ್ನು ಪ್ರಾರಂಭದಲ್ಲಿ ಬರೆದಿದ್ದಾರೆ. ಒಂದು ಕಥಾ ಸಂಕಲನವನ್ನು(ಕಥಾ ಸಂಭ್ರಮ) ಸಹ ಸಂಪಾದಿಸಿದ್ದಾರೆ. ಕಥೆ-ಕವನಗಳ ಸಾಹಿತ್ಯ ಪ್ರಕಾರಕ್ಕಿಂತ ಪ್ರಬಂಧ ಮಾದರಿಯ ಸಾಹಿತ್ಯ ಸೃಷ್ಟಿಗೆ ಅವರ ಒಲವಿರುವುದು ಸ್ಪಷ್ಟ. ಎರಡು ಜೀವನ ಚರಿತ್ರೆಗಳನ್ನು ಅವರು ಬರೆದಿದ್ದಾರೆ. 

ಅವರ ಅಂಕಣ ಲೇಖನಗಳದ್ದೇ ಆದ ಮೂರು ಸಂಕಲನಗಳು(ಅಕ್ಷರ ಲೋಕದ ಅಂಕಣ-ಸಂಭ್ರಮ, ರೋಥಾಂಗ್ ಪಾಸ್ ಹಿಮರಾಶಿಯ ನಡುವೆ ಬಿಸಿಬಿಸಿ ಕಾಫಿ, ಕತ್ತಲಿನಿಂದ ಬೆಳಕಿನೆಡೆಗೆ) ಪ್ರಕಟವಾಗಿವೆ. ಮೊದಲಿನಿಂದಲೂ ಅವರು ರಾಷ್ಟ್ರೀಯ ವಿಚಾರಧಾರೆಗೆ ಒಲಿದಿರುವುದು ಕಂಡುಬರುತ್ತದೆ(ಹದಿಹರೆಯದ ಪ್ರಾರಂಭದಲ್ಲೇ ಗಾಂಧಿ ಜನ್ಮಶತಾಬ್ದಿ ಸಂದರ್ಭದಲ್ಲಿ ಗಾಂಧೀಜಿ ಕುರಿತ ಪ್ರಬಂಧ ಬರವಣಿಗೆ). 1972 ರಲ್ಲಿ ಡಾ.ಸೂರ್ಯನಾಥ ಕಾಮತ್ ಸಂಪಾದಕತ್ವದ 'ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿ'ಗಾಗಿ ಬರೆದ ಅಜ್ಜಂಪುರದ ಸ್ವಾತಂತ್ರ್ಯ ಹೋರಾಟಗಾರರ ಕುರಿತ ಲೇಖನವು ಕೂಡ ಅವರ ಸಾಹಿತ್ಯದ ರಚನೆಯಲ್ಲಿ ಹಿಡಿಯಬಹುದಾದ ದಾರಿಯ ಮುನ್ಸೂಚನೆಯಂತಿದೆ. .

ನಾಡಿನ ಹಲವು ನಿಯತಕಾಲಿಕೆಗಳಲ್ಲಿ ಅಂಕಣ ಬರಹಗಾರರಾಗಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇತಿಹಾಸ, ಸಂಸ್ಕೃತಿ, ಸಾಹಿತ್ಯ, ಸಂಗೀತ, ನಾಟಕ-ಸಿನೆಮಾ, ಪ್ರವಾಸ, ಪುಸ್ತಕ ಪರಿಚಯ ಇತ್ಯಾದಿ ವಿವಿಧ ವಿಚಾರಗಳ ಕುರಿತು ಲೇಖನಗಳನ್ನು ‌ಬರೆದಿದ್ದಾರೆ. ಇತಿಹಾಸ, ಸಂಸ್ಕೃತಿ ಮತ್ತು ಸಾಹಿತ್ಯ ಕುರಿತ ನೂರಾರು ಲೇಖನಗಳಲ್ಲಿ ಅವರು ರಾಷ್ಟ್ರೀಯ ವಿಚಾರಧಾರೆಗೆ ಸಹಜವಾಗಿ ಒಲಿದಿರುವುದು ಕಂಡುಬಂದಿದೆ. 

ರಾಷ್ಟ್ರೀಯ ವಿಚಾರಧಾರೆಯು ಮಂಜುನಾಥ ಅಜ್ಜಂಪುರ ಅವರಿಗೆ ಪ್ರಧಾನ ನೈತಿಕ ನೆಲೆಗಟ್ಟಾಗಿದೆ. ನೈತಿಕ-ಆಧ್ಯಾತ್ಮಿಕ-ಜನತಂತ್ರದ ಮೌಲ್ಯಗಳು ಉಳಿಯಲು ಭಾರತದಲ್ಲಿ ರಾಷ್ಟ್ರೀಯ ವಿಚಾರಧಾರೆಯ ಅಸ್ತಿತ್ವ ಅತಿ ಮುಖ್ಯ ಎಂದು ಅವರು ಪರಿಗಣಿಸುತ್ತಾರೆ. ಆದ್ದರಿಂದಲೇ ವಾಯ್ಸ್ ಆಫ್ ಇಂಡಿಯಾ ಸಾಹಿತ್ಯ ಸರಣಿಯ ಗೌರವ ಸಂಪಾದಕರಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. 

ಸ್ವತಃ ಮಂಜುನಾಥ್ ಅವರೇ ಅರುಣ್ ಶೌರಿಯವರ ಎಮಿನೆಂಟ್ ಹಿಸ್ಟಾರಿಯನ್ಸ್ (ಕನ್ನಡ : ಮಹಾನ್ ಇತಿಹಾಸಕಾರರು), ಸೀತಾರಾಮ ಗೋಯಲ್, ರಾಮ ಸ್ವರೂಪ್ ಅವರ ಕೃತಿಗಳು ಸೇರಿದಂತೆ ಕೆಲವನ್ನು ಇಂಗ್ಲಿಷ್ ನಿಂದ ಅನುವಾದ ಮಾಡಿದ್ದಾರೆ. ಪ್ರಾರಂಭದಲ್ಲಿ ಬರೆದ 'ಮತ್ತೆ ಆ ಸಮೃದ್ಧಿಯೆಡೆಗೆ' ಅನುವಾದಿತ ಕೃತಿಯು ಭಾರತದ ಪ್ರಾಚೀನ ಕೃಷಿಯ ಸಮೃದ್ಧಿಯನ್ನು ಚಿತ್ರಿಸುತ್ತದೆ.

ಈ ಸಲದ ರಾಜ್ಯೋತ್ಸವ ಪ್ರಶಸ್ತಿಗಳಿಗೆ ರಾಜ್ಯ ಸರ್ಕಾರ ಜನಾಭಿಪ್ರಾಯ ಕೂಡ ಸಂಗ್ರಹಿಸಿದೆ. ಲೇಖಕ ಮಂಜುನಾಥ ಅಜ್ಜಂಪುರ ಅವರು ಸಾಹಿತ್ಯ ಕ್ಷೇತ್ರದ ಪ್ರಶಸ್ತಿಗೆ ಭಾಜನರಾಗಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಈ ಲೇಖನ ಪ್ರಸ್ತುತಿಯ ಮೂಲಕ ಅವರಿಗೆ ಗೌರವಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವೆ. 
                                                          - ಅಪೂರ್ವ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

95. ಲಾವಣ್ಯ ಕವಿರತ್ನ ರಾಯಸಂ ಶ್ರೀ ಸಿ.ಬಿ.ಹಣ್ಣೆ ಸಂಜೀವಯ್ಯ

126. ಅಪೂರ್ವ ಕಥೆ ಕವನಗಳ ಅವಲೋಕನ

ಅಜ್ಜಂಪುರ ಸೀತಾರಾಂ